ವೀರ ಸಾವರ್ಕರ್. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗಬೇಕಿದ್ದವರು. ಅಂಡಮಾನ್ ಜೈಲಿನಲ್ಲಿ ದಶಕಗಳ ಕಾಲ (ಕಾಲಪಾನಿ) ಕರಿನೀರಿನ ಶಿಕ್ಷೆ ಅನುಭವಿಸಿದವರು. ಮಹಾರಾಷ್ಟ್ರದಲ್ಲಿ ದಲಿತರಿಗೆ ದೇವಸ್ಥಾನಗಳ ಪ್ರವೇಶ, ಸಾಮೂಹಿಕ ಭೋಜನ, ಅಂತಾರ್ಜಾತಿ ವಿವಾಹಗಳಂತಹ ಕ್ರಾಂತಿ ಮಾಡಿದವರು. ಈ ಕಾರಣಕ್ಕಾಗಿಯೇ ಹಲವರ ವಿರೋಧ ಕಟ್ಟಿಕೊಂಡರೂ, ಆರ್.ಎಸ್.ಎಸ್. ಜೊತೆಗೆ ನಿಂತಿದ್ದವರು. ಸಾವರ್ಕರ್ ಅವರ ಜೀವನ ಹಲವು ಮಜಲುಗಳಿವೆ. ಇಂಗ್ಲೆಂಡಿನಲ್ಲಿ ಓದುವಾಗ ಕ್ರಾಂತಿಕಾರಿಯಾಗಿ ಅಜ್ಞಾತವಾಗಿ ಚಳವಳಿ ರೂಪಿಸುವ ಸಾವರ್ಕರ್, ಜಲಿಯನ್ ವಾಲಾಬಾಗ್‍ನಲ್ಲಿ ಭಾರತೀಯರನ್ನು ಕೊಂದ ಅಧಿಕಾರಿಗಳ ಹತ್ಯೆ ಮಾಡಿಸಿದ್ದವರು. ಅದಾದ ನಂತರ ಭಾರತಕ್ಕೆ ಬಂದವರು ಶಸ್ತ್ರಾಸ್ತ್ರ ಸಂಗ್ರಹ ಸೇರಿದಂತೆ ಬ್ರಿಟಿಷರ ನಿದ್ದೆಗೆಡಿಸಿದ್ದವರು. ಈ ಕಾರಣಕ್ಕಾಗಿಯೇ ಕಾಲಾಪಾನಿ ಶಿಕ್ಷೆ ಅನುಭವಿಸಿದವರು. ಇವತ್ತಿಗೂ ಅಂಡಮಾನ್‍ಗೆ ಹೋದರೆ ಅಲ್ಲಿನ ಜೈಲುಗಳಲ್ಲಿ ಸಾವರ್ಕರ್ ಗೋಡೆಯ ಮೇಲೆ ಬರೆದಿದ್ದ ಬರಹಗಳನ್ನು ರಕ್ಷಿಸಿ ಇಡಲಾಗಿದೆ. ಕ್ಷಮೆಯಾಚಿಸಿ ಹೊರಬಂದರು.
ಬ್ರಿಟಿಷರಿಂದ ಪಿಂಚಣಿ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬುದು ಕಾಂಗ್ರೆಸ್ಸಿಗರ ವಾದ. ಆದರೆ ಹಿಂದೂಗಳನ್ನು ಒಟ್ಟುಗೂಡಿಸದೇ ಇದ್ದರೆ ಸ್ವಾತಂತ್ರ್ಯ ಬಂದೂ ಕೂಡಾ ವ್ಯರ್ಥ.ಹೀಗಾಗಿ ಹಿಂದೂಗಳಲ್ಲಿರುವ ಜಾತಿ, ಅಸ್ಪøಶ್ಯತೆ ಸೇರಿಂತೆ ಹಲವು ಕೆಟ್ಟ ಪದ್ಧತಿಗಳನ್ನು ಕಿತ್ತೊಗೆಯಬೇಕು ಎಂದು ಪಣ ತೊಟ್ಟ ಸಾವರ್ಕರ್, ಮಹಾರಾಷ್ಟ್ರದಲ್ಲಿ ಚಳವಳಿಯನ್ನೇ ಆರಂಭ ಮಾಡಿದರು. ಪಿಂಚಣಿ ಬೇಡ ಎಂದರೂ ಜೈಲು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದರೂ ಜೈಲು. ಜೈಲಿನಲ್ಲಿ ಕೊಳೆತು ಸಾಯವುದಕ್ಕಿಂತ ಹಿಂದೂ ಧರ್ಮದ ಲೋಪಗಳನ್ನು ತಿದ್ದೋಣ ಎಂದು ಹೊರಟರು. ತಪ್ಪೇನಿದೆ ಎನ್ನುವುದು ಸಾವರ್ಕರ್ ಬೆಂಬಲಿಗರ ವಾದ.
ಆದರೂ.. ಕಾಂಗ್ರೆಸ್ ನಾಯಕರು ಸಾವರ್ಕರ್ ಅವರನ್ನು ದೇಶದ್ರೋಹಿಯೆಂದೇ ಪರಿಗಣಿಸುತ್ತಾರೆ. ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರವೂ ಇತ್ತು ಎನ್ನುತ್ತಾರೆ. ಸಾವರ್ಕರ್ ಅವರನ್ನು ಆರ್‍ಎಸ್‍ಎಸ್ ಹಾಗೂ ಬಿಜೆಪಿ ಆರಾಧಿಸುತ್ತವೆ. ಎಡಪಕ್ಷಗಳು, ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿಗಳು ಸಾವರ್ಕರ್ ಅವರನ್ನು ಶತ್ರುವಿನಂತೆ ಕಾಣುತ್ತವೆ. ಇಂತಹ ವಿವಾದಗಳೂ ಇರುವ ಸಾವರ್ಕರ್ ಅವರ ಬಯೋಪಿಕ್ ತಯಾರಾಗುತ್ತಿದೆ. ಕನ್ನಡದಲ್ಲಿಯೇ ಬರುತ್ತಿದೆ. ಸಾವರ್ಕರ್ ಪಾತ್ರದಲ್ಲಿ ಸುನಿಲ್ ರಾವ್ ಕಾಣಿಸಿಕೊಳ್ಳಲಿದ್ದಾರಂತೆ.
ವೀರ್ ಸಾವರ್ಕರ್ ಬಯೋಪಿಕ್ ಸಿನಿಮಾದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಆಗಿ ನಟ ಸುನೀಲ್ ರಾವ್ ಕಾಣಿಸಿಕೊಳ್ಳಲಿದ್ದಾರೆ. ಮಹಾತ್ಮ ಗಾಂಧಿ ಪಾತ್ರದಲ್ಲಿ ಹಿಂದಿ ನಟ ಶರ್ಮಾ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಪಲ್ಲಕ್ಕಿ ರಾಧಾಕೃಷ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ವೀರ್ ಸಾವರ್ಕರ್ ಲುಕ್ನಲ್ಲಿ ನಟ ಸುನೀಲ್ ರಾವ್ ಅವರ ಫೋಟೋಶೂಟ್ ನಡೆದಿದೆ. ಇದೇ ತಿಂಗಳು ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗುವ ಸಾಧ್ಯತೆ ಇದೆ. ಇದೇ ತಿಂಗಳ ಕೊನೆಯ ವಾರದಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
ಹಿಂದಿಯಲ್ಲಿ ಈಗಾಗಲೇ ಸಾವರ್ಕರ್ ಬಯೋಪಿಕ್ ಶುರುವಾಗಿದೆ. ಆ ಸಿನಿಮಾಗೂ ನಮಗೂ ಸಂಬಂಧವಿಲ್ಲ. ಆ ತಂಡವೇ ಬೇರೆ. ನಮ್ಮ ತಂಡ ಮತ್ತು ಕಲಾವಿದರೇ ಬೇರೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಮಾರ್ಚ್ 25 ರಿಂದ ಶೂಟಿಂಗ್ ಶುರು ಮಾಡುತ್ತೇವೆ. ಇದೊಂದು ಭಾರೀ ಬಜೆಟ್ ಸಿನಿಮಾ ಆಗಲಿರಲಿದೆ ಎಂದಿದ್ದಾರೆ ಡೈರೆಕ್ಟರ್ ರಾಧಾಕೃಷ್ಣ ಪಲ್ಲಕ್ಕಿ.
ವೀರ್ ಸಾವರ್ಕರ್ ಅವರ ಬಯೋಪಿಕ್ ಸಿನಿಮಾದಲ್ಲಿ ಬಹಳ ಮುಖ್ಯ ಪಾತ್ರವೊಂದಿದೆ. ಆ ಪಾತ್ರವನ್ನ ಹಿಂದಿ ನಟ ಅನುಪಮ್ ಖೇರ್ ನಿರ್ವಹಿಸಬೇಕು ಅನ್ನೋದು ನಿರ್ದೇಶಕರ ಆಸೆ. ಹೀಗಾಗಿ, ಅನುಪಮ್ ಖೇರ್ ಅವರನ್ನು ಸಂಪರ್ಕಿಸಲು ಪಲ್ಲಕ್ಕಿ ರಾಧಾಕೃಷ್ಣ ಪ್ರಯತ್ನಿಸುತ್ತಿದ್ದಾರೆ.
ಸುನೀಲ್ ರಾವ್ ಜೊತೆಗೆ ಸಾಯಿ ಕುಮಾರ್, ರವಿಶಂಕರ್, ಅನು ಪ್ರಭಾಕರ್, ರಂಗಾಯಣ ರಘು ಮುಂತಾದವರು ಚಿತ್ರದಲ್ಲಿ ನಟಿಸಲಿದ್ದಾರೆ. ಕೆ.ಎನ್.ಚಕ್ರಪಾಣಿ ಎಂಬುವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾಗೆ ಸ್ಯಾಮ್ ಸಂಗೀತ, ಥ್ರಿಲ್ಲರ್ ಮಂಜು ಸಾಹಸ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ಇರಲಿದೆ.
ಸುನಿಲ್ ರಾವ್ ಅವರಿಗೂ ಇದು ಹೊಸ ಅನುಭವ. ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಚಾಕೊಲೇಟ್‍ಬಾಯ್ ಆಗಿ ಗಮನ ಸೆಳೆದಿದ್ದ ಸುನಿಲ್ ರಾವ್, ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ ಅವರ ಮಗ. ಹಿಟ್ ಮತ್ತು ಯಶಸ್ಸು ಸಿಕ್ಕಾಗ ದಾರಿ ತಪ್ಪಿ, ಮತ್ತೆ ದಾರಿ ಕಂಡುಕೊಂಡು ಚಿತ್ರರಂಗಕ್ಕೆ ರೀ ಎಂಟ್ರಿ ಪಡೆದ ಸುನಿಲ್ ರಾವ್, ಇತ್ತೀಚೆಗೆ ತುರ್ತು ನಿರ್ಗಮನ ಚಿತ್ರದಲ್ಲಿ ವ್ಹಾವ್ ಎನ್ನುವಂತೆ ನಟಿಸಿದ್ದರು. ಇದೀಗ ಸಾವರ್ಕರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.



