ಪುನೀತ್ ರಾಜ್ ಕುಮಾರ್ ನಿಧನರಾದ ನಂತರ ಎಷ್ಟೋ ಮನೆಗಳಿಗೆ, ಅಭಿಮಾನಿಗಳಿಗೆ ದೇವರೇ ಆಗಿಬಿಟ್ಟಿದ್ದಾರೆ. ಎಷ್ಟೋ ಮನೆಗಳಲ್ಲಿ ಅಪ್ಪು ಫೋಟೋ ಪೂಜಾಗೃಹಗಳಲ್ಲಿ ಸ್ಥಾನ ಪಡೆದಿದೆ. ಪುನೀತ್ ಸಮಾಧಿ ಸಮೀಪ ದೇವಸ್ಥಾನದಂತೆಯೇ ಆಚರಣೆ ನಡೆಯುತ್ತಿದೆ. ಪುನೀತ್ ಫೋಟೋ ತೆಗೆದುಕೊಂಡು ಅಯ್ಯಪ್ಪ ದರ್ಶನಕ್ಕೆ ಹೋದ ಅಪ್ಪು ಅಭಿಮಾನಿ ಅಯ್ಯಪ್ಪ ಭಕ್ತರನ್ನು ನೋಡಿದ್ದೀರಿ. ಇದು ಅದರ ಮುಂದುವರೆದ ಭಾಗ. ಸ್ವತಃ ಪುನೀತ್ ರಾಜ್ ಕುಮಾರ್ ಮಾಲೆ ಶುರುವಾಗಿದೆ. ಹೊಸಪೇಟೆಯಿಂದ.
ಅಯ್ಯಪ್ಪ ಸ್ವಾಮಿಗೆ ಹೋಗುವವರು ಮಾಲೆ ಹಾಕುವುದು, 41 ದಿನಗಳ ವ್ರತ ಆಚರಿಸುವುದು ಸಾಮಾನ್ಯ. ಚಿಕ್ಕಮಗಳೂರಿನ ದತ್ತಪೀಠಕ್ಕೆ ಹೋಗುವವರು ದತ್ತಮಾಲೆ ಧರಿಸುತ್ತಾರೆ. ಹನುಮ ಜಯಂತಿಗೆ ಕೂಡಾ ಮಾಲೆ ಧರಿಸುತ್ತಾರೆ. ಹಲವು ದೇವರುಗಳಿಗೆ ಹಲವು ರೀತಿಯ ಆಚರಣೆ, ವ್ರತಗಳಿವೆ. ಆದರೆ ಇದೀಗ ಈ ಮಾಲೆಗೆ ಹೊಸದೊಂದು ಸೇರ್ಪಡೆಯಾಗಿದೆ. ಪುನೀತ್ ರಾಜ್ ಕುಮಾರ್ ಮಾಲೆ.ವಿಶೇಷ ಅದಲ್ಲ, ಅಪ್ಪು ಮಾಲೆ. ಶಬರಿಮಲೆಯಂತೆಯೇ ಪುನೀತ್ ಕ್ಷೇತ್ರವಾಗಿರುವುದು ಹೊಸಪೇಟೆಯ ಪುನೀತ್ ಪ್ರತಿಮೆಯ ಕ್ಷೇತ್ರ.
ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅಪ್ಪು ದೇವರ ಮಾಲೆ ಧರಿಸಲು ನಿರ್ಧರಿಸಿದ್ದಾರೆ. ಅಯ್ಯಪ್ಪ ಸ್ವಾಮಿ ಮಾಲೆಯ ರೀತಿಯಲ್ಲಿ ಈ ವ್ರತ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಕರಪತ್ರದ ಫೋಟೋ ವೈರಲ್ ಆಗಿದೆ. ಹೊಸಪೇಟೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಇದೆ. ಹೊಸಪೇಟೆಯ ಅಪ್ಪು ಅಭಿಮಾನಿಗಳ ಸಂಘದವರು ಈ ಮಾಲೆ ಧರಿಸುತ್ತಿದ್ದಾರೆ. ಮಾರ್ಚ್ 1ರಿಂದ ಅಭಿಮಾನಿಗಳು ಮಾಲೆ ಹಾಕಬಹುದು. ಮಾರ್ಚ್ 17ರ ತನಕ ವ್ರತ ಆಚರಿಸಬೇಕು. ಮಾರ್ಚ್ 18ರಂದು ಪುನೀತ್ ರಾಜ್ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಬೇಕು.
ಅಪ್ಪು ದೇವರ ಮಾಲೆಯ ವ್ರತದಲ್ಲಿ ಒಂದಿಷ್ಟು ಪದ್ಧತಿಗಳನ್ನು ವೈರಲ್ ಆಗಿರುವ ಫೋಟೋದಲ್ಲಿ ಹೇಳಲಾಗಿದೆ. ಅಪ್ಪು ಫೋಟೋ ಇರುವ ಡಾಲರ್ ಧರಿಸಬೇಕು. ಕೇಸರಿ ಶಾಲು, ಪಂಚೆ, ಶರ್ಟ್ ಧರಿಸಬೇಕು. ಅಪ್ಪು ಫೋಟೋ ಇಟ್ಟು ಪೂಜೆ ಮಾಡಬೇಕು. ಬೆಳಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಮತ್ತು ಸಂಜೆ ಸೂರ್ಯ ಮುಳುಗಿದ ನಂತರ ಸ್ನಾನ ಮಾಡಬೇಕು. ಅಪ್ಪು ದೇವರ ಮಾಲೆ ಧರಿಸುವವರು ಯಾವುದೇ ಕೆಟ್ಟ ಚಟಗಳನ್ನು ಮಾಡಬಾರದು. ಅಭಿಮಾನಿಗಳು 11, ಐದು ಮತ್ತು ಒಂದು ದಿನದ ಮಾಲೆ ಧರಿಸಬಹುದು. ದಿನಸಿ ವಸ್ತುಗಳಿರುವ ಇಡುಮುರಿಯನ್ನು ಹೊತ್ತು ಪುನೀತ್ ರಾಜ್ಕುಮಾರ್ ಅವರ ಪುಣ್ಯಭೂಮಿಗೆ ತೆರಳಬೇಕು. ಅಪ್ಪು ಮಾಲೆ ಧರಿಸಿದವರು ಪುಣ್ಯಭೂಮಿಯ ದರ್ಶನ ಪಡೆದುಬಂದು ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾಹ ಮಾಡಿ, ಬಳಿಕ ವಿರೂಪಾಕ್ಷ ದೇವರಿಗೆ ಪೂಜೆ ಸಲ್ಲಿಸಿ ಮಾಲೆ ವಿಸರ್ಜಿಸತಕ್ಕದ್ದು ಎಂದು ಕರಪತ್ರದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಆದರೆ ಇದನ್ನು ಆಚರಿಸುತ್ತಿರುವ ಬಗ್ಗೆ ಹೊಸಪೇಟೆಯ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ಹೆಸರಲ್ಲಿ ಫೋಟೋ ವೈರಲ್ ಆಗಿದೆ. ಇದಕ್ಕೆ ದೊಡ್ಮನೆಯ ಸದಸ್ಯರ ಅನುಮತಿ ಇದೆಯೇ.. ಕೇಳಿದ್ದಾರೆಯೇ ಗೊತ್ತಿಲ್ಲ. ಅಭಿಮಾನಿಗಳು ಕಂಡ ಕಂಡಲ್ಲಿ ಕಾಲಿಗೆ ಬೀಳುವುದನ್ನೇ ವಿರೋಧಿಸುತ್ತಿದ್ದ ಅಪ್ಪು, ಈಗ ದೇವರಂತೆಯೇ ಪೂಜಿಸಲ್ಪಡುತ್ತಿರುವುದು ವಿಶೇಷ. ಅಭಿಮಾನಿ ದೇವರುಗಳೇ ಹಾಗೆ. ತಾವು ಪ್ರೀತಿಸಿದವರನ್ನು ಹೃದಯದಲ್ಲಿಟ್ಟುಕೊಳ್ಳುತ್ತಾರೆ. ತಮ್ಮನ್ನು ಪ್ರೀತಿಸಿದವರನ್ನು ದೇವರನ್ನೇ ಮಾಡಿಬಿಡುತ್ತಾರೆ.



