ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಮೊದಲು ಯು ಸರ್ಟಿಫಿಕೇಟ್ ಇದ್ದರೆ ಎಲ್ಲರೂ ನೋಡುವಂತ ಸಿನಿಮಾ. ಯುಎ ಇದ್ದರೆ ಮಕ್ಕಳೂ ನೋಡಬಹುದು. ಆದರೆ ವಯಸ್ಕರು ಜೊತೆಯಲ್ಲಿರಬೇಕು. ಎ ಸರ್ಟಿಫಿಕೇಟ್ ಇದ್ದರೆ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ. ಎಸ್ ಇದ್ದರೆ ಸೈಂಟಿಫಿಕ್ ಸಿನಿಮಾ. ಇದುವರೆಗೆ ಹೀಗೆ ಇದ್ದ ಸೆನ್ಸಾರ್ ಸರ್ಟಿಫಿಕೇಟ್`ಗಳು ಇನ್ನು ಮುಂದೆ ಬದಲಾಗಲಿವೆ.
ಈ ಮಸೂದೆಯಿಂದಾಗಿ ಪ್ರಸ್ತುತ ಇರುವ ‘ಯು’, ‘ಎ’, ‘ಯುಎ’ ಬದಲಿಗೆ ಇನ್ನು ಮುಂದೆ ಸಿನಿಮಾಗಳನ್ನು ವಯಸ್ಸಿನ ಆಧಾರದಲ್ಲಿ ವಿಂಗಡಿಸಲು ಸಹಾಯಕವಾಗಲಿದೆ. ಇನ್ನು ಮುಂದೆ ಯುಎ ಪ್ರಮಾಣ ಪತ್ರವನ್ನು ಕೇವಲ 12 ವರ್ಷಕ್ಕೆ ನಿಗದಿಪಡಿಸುವ ಬದಲು ಯುಎ-7+, ಯುಎ-13+ ಮತ್ತು ಯುಎ-16+ ಎಂದು ವಿಂಗಡಿಸಲಾಗುತ್ತದೆ. ಈ ಮಸೂದೆಯನ್ನು ಮುಂದಿನ ಸಂಸತ್ ಕಲಾಪದ ವೇಳೆ ಮಂಡಿಸಲಾಗುವುದು. ಈ ಮಸೂದೆ ಸಿನಿಮಾ ಉದ್ಯಮದಲ್ಲಿರುವ ಎಲ್ಲರಿಗೂ ಯಾವುದೇ ವಿವಾದಗಳಿಲ್ಲದೇ ಒಪ್ಪಿಗೆಯಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಇದರ ಜೊತೆಗೆ ಪೈರಸಿ ತಡೆಗೆ ಹೊಸ ನಿಯಮಗಳನನೂ ರೂಪಿಸಲಾಗಿದೆ. ಈ ಹೊಸ ಕಾಯ್ದೆಯ ಪ್ರಕಾರ ಇಂಟರ್`ನೆಟ್‍ನಲ್ಲಿ ಸಿನಿಮಾಗಳ ಪೈರಸಿ ತಡೆ ಕಾನೂನಿಗೆ ದೊಡ್ಡ ಶಕ್ತಿ ಬರಲಿದೆ. ಈಗ ಇದ್ದ ಕಾನೂನಿನಲ್ಲಿ ಇಂಟರ್`ನೆಟ್ ಪೈರಸಿ ಬಗ್ಗೆ ಕಠಿಣವಾದ ನಿಯಮಗಳಿರಲಿಲ್ಲ. ಸಿನಿಮಾಗಳ ಪೈರಸಿಯನ್ನು ತಡೆಗಟ್ಟಲು ಮತ್ತು ವಯಸ್ಸಿನ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಣೆ ಮಾಡಲು ಕಾನೂನು ಜಾರಿ ಮಾಡಬೇಕು ಎಂಬ ಹಲವು ಬೇಡಿಕೆಗಳು ನಮ್ಮ ಮುಂದಿದ್ದವು. ಈಗಾಗಲೇ ಪೈರಸಿ ತಡೆಯುವ ಮಸೂದೆಯೊಂದನ್ನು ರಾಜ್ಯಸಭೆಯಲ್ಲಿ 2019ರಲ್ಲೇ ಮಂಡಿಸಲಾಗಿತ್ತು. ಇದೀಗ ವಿಷಯ ತಜ್ಞರ ಜೊತೆ ಚರ್ಚಿಸಿ ಹೊಸ ಕರಡನ್ನು ರಚಿಸಲಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.



