ಮನೆಯಲ್ಲಿ ಯಾವುದೋ ಕಾರಣಕ್ಕೆ ಅಂಗವೈಕಲ್ಯಕ್ಕೆ ಗುರಿಯಾದವರನ್ನು ಪೀಡೆಯಂತೆ ನೋಡುವವರ ಸಂಖ್ಯೆಯೇ ಹೆಚ್ಚು. ಆದರೆ ಇಡೀ ಮನೆಯವರು.. ಇಡೀ ಊರಿನವರು ಆಕೆಯನ್ನು ದೇವತೆಯಂತೆ ನೋಡೋದಿದ್ಯಲ್ಲ.. ಅದು ಅಪರೂಪದಲ್ಲಿ ಅಪರೂಪ. ಆಕೆ ಹುಟ್ಟಿದ ಮನೆಯವರಿಗೆಲ್ಲ ದೇವತೆ.. ಮನೆಯ ಸದಸ್ಯರ ಪಾಲಿಗೆ ಮಹಾರಾಣಿ. ಊರಿನವರ ಪ್ರೀತಿಗೆ ಈಕೆಯ ಅರಸಿ.
ಆಕೆಯ ಹೆಸರು ರಾಣಿ. ದುರದೃಷ್ಟ.. ಚಿಕ್ಕ ವಯಸ್ಸಿನಲ್ಲೇ ಪೋಲಿಯೋ ಅಟ್ಯಾಕ್ ಆಗಿ ಕಣ್ಣಿನ ನರ್ವ್ ಹೋಗಿದೆ. ಆಕೆ ಎಲ್ಲರಂತಲ್ಲ. ಆದರೆ ಆಕೆಯೇ ಡಾಲಿ ಧನಂಜಯ ಮನೆಯ ಮಹಾರಾಣಿ. ಡಾಲಿಯ ಅಕ್ಕ. ಅಕ್ಕನಾದರೂ ಡಾಲಿಯ ಪಾಲಿಗೆ ಆಕೆಯೇ ಮಗಳಂತೆ. ವೀಕ್ ಎಂಡ್ ವಿತ್ ರಮೇಶ್`ನಲ್ಲಿ ಡಾಲಿ ಧನಂಜಯ ಅವರು ಮಾತನಾಡುತ್ತಿದ್ದರೆ ನೋಡುಗರು ಕಣ್ಣೀರಾಗುತ್ತಿದ್ದರು.
ಚಿಕ್ಕವಯಸ್ಸಿನಲ್ಲಿ ಅವಳಿಗೆ ಪೋಲಿಯೋ ಅಟ್ಯಾಕ್ ಆಯ್ತು. ಕಣ್ಣಿನ ನರ್ವ್ ಹೊರಟು ಹೋಯ್ತು. ಅವಳು ಇವತ್ತಿಗೂ ಮಗು ತರಹವೇ. ತಾತನ ಜೊತೆ ತುಂಬಾ ಅಟ್ಯಾಚ್ಡ್ ಆಗಿದ್ದಳು. ಈಗ ಅಜ್ಜಿ ಜೊತೆಗೆ ತುಂಬಾ ಅಟ್ಯಾಚ್ಡ್ ಆಗಿದ್ದಾಳೆ. ಅವರೇನು ಮಾತಾಡ್ತಾರೋ, ಅದೆಲ್ಲವನ್ನ ಅವಳೂ ಮಾತಾಡ್ತಾಳೆ. ಅವಳು ನಮಗೆ ದೇವರು ಕೊಟ್ಟಿರುವ ಗಿಫ್ಟ್. ‘ನೀವೆಲ್ಲಾ ಚೆನ್ನಾಗಿದ್ದೀರಾ ಅಂದ್ರೆ ಅದು ಅವಳ ಯೋಗ’ ಅಂತ ನಮ್ಮಜ್ಜಿ ಹೇಳ್ತಾರೆ…
ಹೀಗೆ ಹೇಳುತ್ತಾ ಹೋಗುವ ಡಾಲಿ ಚಿಕ್ಕ ವಯಸ್ಸಿನಲ್ಲಿದ್ದಾಗ ಯಾವ ದೇವಸ್ಥಾನಕ್ಕೆ ಹೋದರೂ ನಮ್ಮಕ್ಕನಿಗೆ ಕಣ್ಣು ಕೊಡು ಎಂದು ಪ್ರಾರ್ಥನೆ ಮಾಡ್ತಿದ್ದರಂತೆ. ಅಂತಹ ರಾಣಿಗೆ ಧನಂಜಯನ ಮೇಲೊಂದು ಕಂಪ್ಲೇಂಟೂ ಇದೆ. ಮನೆಗೆ ಬರ್ತಾನೆ. ಊಟ ಮಾಡ್ತಾನೆ. ಮಾತನಾಡಿಸಿಕೊಂಡು ಹೊರಟು ಬಿಡ್ತಾನೆ.. ಎಂದೆಲ್ಲ ಪ್ರೀತಿಯಿಂದಲೇ ಹೇಳೋ ರಾಣಿಗೆ, ತಮ್ಮ ಮನೆಯಲ್ಲಿ ಒಂದು ನಿಮಿಷವೂ ಇರೋದಿಲ್ಲ ಅನ್ನೋದು ಕಂಪ್ಲೇಂಟು.
ಅಫ್‍ಕೋರ್ಸ್, ಸ್ಟಾರ್ ಆದ ಮೇಲೆ ಅಂತಹವರು ಮಾಡಬೇಕಿರುವ ತ್ಯಾಗಗಳಲ್ಲಿ ಅದೂ ಒಂದು. ನಾನಷ್ಟೇ ಅಲ್ಲ, ನಮ್ಮ ಇಡೀ ಊರು ನಮ್ಮ ಅಕ್ಕನನ್ನು ಮಹಾರಾಣಿಯ ಹಾಗೆ ನೋಡಿಕೊಳ್ಳುತ್ತೆ. ಇಡೀ ಊರಿಗೆ ಅವಳು ರಾಣಿ.. ಎಂದು ಭಾವುಕರಾಗುವ ಡಾಲಿ ಧನಂಜಯ ಅವರಿಗೆ ಅಕ್ಕನನ್ನು ಹೊರ ಜಗತ್ತಿಗೆ ತೋರಿಸುವ ಇಷ್ಟವೇ ಇರಲಿಲ್ಲವಂತೆ. ಆದರೆ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಾಣಿಯನ್ನು ನೋಡಿದವರೆಲ್ಲ ಕಣ್ಣೀರಾಗಿದ್ದು ವಿಶೇಷ.



