ಡಾ.ರಾಜ್ ಈಗಿಲ್ಲ. ಭೌತಿಕವಾಗಿ ಇಲ್ಲ. ಆದರೆ.. ಕೋಟ್ಯಂತರ ಹೃದಯಗಳಲ್ಲಿ ಅವರು ಇಂದಿಗೂ ಜೀವಂತ. ಚಿತ್ರ ರಸಿಕರ ಹೃದಯಗಳ ಅರಮನೆಯಲ್ಲಿ ಅವರೇ ಇಂದಿಗೂ ರಾಜಕುಮಾರ. ಅಂತಹ ರಾಜ್ ಕುಮಾರ್ ಚಿತ್ರಗಳಲ್ಲಿ ಆಗಾಗ್ಗೆ ಬರುತ್ತಲೇ ಇರುತ್ತಾರೆ. ಯಾವುದೋ ದೃಶ್ಯಗಳಲ್ಲಿ, ಸಂಭಾಷಣೆಗಳಲ್ಲಿ ರಾಜ್ ಬಂದು ಹೋಗುತ್ತಲೇ ಇರುತ್ತಾರೆ. ರಾಜ್ ಕುಮಾರ್ ಅಭಿಮಾನಿ ಪಾತ್ರಗಳೇ ಸಿನಿಮಾಗಳಾಗಿವೆ. ಕನ್ನಡದ ಸಂಭಾಷಣೆ ಇದ್ದರೆ, ಅಲ್ಲಿ ರಾಜ್ ಇರಲೇಬೇಕು. ಹೀಗಿರುವಾಗ..
ಡಾ.ರಾಜ್ ಹುಟ್ಟುಹಬ್ಬಕ್ಕೆ ಚಿತ್ರರಂಗದವರು ಹಾಗೂ ಅಭಿಮಾನಿಗಳು ಶುಭ ಕೋರಿದ್ದೇ ವಿಶೇಷ. ಇದು ಕನ್ನಡಿಗರ ನಾಡಹಬ್ಬ. ಪ್ರತಿ ವರ್ಷವೂ ವಿಶೇಷವಾಗಿಯೇ ಮಾಡಬೇಕು ಎನ್ನುವವರಿಗೆ ಅಣ್ಣಾವ್ರ ಹುಟ್ಟುಹಬ್ಬ ಚಾಲೆಂಜ್ ಕೂಡಾ ಹೌದು. ಘೋಸ್ಟ್ ಚಿತ್ರತಂಡ ಆ ಸವಾಲನ್ನು ವಿಶೇಷವಾಗಿ ಸ್ವೀಕರಿಸಿದೆ.
ಶ್ರೀನಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಶಿವ ರಾಜ್ ಕುಮಾರ್ ಹೀರೋ ಆಗಿದ್ದಾರೆ. ಆ ಚಿತ್ರದಲ್ಲಿ ಇದ್ದಕ್ಕಿದ್ದಂತೆ ಒಂದು ಸೀನ್`ನಲ್ಲಿ ಡಾ.ರಾಜ್ ಬರುತ್ತಾರೆ. ಅದು ಗ್ರಾಫಿಕ್ಸ್ ಮಾಯೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಈ ಗ್ರಾಫಿಕ್ಸ್ ಸೃಷ್ಟಿಸಲಾಗಿದ್ದು, ಸಖತ್ ಇಂಪ್ರೆಸಿವ್ ಆಗಿದೆ.
ಇದು ಡೀಪ್ ಫೇಕ್ ಅನ್ನೋ ಒಂದು ಟೆಕ್ನಾಲಜಿ. ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮಷಿನ್ ಲರ್ನಿಂಗ್. ಒಂದಿಷ್ಟು ಅಣ್ಣಾವ್ರ ಫೋಟೊಗಳನ್ನು ಹಾಗೂ ವಿಡಿಯೋಗಳನ್ನು ಕೊಟ್ಟರೆ, ಅದು ಅಣ್ಣಾವ್ರ ಹಾವಭಾವವನ್ನು ಕಲಿಯುತ್ತೆ. ಈಗ ನಾವು ಶಿವಣ್ಣ ಆಕ್ಟ್ ಮಾಡಿರುವ ವಿಡಿಯೋದಲ್ಲಿ ಶಿವಣ್ಣನನ್ನು ರಿಪ್ಲೇಸ್ ಮಾಡುವುದಕ್ಕೆ ಟ್ರೈ ಮಾಡಿದ್ವಿ. ಅದು ಒಂದೇ ತರ ಬಾಡಿ ಲಾಂಗ್ವೇಜ್ ಇರೋದ್ರಿಂದ ಹೊಂದಾಣಿಕೆ ಆಯ್ತು. ಅಣ್ಣಾವ್ರು ಗೆಸ್ಟ್ ಅಪಿಯರೆನ್ಸ್ ಬರೋದು. ಅಣ್ಣಾವ್ರು ಇಡೀ ಸಿನಿಮಾದಲ್ಲಿ ಮಾಡುವಂತಹದ್ದು, ಶಿವಣ್ಣ ಅಣ್ಣಾವ್ರು ಮಾಡುವಂತಹದ್ದು ಏನೋ ಮಾಡಬಹುದು. ಆ ಪ್ರಯತ್ನದ ಹಾದಿಯಲ್ಲಿ ಇದು ಮೊದಲ ಹೆಜ್ಜೆ. ಇದು ಟೈಮ್ ತೆಗೆದುಕೊಳ್ಳುತ್ತೆ. ಬರೀ 20 ಸೆಕೆಂಡ್ ವಿಡಿಯೋ ಮಾಡೋದಿಕ್ಕೆ ಒಂದು ವಾರ ತೆಗೆದುಕೊಂಡಿದೆ ಎಂದು ವಿವರಣೆ ಕೊಟ್ಟಿದ್ದಾರೆ ಶ್ರೀನಿ.
5 ವರ್ಷದ ಹಿಂದೆ ಶಂಕರ್ ನಾಗ್ ಅವರನ್ನು ಈ ರೀತಿ ತೋರಿಸಿದ್ರೆ ಹೇಗೆ ಅನ್ನೋ ಆಲೋಚನೆ ಬಂದಿತ್ತು. ಆದರೆ ಆಗ ಟೆಕ್ನಾಲಜಿ ಇರಲಿಲ್ಲ. ಈಗ ಟೆಕ್ನಾಲಜಿ ಇದೆ ಎಂದಿರೋ ಶ್ರೀನಿ, ಇದನ್ನು ಶಿವಣ್ಣಂಗೆ ತೋರಿಸಿದಾಗ ಸಖತ್ ಎಕ್ಸೈಟ್ ಆಗಿದ್ರು. ಹೇಗೆ ಮಾಡಿದ್ರಿ, ಯಾವ್ ಟೆಕ್ನಾಲಜಿ ಅಂತೆಲ್ಲ ವಿವರ ತಗೊಂಡ್ರು ಎಂದಿದ್ದಾರೆ ಶ್ರೀನಿ. ಅಂದಹಾಗೆ ಇದು ರಾಜ್ ಹುಟ್ಟುಹಬ್ಬಕ್ಕೆ ಮಾಡಿರುವ ಸ್ಪೆಷಲ್ ವಿಡಿಯೋ ಅಷ್ಟೇ ಹೊರತು, ಸಿನಿಮಾದಲ್ಲಿ ಅಣ್ಣಾವ್ರು ಇರಲ್ಲ.



