ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಹಾಡು ಕೇಳಿದರೆ ನೆನಪಾಗುವುದು ಮಾಸ್ಟರ್ ಲೋಹಿತ್ ಹಾಡಿದ್ದ ಶಿಶುಗೀತೆ. ಆದರೆ ಈ ಬಾನದಾರಿಯಲ್ಲಿ ಇರುವುದು ಪ್ರೇಮಗೀತೆ..ಯುಗಳ ಗೀತೆ.. ಪ್ರಣಯಗೀತೆ..
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಂ ಗುಬ್ಬಿ ನಾಲ್ಕನೇ ಬಾರಿಗೆ ಒಟ್ಟಿಗೇ ಕೈಜೋಡಿಸಿರುವ ಸಿನಿಮಾ ಬಾನದರಿಯಲ್ಲಿ. ಗಣೇಶ್ ಎದುರು ರೀಷ್ಮಾ ನಾಣಯ್ಯ ಮತ್ತು ರುಕ್ಮಿಣಿ ವಸಂತ್ ಇಬ್ಬರೂ ಇದ್ದಾರೆ. ಅದು ತ್ರಿಕೋನ ಪ್ರೇಮಕಥೆಯಾ.. ಇರಬಹುದು. ಅದು ಸ್ನೇಹದ ಕಥೆಯಾ.. ಇದ್ದರೂ ಇರಬಹುದು.. ಕ್ರೀಡೆಯ ಕಥೆಯಾ.. ಕ್ರೀಡೆ ಇದೆ. ಆದರೆ ಕ್ರೀಡೆಯೇ ಸಿನಿಮಾ ಕಥೆಯ ಹೂರಣವಲ್ಲ. ಸದ್ಯಕ್ಕೆ ಹೇಳಬಹುದಾಗಿದ್ದುದು ಇಷ್ಟೆ.. ಈಗ ಅದರ ಜೊತೆಗೆ ಒಂದು ಚೆಂದದ ಹಾಡು ಬಂದಿದೆ.
ಬಾನದಾರಿಯಲ್ಲಿ.. ಹೋದೆ ಎಲ್ಲಿ..
ನೀ ಬಾನದಾರಿಯಲ್ಲಿ.. ಹೋದೆ ಎಲ್ಲಿ..
ಸಿಗಬೇಕು ಮತ್ತೆ ನಾವು..
ಜೊತೆಯಾಗಿ ನೂರು ಸಾವು..
ನಮದೂ ಬಾಕಿ ಇದೆ ಬೇಗ ಬಂದು ಬಿಡು..
ಬಾನದಾರಿಯಲ್ಲಿ.. ಹೋದೆ ಎಲ್ಲಿ..
ಸದ್ಯಕ್ಕಂತೂ ಇಂತಹ ಹಾಡುಗಳು ಸಿಗುವುದು ಗಣೇಶ್ ಚಿತ್ರಗಳಲ್ಲಿ ಮಾತ್ರವೇ ಏನೋ ಎಂಬಂತೆ ಇದೆ. ಕವಿರಾಜ್ ಅವರ ಸಾಹಿತ್ಯಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ರಾಜೇಶ್ ಕೃಷ್ಣನ್ ಕಂಠದಲ್ಲಿ ಹಾಡಿಗೆ ಇನ್ನೊಂದಿಷ್ಟು ಮಾಧುರ್ಯತೆ ಸಿಕ್ಕಿದೆ. ಶ್ರೀವಾರಿ ಟಾಕೀಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರವಿದು. ವಿಶೇಷವೆಂದರೆ ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ಮಾಸ್ತಿ.



