ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಅವರ ಪೂರ್ತಿ ಹೆಸರು. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ. 94 ವರ್ಷ ವಯಸ್ಸಿನ ಭಗವಾನ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವತ್ತು ಅವರ ಹುಟ್ಟುಹಬ್ಬ, ಆದರೆ ಬೆಳಗ್ಗೆ 6 ಗಂಟೆಗೆ ಇಂದೇ ಮೃತಪಟ್ಟಿದ್ದಾರೆ. ಹುಟ್ಟಿದ ದಿನವೇ ಮೃತಪಟ್ಟಿದ್ದಾರೆ ಎಸ್.ಕೆ.ಭಗವಾನ್.
ಕನ್ನಡದಲ್ಲಿ 55 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ದೊರೈ-ಭಗವಾನ್ ಜೋಡಿಯ ಭಗವಾನ್, 24 ಕಾದಂಬರಿಗಳನ್ನು ತೆರೆಯ ಮೇಲೆ ತಂದಿದ್ದ ನಿರ್ದೇಶಕ. ಸದಭಿರುಚಿಯ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಭಗವಾನ್, ಗೆಳೆಯದ ದೊರೆ ಜೊತೆ ಜೋಡಿಯಾಗಿ ಚಿತ್ರ ನಿರ್ದೇಶನ ಮಾಡಿದವರು.


ಡಾ.ರಾಜ್ ಜೊತೆ ಬಾಂಡ್ ಚಿತ್ರಗಳಷ್ಟೇ ಅಲ್ಲದೆ ಎರಡು ಕನಸು, ಗಿರಿ ಕನ್ಯೆ, ನಾನೊಬ್ಬ ಕಳ್ಳ, ವಸಂತ ಗೀತ, ಹೊಸ ಬೆಳಕು, ಸಮಯದ ಗೊಂಬೆ, ಯಾರಿವನು, ಜೀವನ ಚೈತ್ರ, ಒಡಹುಟ್ಟಿದವರು ಚಿತ್ರಗಳನ್ನು ಮಾಡಿದ್ದರು. ಅನಂತ್ ನಾಗ್-ಲಕ್ಷ್ಮೀ ಜೋಡಿಯ ಯಶಸ್ವಿ ಚಿತ್ರಗಳಾದ ಬೆಂಕಿಯ ಬಲೆ, ಸೇಡಿನ ಹಕ್ಕಿ, ಚಂದನದ ಗೊಂಬೆ ಇವರ ಚಿತ್ರಗಳೇ.


ಕನ್ನಡ ಚಿತ್ರರಂಗಕ್ಕೆ ಕೊಡ ಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಾದ ಪುಟ್ಟಣ್ಣ ಕಣಗಾಲ್ ಹಾಗೂ ಡಾ.ರಾಜ್ ಕುಮಾರ್, ಎರಡೂ ಪ್ರಶಸ್ತಿಗಳನ್ನು ಪಡೆದವರು ಭಗವಾನ್. ಭಗವಾನ್ ಹೆಚ್ಚು ನಿರ್ದೇಶನ ಮಾಡಿದ್ದು ಡಾ.ರಾಜ್ ಹಾಗೂ ಅನಂತನಾಗ್ ಚಿತ್ರಗಳಿಗೆ. ಉದಯ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್, ರಾಜೇಶ್, ನರಸಿಂಹ ರಾಜು, ಅಶ್ವತ್ಥ್, ಬಿ.ಸರೋಜಾ ದೇವಿ, ಲಕ್ಷ್ಮೀ, ಕಲ್ಪನಾ, ಆರತಿ, ಜಯಂತಿ, ಮಾಲಾಶ್ರೀ.. ಹೀಗೆ ಭಗವಾನ್ ಜೊತೆ ಕೆಲಸ ಮಾಡಿದವರು ಹಲವು ಸ್ಟಾರ್ ನಟರು. ತಾವು ನಿರ್ದೇಶನ ಮಾಡಿದ ಪ್ರತಿಯೊಬ್ಬ ಕಲಾವಿದರಿಗೂ ಜೀವನದಲ್ಲಿ ಮರೆಯದ ಚಿತ್ರಗಳನ್ನು ಕೊಟ್ಟಿರುವುದು ಭಗವಾನ್ ಹೆಚ್ಚುಗಾರಿಕೆ.
ಡಾ.ರಾಜ್ ವೃತ್ತಿ ಜೀವನದ ಕಸ್ತೂರಿ ನಿವಾಸ, ಬಾಂಡ್ ಸಿರೀಸ್, ಜೀವನ ಚೈತ್ರ, ಅನಂತ್ ನಾಗ್ ಅವರ ವೃತ್ತಿ ಬದುಕಿನಲ್ಲಿ ಬಯಲು ದಾರಿ, ಚಂದನದ ಗೊಂಬೆ, ಶಂಕರ್ ನಾಗ್ ಅವರಿಗೆ ಮುನಿಯಮ ಮಾದರಿ ಚಿತ್ರಗಳಿವೆ. ಡಾ.ರಾಜ್ ಮತ್ತು ಆಂಬರೀಷ್ ಅವರನ್ನು ಒಂದೇ ಸಿನಿಮಾದಲ್ಲಿ ಒಡಹುಟ್ಟಿದವರು ಚಿತ್ರದಲ್ಲಿ ಸೇರಿಸಿದ ಹೆಗ್ಗಳಿಕೆಯೂ ಇವರದ್ದೇ. ಭಗವಾನ್ ಅವರ ಚಿತ್ರದಲ್ಲಿ ನಟಿಸಿದ ನಾಯಕಿಯರ ಖ್ಯಾತಿಯೇ ಬೇರೆ. ಇವತ್ತಿಗೂ ಲಕ್ಷ್ಮೀ ಅವರನ್ನು ಕನ್ನಡಿಗರು ಚಂದನದ ಗೊಂಬೆ ಎಂದು ಗುರುತಿಸಿದರೆ, ಜಯಮಾಲಾ ಅವರನ್ನು ಗಿರಿಕನ್ಯೆ ಎಂದೇ ಗುರುತಿಸುತ್ತಾರೆ.



