ಡಾಲಿ ಧನಂಜಯ ಅವರೀಗ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರುತ್ತಿರುವ ನಟ. ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ್ ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಡಾಲಿ ನಿರ್ಮಾಣದ ಮೊದಲ ಸಿನಿಮಾ ಬಡವ ರಾಸ್ಕಲ್ ಚಿತ್ರವನ್ನು ಅರ್ಪಣೆ ಮಾಡಿದ್ದವರು ಗೀತಾ ಶಿವರಾಜ್ ಕುಮಾರ್. ಏಕೆ ಎಂದವರಿಗೆ ಶಿವಣ್ಣ ಮತ್ತು ಗೀತಕ್ಕೆ ನನಗೆ ಏನು ಸಹಾಯ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನನ್ನ ಮೊದಲ ಚಿತ್ರವನ್ನು ಅವರು ಅರ್ಪಿಸುವ ಎಂದು ಆರಂಭಿಸಿದ್ದೇವೆ ಎಂದರೆ ಅವರು ನನಗೆ ಮಾಡಿರುವ ಸಹಾಯ, ತೋರಿಸಿರುವ ಪ್ರೀತಿ, ವಿಶ್ವಾಸವನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದರು. ಇದೀಗ ಡಾಲಿ ಧನಂಜಯ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಅಲ್ಲಿಯೂ ಶಿವಣ್ಣ ಅವರ ಗುಣಗಾನ ಮಾಡಿದ್ದಾರೆ.


ಅಂದಹಾಗೆ ಡಾಲಿಗೆ ಬ್ರೇಕ್ ಕೊಟ್ಟಿದ್ದೇ ಟಗರು. ಡಾಲಿ ಪಾತ್ರವೇ ಧನಂಜಯ ಅವರಿಗೆ ಹೆಸರು, ಖ್ಯಾತಿ ತಂದುಕೊಟ್ಟಿದ್ದು. ಆ ಚಿತ್ರದ ಪ್ರಚಾರದಲ್ಲಿ ಶಿವಣ್ಣ ತಮ್ಮ ಜೊತೆ ಡಾಲಿ ಧನಂಜಯ ಅವರನ್ನು ಪಕ್ಕದಲ್ಲಿಯೇ ಇಟ್ಟುಕೊಂಡು ಪ್ರಚಾರ ಮಾಡಿದ್ದರು. ಟಗರು ಚಿತ್ರದ ಕ್ರೆಡಿಟ್‍ನ್ನು ಆ ವೇಳೆ ಡಾಲಿ ಧನಂಜಯ ಮತ್ತು ವಸಿಷ್ಠ ಸಿಂಹ ಅವರಿಗೆ ಹಂಚಿದ್ದರು.



