ಕಿಚ್ಚ ಸುದೀಪ್ (Sudeep) ಮೇಲೆ ಈ ಹಿಂದೆ ಇಂತಹ ಆರೋಪ ಕೇಳಿ ಬಂದಿರಲಿಲ್ಲ. ಯಾವ ನಿರ್ಮಾಪಕರೂ ಇಂಥಾದ್ದೊಂದು ಆರೋಪ ಮಾಡಿರಲಿಲ್ಲ. ಕೆಲವು ನಿರ್ಮಾಪಕರಂತೂ ಸುದೀಪ್(Sudeep) ಅವರಿಂದಲೇ ನಮಗೆ ಸಹಾಯವಾಯಿತು ಎಂದು ಹೇಳಿಕೊಂಡಿದ್ದರು. ಆದರೆ, ಸುದೀಪ್ ಅವರ ಮೇಲೆ ಇದೇ ಮೊದಲ ಬಾರಿಗೆ ಇಂತಾದ್ದೊಂದು ಗಂಭೀರ ಆರೋಪ ಕೇಳಿ ಬಂದಿದೆ.
ನಟ ಸುದೀಪ್ ಹಣ ತಗೊಂಡಿದ್ದಾರೆ. 8 ವರ್ಷಗಳಿಂದ ಹಣ ವಾಪಸ್ ಕೊಟ್ಟಿಲ್ಲ. ಸಿನಿಮಾನೂ ಮಾಡ್ತಿಲ್ಲ. ಮಾಡೋಣ ಅಂತಾರೆ. ಕಥೆ ಬರೆಯೋರು ಬಂದಾಗ ಅವರು ಸಿಕ್ಕಲ್ಲ. ಅವರೇ ಹೇಳಿದಾಗ ಕರ್ಕೊಂಡು ಬಂದ್ರೂ ಬರಲ್ಲ. ಸಿನಿಮಾ ಮಾಡ್ತೀನಿ ಅಂತಾರೆ, ಮಾಡಲ್ಲ. ನಾನು ಅವರಿಗೆ ಅಡ್ವಾನ್ಸ್ ಹಣ ನೀಡಿದ್ದೇನೆ, ಯಾವಾಗ ಕೇಳಿದ್ರೂ ನಾಳೆ ಅಂತಾರೆ, ಏನು ಮಾಡಬೇಕು ಎನ್ನುವುದು ನಿರ್ಮಾಪಕ ಕುಮಾರ್ (NKumar) ಪ್ರಶ್ನೆ.
ಹಾಗಂತ ಎನ್. ಕುಮಾರ್ (NKumar) ಸುದೀಪ್ ಅವರಿಗೆ ಹೊಸಬರೂ ಅಲ್ಲ. ಚಿತ್ರರಂಗಕ್ಕೂ ಹೊಸಬರಲ್ಲ. ಈ ಹಿಂದೆ ಸುದೀಪ್ ಅವರ ಜೊತೆ ರಂಗ ಎಸ್ಎಸ್ಎಲ್ಸಿ, ಮಾಣಿಕ್ಯ, ಮುಕುಂದ ಮುರಾರಿ, ಕಾಶಿ ಫ್ರಂ ವಿಲೇಜ್ ಸಿನಿಮಾ ನಿರ್ಮಾಣ ಮಾಡಿದ್ದವರು. ಸ್ವಾತಿಮುತ್ತು, ವಿಷ್ಣುವರ್ಧನ ಸೇರಿದಂತೆ ಕೆಲವು ಚಿತ್ರಗಳ ವಿತರಣೆಯನ್ನೂ ಮಾಡಿದ್ದರು. ಅಂತಹ ಕುಮಾರ್ ಈ ಆರೋಪ ಮಾಡಿದ್ದಾರೆ.
ಕಳೆದ 8 ವರ್ಷಗಳಿಂದ ನಾನು ನಿಮ್ಮ ಸಿನಿಮಾ ಮಾಡುತ್ತೇನೆ ಅಂತ ಹೇಳಿಕೊಂಡು ಬರುತ್ತಲೇ ಇದ್ದಾರೆ. ನಾವು ಸುದೀಪ್ ಅವರ ಮ್ಯಾನೇಜರ್ ಬಳಿ ಕಾಂಟ್ಯಾಕ್ಟ್ ಮಾಡಿದಾಗಲೂ ಸಿನಿಮಾ ಮಾಡ್ತೀವಿ ಅಂತಲೇ ಹೇಳುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಆದಮೇಲೆ ನಮ್ಮ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ದರು. ನಂದಕಿಶೋರ್ (NandaKishore) ಅವರಿಗೆ ಹಣ ಕೊಡಿ, ಅವರು ಕಥೆ ಮಾಡಲಿ ಎಂದು ಸುದೀಪ್ ಹೇಳಿದಂತೆ ನಾವು ಮಾಡಿದ್ದೇವೆ. ಈಗ ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರರಂಗ ಮಾತಿನ ಮೇಲೆ ನಡೆಯುತ್ತದೆ. ಕೆಲವರಿಗೆ ಸುದೀಪ್ ಹಣ ಕೊಡಿಸಿದ್ದಾರೆ ಎಂದಿರುವ ಕುಮಾರ್, ಸಿನಿಮಾ ಮಾತ್ರ ಸೆಟ್ಟೇರಲಿಲ್ಲ ಎನ್ನುತ್ತಾರೆ.
ನಮ್ಮ ಸಿನಿಮಾಗೆ ಸುದೀಪ್ ಅವರೇ ಮುತ್ತತ್ತಿ ಸತ್ಯರಾಜ್ ಅಂತ ಟೈಟಲ್ ಇಡಿಸಿದ್ದಾರೆ. ನಿಜಕ್ಕೂ ಆ ಟೈಟಲ್ ಬೇರೆಯವರ ಬಳಿ ಇತ್ತು, ಅದನ್ನು ನಾನೇ ಫೈಟ್ ಮಾಡಿ ತಗೊಂಡೆ. ಸುದೀಪ್ ಅವರು ಹೈದರಾಬಾದ್ನಿಂದ ರೈಟರ್ ಕರೆಸಿ ಅಂತ ಹೇಳುತ್ತಾರೆ, ನಾವು ಕರೆಸಿದ್ರೆ 1 ವಾರ ಆದರೂ ಅವರನ್ನು ಭೇಟಿ ಮಾಡೋದಿಲ್ಲ. ನಾವು ಎಷ್ಟೇ ಬಾರಿ ಕಿಚ್ಚ ಸುದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಪಟ್ಟರೂ ಕೈಗೆ ಸಿಗೋದಿಲ್ಲ. ನಿರ್ಮಾಪಕರು ನಾವು ಎಲ್ಲಿಂದ ದುಡ್ಡು ತಂದಿರುತ್ತೇವೆ ಅಂತ ನಿಮಗೆಲ್ಲ ಗೊತ್ತಿರುತ್ತದೆ, ನಾವೇ ದುಡ್ಡು ಕೊಟ್ಟು ಬೇಡುವ ಸಮಯ ಬಂದಿದೆ ಎನ್ನುವುದು ಕುಮಾರ್ ಆರೋಪ.
ಈ ಬಗ್ಗೆ ಫಿಲ್ಚ್ ಚೇಂಬರ್`ನವರಿಗೂ ದೂರು ಕೊಟ್ಟಿದ್ದಾರಂತೆ. ಶಿವಣ್ಣ, ರವಿಚಂದ್ರನ್ ಅವರ ಗಮನಕ್ಕೂ ತಂದಿದ್ದಾರಂತೆ. ಕುಮಾರ್ ಈ ಎಲ್ಲ ಆರೋಪ ಮಾಡಿದ್ದು ಫಿಲ್ಮ್ ಚೇಂಬರ್`ನಲ್ಲಿಯೇ.
ಸುದೀಪ್ ಅವರಿಗೆ ದುಡ್ಡು ಕೊಟ್ಟಿದ್ದೇನೆ. ಅಡುಗೆ ಮನೆ ಕಟ್ಟೋಕೆ ದುಡ್ಡು ಕೊಟ್ಟಿದ್ದೇನೆ. ದೇವರ ಮನೆ ಕಟ್ಟೋಕೆ 10 ಲಕ್ಷ ಕೊಟ್ಟಿದ್ದೇನೆ. ಆರ್.ಆರ್. ನಗರದಲ್ಲಿ ಸುದೀಪ್ ಮನೆ ಕೊಂಡುಕೊಳ್ಳೋಕೆ ಹಣ ಕೊಟ್ಟಿದ್ದೆ. ಸುದೀಪ್ ಅವರ ಮನೆ ಮುಂದೆ ನಿರ್ಮಾಪಕರೊಬ್ಬರು ಬಂದು ನಿಂತಿದ್ದಾಗ ನಾನೇ ಅವರಿಗೆ ಹಣ ಕೊಟ್ಟಿದ್ದೆ. ಅದಕ್ಕೆ ಜಾಕ್ ಮಂಜು ಕೂಡಾ ಸಾಕ್ಷಿಯಾಗಿದ್ದರು ಎನ್ನುವ ಕುಮಾರ್ ನಾನು ತಪ್ಪು ಮಾಡಿದ್ದರೆ ಸುದೀಪ್ ಅವರ ಕಾಲಕೆಳಗೆ ನುಗ್ಗುವೆ ಎಂದು ಸವಾಲು ಹಾಕಿದ್ದಾರೆ. ಸುದೀಪ್ ಅವರು ಸಿನಿಮ ಮಾಡಿದರೂ ಪರವಾಗಿಲ್ಲ, ಮಾಡದಿದ್ದರೂ ಪರವಾಗಿಲ್ಲ. ನನ್ನ ದುಡ್ಡು ನನಗೆ ಬೇಕು ಎನ್ನುವುದು ಕುಮಾರ್ ಅವರ ಮಾತು.



