ವರಾಹರೂಪಂ.. ದೈವವರೀತಂ.. ಈ ಹಾಡಿಗೆ ಪ್ರೇಕ್ಷಕರು ಮರುಳಾಗಿದ್ದಾರೆ. ಭಾವಪರವಶರಾಗಿದ್ದಾರೆ. ಆದರೆ ಈ ಭಾವಪರವಶತೆಗೆ ಆಗಾಗ್ಗೆ ಬ್ರೇಕ್ ಬೀಳುತ್ತಲೇ ಇದೆ. ಈ ಹಾಡು ವೊರಿಜಿನಲ್ಲಾ.. ಕದ್ದಿದ್ದಾ ಅನ್ನೋ ತೀರ್ಮಾನ ಕೋರ್ಟಿನಲ್ಲಿ ಆಗಬೇಕಿದೆ. ಹೀಗೆ ಕೋರ್ಟಿನಲ್ಲಿಯೇ ಇರುವ ವರಾಹರೂಪಂ ಹಾಡಿಗೆ ಮತ್ತೊಮ್ಮೆ ಶಾಕ್ ಸಿಕ್ಕಿದ್ದು, ಹಾಡನ್ನು ಬಳಸದಂತೆ ಕೇರಳದ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆ ‘ನವರಸಂ’ ಹಾಡಿನ ಟ್ಯೂನ್ ಕದ್ದಿದ್ದಾರೆ ಎಂದು ಥೈಕ್ಕುಡಂ ಬ್ರಿಡ್ಜ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿತ್ತು. ನಂತರ ಕೋರ್ಟ್ ಮೆಟ್ಟಿಲೇರಿತ್ತು.
‘ನವರಸಂ’ ಸಾಂಗ್ ಕೇಳಿ ಇನ್ಸ್ಪೈರ್ ಆಗಿರೋದು ನಿಜ. ಇನ್ನುಳಿದಂತೆ ಆ ಹಾಡಿಗೂ ಈ ಹಾಡಿಗೂ ಸಂಬಂಧವೇ ಇಲ್ಲ. ಸಂಗೀತದ ಸೂಕ್ಷ್ಮಗಳು ಗೊತ್ತಿರುವವರಿಗೆ ಇದು ಗೊತ್ತಾಗುತ್ತದೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಆರಂಭದಲ್ಲಿ ಕೇಸು ದಾಖಲಾದ ತಕ್ಷಣ ತಡೆಯಾಜ್ಞೆ ನೀಡಲಾಗಿತ್ತು. ಆದರೆ ಆನಂತರ ಸುಪ್ರೀಂಕೋರ್ಟಿನಲ್ಲಿ ಹಾಡಿನ ಸ್ಥಳೀಯ ನ್ಯಾಯಾಲಯದ ತಡೆಯಾಜ್ಞೆ ತೆರವು ಮಾಡಲಾಗಿತ್ತು. ಹಾಡಿನ ಬಳಕೆಗೆ ಅನುಮತಿ ಸಿಕ್ಕಿತ್ತು. ಆದರೆ ವಿಚಾರಣೆಯನ್ನು ಕೇರಳ ಕೋರ್ಟಿನಲ್ಲೇ ನಡೆಸಬೇಕು ಎಂದು ಸೂಚನೆ ನೀಡಲಾಗಿತ್ತು.
ಇದೀಗ ಕೇರಳದ ಕೋಯಿಕ್ಕೋಡ್ ನ್ಯಾಯಾಲಯ ಹಾಡಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ವಶಪಡಿಸಿಕೊಳ್ಳುವಂತೆ ಆದೇಶ ನೀಡಿದ್ದು, ಮಧ್ಯಂತರ ತಡೆಯಾಜ್ಞೆ ನೀಡಿದೆ. ಒಟ್ಟಿನಲ್ಲಿ ಕಾಂತಾರದ ಮ್ಯೂಸಿಕ್ ಕೋರ್ಟಿನ ಮೆಟ್ಟಿಲಲ್ಲಿ ನಿರ್ಧಾರವಾಗುತ್ತಿದೆ.



