ಅಭಿಷೇಕ್ ಅಂಬರೀಷ್ ಕನ್ನಡದಲ್ಲಿ ನಟಿಸಿರುವುದು ಒಂದೇ ಸಿನಿಮಾ. ಅಮರ್. ಆ ಚಿತ್ರ ಸೋತಿತ್ತಾದರೂ ಅಂಬರೀಷ್ ಮಗ ಎಂಬ ಕಾರಣಕ್ಕೆ ಸಿನಿಮಾ ಮೆಚ್ಚಿಕೊಂಡಿದ್ದರು. ಹಾಡುಗಳು ಚೆನ್ನಾಗಿದ್ದವು. ಆದರೆ ಅಭಿಷೇಕ್ ಅಂಬರೀಷ್ ದೇಹಭಾಷೆ ವಿಚಿತ್ರವಾಗಿತ್ತ. ಇವರಿಗೆ ಡ್ಯಾನ್ಸ್ ಬರಲ್ಲ ಎಂದೇ ಅಂದುಕೊಂಡಿದ್ದರು. ಹಾಗೆ ಅಂದುಕೊಂಡಿದ್ದವರಿಗೆಲ್ಲ ಶಾಕ್ ಕೊಡುವಂತೆ ಡ್ಯಾನ್ಸ್ ಮಾಡಿದ್ದಾರಂತೆ ಅಭಿಷೇಕ್ ಅಂಬರೀಷ್. ಅದೂ ದುನಿಯಾ ಸೂರಿ ನಿರ್ದೇಶನ ಮಾಡಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ. ಡ್ಯಾನ್ಸ್ ಸಖತ್ತಾಗಿದೆ ಎನ್ನುವುದು ಚಿತ್ರತಂಡದವರ ಮಾತು.
ಕಡಿಮೆ ಬಜೆಟ್‍ನಲ್ಲಿ ನಿರ್ಮಾಣ ಮಾಡಬಹುದಾದ ಒಂದು ಚಿತ್ರದ ಬಜೆಟ್‍ನ್ನು ಒಂದು ಹಾಡಿಗಾಗಿ ಖರ್ಚು ಮಾಡಿ ಸೆನ್ಸೇಷನ್ ಸೃಷ್ಟಿಸಿದೆ ಬ್ಯಾಡ್ ಮ್ಯಾನರ್ಸ್. ಅಭಿಷೇಕ್ ಅಂಬರೀಷ್, ರಚಿತಾ ರಾಮ್, ಪ್ರಿಯಾಂಕಾ ಕಮರ್ ನಟಿಸಿರುವ ಚಿತ್ರ ಬ್ಯಾಡ್ ಮ್ಯಾನರ್ಸ್. 2ನೇ ಚಿತ್ರದಲ್ಲಿಯೇ ಅಭಿಷೇಕ್, ಕಾಪ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರವಿದು. ಈ ಚಿತ್ರಕ್ಕಾಗಿ ಈಗಾಗಲೇ 150ಕ್ಕೂ ಹೆಚ್ಚು ದಿನಗಳ ಶೂಟಿಂಗ್ ಆಗಿದೆ. ಈಗ ಹಾಡಿನ ಸರದಿ.
ಚಿತ್ರದಲ್ಲಿನ ಇಂಟ್ರೊಡಕ್ಷನ್ ಹಾಡಿಗೆ ಭರ್ಜರಿ ಸೆಟ್ ಹಾಕಲಾಗಿದ್ದು, ಈ ಹಾಡಿಗಾಗಿಯೇ 1 ಕೋಟಿಗೂ ಹೆಚ್ಚು ಬಜೆಟ್ ಮೀಸಲಿಟ್ಟು ಖರ್ಚು ಮಾಡಿದ್ದಾರಂತೆ.
ಈ ಹಾಡಿಗಾಗಿ ಸುಮಾರು ಮೂರು ದುಬಾರಿ ಸೆಟ್ಗಳನ್ನು ಹಾಕಲಾಗಿತ್ತು. ಎರಡೆರಡು ಸ್ಟುಡಿಯೋಗಳಲ್ಲಿ ಸೆಟ್ ಹಾಕಿ ಇಂಟ್ರೊಡಕ್ಷನ್ ಹಾಡನ್ನು ಅನ್ನು ಶೂಟ್ ಮಾಡಲಾಗಿದ್ಯಂತೆ. ಸುಮಾರು ಆರು ದಿನಗಳ ಕಾಲ ಅಭಿಷೇಕ್ ಅಂಬರೀಷ್ ಇಂಟ್ರೊಡಕ್ಷನ್ ಹಾಡನ್ನು ಶೂಟ್ ಮಾಡಲಾಗಿದ್ಯಂತೆ. ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ರುದ್ರ ಅನ್ನೋ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.
ಈ ಹಾಡಿನ ಚಿತ್ರೀಕರಣದ ಹಿಂದೊಂದು ಕಥೆಯೂ ಇದೆ. ಸೂರಿಯವರ ನಿರ್ದೇಶನದ ಹಿಟ್ ಸಿನಿಮಾಗಳಲ್ಲೊಂದು ಜಾಕಿ. ಆ ಚಿತ್ರದ ಜಾಕಿ ಜಾಕಿ ಹಾಡು ಭರ್ಜರಿ ಹಿಟ್. ಇವತ್ತಿಗೂ ಹಾಡು ಕೇಳುತ್ತಿದ್ದರೆ ಹೆಜ್ಜೆ ಹಾಕುವ ಮನಸ್ಸಾಗುತ್ತದೆ. ಹಾಡಿನ ಮೇಕಿಂಗ್ ಕೂಡಾ ಸಖತ್ತಾಗಿತ್ತು. ಅದೇ ಮಾದರಿಯಲ್ಲಿ ಈ ಹಾಡೂ ಹಿಟ್ ಆಗಬೇಕು ಎಂದು ಪ್ಲಾನ್ ಮಾಡಿಯೇ ಚಿತ್ರೀಕರಣ ಮಾಡಿದ್ದಾರಂತೆ ಸೂರಿ. ಈ ಹಾಡಿನಲ್ಲಿ ಅಭಿಷೇಕ್ ಸಖತ್ತಾಗಿ ಡ್ಯಾನ್ಸ್ ಮಾಡಿದ್ದಾರೆ ಅನ್ನೋದು ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ. ಹೇಗಿರುತ್ತೆ ಅಭಿಷೇಕ್ ಡ್ಯಾನ್ಸ್..? ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ರೆಡಿಯಾಗಲಿದೆ.



