ಧ್ರುವ ಸರ್ಜಾ. ಗೆಳೆತನಕ್ಕೆ ಮಹತ್ವ ಕೊಡುವ ವ್ಯಕ್ತಿ. ಹೀರೋ ಆಗಿದ್ದರೂ, ಸ್ಟಾರ್ ಆಗಿದ್ದರೂ ಅವರ ಗೆಳೆಯರ ಗ್ಯಾಂಗ್ ಬದಲಾಗಿಲ್ಲ. ಆತ ತಂದೆ ತಾಯಿ ಇಲ್ಲದ ಅನಾಥನಾಗಿದ್ದರೆ.. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡಿದ್ದರೆ.. ಸದಾ ತಮ್ಮ ಜೊತೆಯಲ್ಲೇ ಇದ್ದು ತಮ್ಮ ಯೋಗಕ್ಷೇಮ ನೋಡಿಕೊಳ್ಳುವವನಾಗಿದ್ದರೆ..
ಅಂತಹ ಗೆಳೆಯನಿಗೆ ಹುಟ್ಟುಹಬ್ಬಕ್ಕೆ ಏನು ಗಿಫ್ಟ್ ಕೊಡಬಹುದು..? ಧ್ರುವ ಸರ್ಜಾ ತಮ್ಮ ಆತ್ಮೀಯ ಗೆಳೆಯನಿಗೆ ಫಾರ್ಚೂನರ್ ಕಾರು ಗಿಫ್ಟ್ ಕೊಟ್ಟಿದ್ದಾರೆ. 52 ಲಕ್ಷದ ಟೊಯೊಟಾ ಫಾರ್ಚೂನರ್ ಕಾರು. ಅದರ ಹಿಂದೆ ಒಂದು ಸೆಂಟಿಮೆಂಟ್ ಕಥೆಯೂ ಇದೆ. ಧ್ರುವ ಸರ್ಜಾರ ಆತ್ಮೀಯ ಗೆಳೆಯ ಅಶ್ವಿನ್ ಅವರಿಗೇ ಈ ಕಾರು ಗಿಫ್ಟ್ ಆಗಿ ಕೊಟ್ಟಿದ್ದಾರೆ ಧ್ರುವ ಸರ್ಜಾ.
ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಕರೆದುಕೊಂಡು ಹೋಗಿ ಸ್ವತಃ ಅವರಿಗೇ ಆಶ್ಚರ್ಯವಾಗುವಂತೆ ಸರ್ಪ್ರೈಸ್ ಗಿಫ್ಟ್ ಆಗಿ ಕಾರನ್ನು ನೀಡಿದ್ದಾರೆ . ಬಹಳ ಸಣ್ಣ ವಯಸ್ಸಿನಲ್ಲೇ ಅಶ್ವಿನ್ರ ಪೋಷಕರು ಕಾಲವಾಗಿದ್ದಾರೆ. ಕೇವಲ ಕಾರನ್ನು ಉಡುಗೊರೆಯಾಗಿ ನೀಡಿದ್ದು ಮಾತ್ರವೇ ಅಲ್ಲದೆ, ಅಶ್ವಿನ್ರ ಅಪ್ಪ-ಅಮ್ಮನ ಹಳೆಯ ಫೋಟೊವನ್ನು ಎಲ್ಲಿಂದಲೋ ಹುಡುಕಿ ತೆಗೆಸಿ ಅದನ್ನು ಕಾರಿನ ಒಳಗೆ ಲಗತ್ತಿಸಿದ್ದಾರೆ. ಗೆಳೆಯ ಧ್ರುವ ಕೊಟ್ಟ ಈ ಅಪೂರ್ವ ಉಡುಗೊರೆ ಕಂಡು ಅಶ್ವಿನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ನಾನು ಬುದ್ದಿ ಬಂದಾಗಿನಿಂದಲೂ ನೋಡದ ಅಪ್ಪಅಮ್ಮನ ಫೋಟೋ ಜೊತೆಯಲ್ಲಿಟ್ಟು ಕಾರು ಗಿಫ್ಟ್ ಕೊಟ್ಟಿದ್ದಾರೆ. ಅದೆಲ್ಲಿಂದ ಆ ಫೋಟೋ ಹುಡುಕಿದರೋ ಗೊತ್ತಿಲ್ಲ ಎಂದಿರುವ ಅಶ್ವಿನ್, ಸ್ವತಃ ವಿಡಿಯೋ ಮಾಡಿ ಈ ಸ್ಟೋರಿ ಹೇಳಿಕೊಂಡಿದ್ದಾರೆ. ಧ್ರುವ ಸರ್ಜಾ ಎಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದಾರೆ. ಸಾಕಷ್ಟು ಜನರ ಆಸ್ಪತ್ರೆ ಬಿಲ್ ಕೊಟ್ಟಿದ್ದಾರೆ. ಶಾಲೆಯ ಫೀಸು ಕೊಟ್ಟಿದ್ದಾರೆ. ಬಂದವರಿಗೆಲ್ಲ ಸಹಾಯ ಮಾಡಿದ್ದಾರೆ. ಆದರೆ ಯಾವುದನ್ನೂ ಪ್ರಚಾರ ಮಾಡಿಕೊಂಡವರಲ್ಲ. ನನಗೂ ಸಹ ಈ ಉಡುಗೊರೆ ಕೊಟ್ಟ ವಿಡಿಯೋ ಹೊರಗೆ ಹೋಗಬಾರದು ಎಂದಿದ್ದರು. ಆದರೆ ಅವರು ಮಾಡುವ ಕಾರ್ಯವನ್ನು ಜನರಿಗೆ ಹೇಳಬೇಕು ಎಂದು ವಿಡಿಯೋ ಹಾಕಿಕೊಂಡಿದ್ದೇನೆ ಎಂದಿದ್ದಾರೆ.



