ಬಿಗ್ ಬಾಸ್ ಪ್ರಥಮ್ ಮದುವೆಯಾಗುತ್ತಿದ್ದಾರೆ. ಒಳ್ಳೆ ಹುಡ್ಗ ಪ್ರಥಮ್ ಅವರಿಗೆ ಒಳ್ಳೆ ಹುಡುಗಿ ಸಿಕ್ಕಿದ್ದಾರೆ. ನಟ ಭಯಂಕರ ಪ್ರಥಮ್ ಲಗ್ನ ಭಯಂಕರನಾಗುತ್ತಿದ್ದಾರೆ. ದೇವ್ರಂಥ ಮನುಷ್ಯ ಪ್ರಥಮ್ ಅವರ ಬದುಕಿಗೆ ದೇವತೆಯಂತಾ ವಧು ಬಂದಿದ್ದಾರೆ. ಪ್ರಥಮ್ ಅವರೀಗ ಮದುವೆಯಾಗುತ್ತಿದ್ದಾರೆ. ನಿಶ್ಚಿತಾರ್ಥವೂ ಆಗಿದೆ. ಯಾರು ಆ ಹುಡುಗಿ.. ಮನೆ ಕಥೇನೆಲ್ಲ ಊರಿನ್ ತುಂಬ ಹೇಳ್ಕೊಂಡ್ ಬರೋ ಪ್ರಥಮ್ ಯಾರು ಆ ಹುಡುಗಿ ಅನ್ನೋದನ್ನ ಮಾತ್ರ ಬಿಟ್ಟುಕೊಟ್ಟಿಲ್ಲ.
ನಿಶ್ಚಿತಾರ್ಥದ ಫೋಟೋ ಪೋಸ್ಟ್ ಮಾಡಿರುವ ಪ್ರಥಮ್, ಕೇವಲ ಉಂಗುರ ಧರಿಸಿದ ಕೈಗಳ ಫೋಟೋ ಮಾತ್ರ ಹಾಕಿದ್ದಾರೆ. ಮುಖ ತೋರಿಸಿಲ್ಲ. ಒಂದು ಸುಂದರ ಕ್ಷಣ.. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋಕೆ ಇಷ್ಟ.
ನನ್ನ ಎಂಗೇಜ್ಮೆಂಟ್ ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ನೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮಗೆ ತಿಳಿಸಿದ್ದೇನೆ ಅಷ್ಟೇ.. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗೇ ಇರೋದಕ್ಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ. ಅದೇ ಆಶೀರ್ವಾದ..ಎಂದು ಬರೆದಿದ್ದಾರೆ.
ಅಭಿಮಾನಿಗಳು ಪ್ರಥಮ್ ಅವರಿಗೆ ಶುಭ ಕೋರಿದ್ದಾರೆ. ಹುಡುಗಿ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರಥಮ್ ಕರ್ನಾಟಕದ ಅಳಿಯ ಸಿನಿಮಾ ಮಾಡುತ್ತಿದ್ದಾರೆ. ಪ್ರಥಮ್ ತರಲೆ, ಪಬ್ಲಿಸಿಟಿ ಐಡಿಯಾ ಗೊತ್ತಿದ್ದವರು ಹುಡುಗಿ ಮುಖವನ್ನೇ ತೋರಿಸಿಲ್ಲ. ಇದ್ಯಾವುದೋ ಸಿನಿಮಾ ಸ್ಟಂಟ್ ಇರಬೇಕು ಎಂದು ಹೇಳುತ್ತಿರುವವರೂ ಇದ್ದಾರೆ. ಪ್ರಥಮ್ ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ.



