ಡಾಲಿ ಧನಂಜಯ ಕೆರಿಯರ್`ನಲ್ಲಿ ಹೊಯ್ಸಳ ಮೈಲಿಗಲ್ಲು. ಏಕೆಂದರೆ ಇದು ಅವರ 25ನೇ ಸಿನಿಮಾ.
ಈ ಚಿತ್ರದ ಟೀಸರ್ ಹೊರಬಂದಿದೆ. ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. ಚಿತ್ರದ ಟೀಸರ್ ನೋಡಿದರೆ.. ಕೆಲ ವರ್ಷಗಳ ಹಿಂದೆ ಬಂದಿದ್ದ ಗಣೇಶ್ ಅಭಿನಯದ ಗೀತಾ ಚಿತ್ರದ ದೃಶ್ಯಗಳು ಬೇಡವೆಂದರೂ ನೆನಪಾಗುತ್ತವೆ. ಏಕೆಂದರೆ ಅದೂ ಕೂಡಾ ಬೆಳಗಾವಿ ಭಾಗದಲ್ಲಿ ನಡೆಯುವ ಕಥೆಯೇ. ಅಷ್ಟೇ ಅಲ್ಲ, ಚಿತ್ರದ ಡೈರೆಕ್ಟರ್ ಕೂಡಾ ಅವರೇ.
ಆತ ಒಳ್ಳೆಯವನೋ.. ಕೆಟ್ಟವನೋ.. ಜಡ್ಜ್‍ಮೆಂಟ್`ಗೆ ಸಿಗವಲ್ದು.. ಆದರೆ ಮಂದಿಗೆ ಬಾಳಾ ಇಷ್ಟ.. ಅಚ್ಯುತ್ ಕುಮಾರ್ ಅವರ ಧ್ವನಿ ಹಿಂದೆ ಕೇಳುತ್ತಿದ್ದರೆ, ಮುಂದೆ ಹಾಲು..ರಕ್ತ..ಬೆಂಕಿಯ ಅಭಿಷೇಕ ಮಾಡಿಕೊಂಡೇ ತೆರೆಯ ಮೇಲೆ ಕುದುರೆಯ ಮೇಲೆ ಬರುತ್ತಾರೆನೆ.. ಹೊಯ್ಸಳದ ಗುರುದೇವ್. ಚಿತ್ರದಲ್ಲಿ ಡಾಲಿ ಎಸಿಪಿ ಗುರುದೇವ್ ಆಗಿ ಕಾಣಿಸಿಕೊಂಡಿದ್ದು, ಯಾವುದೋ ಗಲಾಟೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಅಧಿಕಾರಿಯ ಹೋರಾಟದ ದೃಶ್ಯಗಳನ್ನು ಟೀಸರಿನಲ್ಲಿ ತೋರಿಸಲಾಗಿದೆ. ಬೆಳಗಾವಿ, ಅಥಣಿಯಲ್ಲಿ ನಡೆಯುವ ಕಥೆ ಇದು. ಗೀತಾ ಚಿತ್ರದ ನಿರ್ದೇಶಕ ವಿಜಯ್.ಎನ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.


ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯ ಚಿತ್ರವನ್ನು ಅರ್ಪಿಸಿರುವುದು ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್. ಕೆ.ಆರ್.ಜಿ ಸ್ಟುಡಿಯೋಸ್ನ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ಅವರು ಛಾಯಾಗ್ರಾಹಕರಾಗಿದ್ಡಾರೆ. ಅಚ್ಯುತ್ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನೊಂದು ವಿಶೇಷವೆಂದರೆ ನೋಡುಗರ ಹೃದಯಲ್ಲಿ ಕಿಚ್ಚು ಹಚ್ಚಿದ ಹೊಯ್ಸಳ ಟೀಸರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್.



