ಆರ್ಯವರ್ಧನ-ಅನು ಸಿರಿಮನೆ. ಕಳೆದ 4 ವರ್ಷಗಳಿಂದ ಮನೆ ಮನೆ ಮಾತಾಗಿದ್ದರು. ಮನೆಯ ಸದಸ್ಯರೇ ಆಗಿ ಹೋಗಿದ್ದರು. ಶಿಂಧೆ, ಮೀರಾ ಹೆಗ್ಡೆ, ಹರ್ಷವರ್ಧನ್, ಮಾನಸಿ ಹರ್ಷವರ್ಧನ್, ಪುಷ್ಪ ಸಿರಿಮನೆ, ಸುಬ್ರಹ್ಮಣ್ಯ ಸಿರಿಮನೆ, ಪ್ರಭು ದೇಸಾಯಿ.. ಎಲ್ಲರೂ ಮನೆ ಮನೆಯ ಪಾತ್ರಗಳಾಗಿದ್ದವರು. ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ (ಶಾರದಾದೇವಿ) ಪಾತ್ರಗಳ ಜೊತೆ ಮಧ್ಯೆ ಪೃಥ್ವಿ ಅಂಬರ್, ಸುಧಾರಾಣಿ ಕೂಡಾ ಅತಿಥಿ ಪಾತ್ರಗಳಲ್ಲಿ ಬಂದು ಹೋಗಿದ್ದರು.
ಜೊತೆ ಜೊತೆಯಲಿ. ಸುಮಾರು 4 ವರ್ಷಗಳ ಹಿಂದೆ ಶುರುವಾದ ಧಾರಾವಾಹಿ ಕೊನೆಗೂ ಅಂತ್ಯಕಂಡಿದೆ. 951 ಎಪಿಸೋಡುಗಳ ಬಳಿಕ ಧಾರಾವಾಹಿ ಎಂಡ್ ಆಗಿದೆ. ಹೆಲಿಕಾಪ್ಟರ್, ಅರಮನೆ, ವಠಾರ.. ಹೀಗೆ ಅದ್ಧೂರಿತನ, ಹೊರಾಂಗಣದಲ್ಲೂ ಅದ್ಧೂರಿತನ ತಂದಿದ್ದ ಜೊತೆ ಜೊತೆಯಲಿ, ಧಾರಾವಹಿಗಳ ಬಜೆಟ್ ಮತ್ತು ಕ್ವಾಲಿಟಿ ಎರಡನ್ನೂ ಹೆಚ್ಚಿಸಿತ್ತು.
ಈ ಧಾರಾವಾಹಿಯ ವಿಶೇಷತೆಯೆಂದರೆ ಆರ್ಯವರ್ಧನ್ ಮತ್ತು ಅನು ಸಿರಿಮನೆ ಕ್ಯಾರೆಕ್ಟರ್‍ಗಳು ಸ್ಟಾರ್ ಆಗಿದ್ದು. ಅನಿರುದ್ಧ-ಮೇಘಾ ಶೆಟ್ಟಿ ಜೋಡಿ, ವಿಷ್ಣು-ಭಾರತಿ ಜೋಡಿಯಂತೆಯೇ ಫೇಮಸ್ ಆಗಿದ್ದು ಸುಳ್ಳಲ್ಲ. ಅನಿರುದ್ಧ ಅವರ ಸ್ಟೈಲ್ ನೋಡಿದ ಜನ, ವಿಷ್ಣು ಅವರನ್ನೇ ಕಂಡಂತೆ ಥ್ರಿಲ್ ಆದರು. ಅದರ ಲಾಭವಾಗಿದ್ದು ಜೊತೆ ಜೊತೆಯಲಿ ಸೀರಿಯಲ್ಲಿಗೆ. ಟಿಆರ್‍ಪಿಯಲ್ಲಿ ಸತತ ನಂ.1 ಪಟ್ಟ ಕಾಯ್ದುಕೊಂಡಿದ್ದ ಜೊತೆ ಜೊತೆಯಲಿ ಕನ್ನಡ ಸೀರಿಯಲ್ಲುಗಳ ಹಣೆ ಬರಹ ಬದಲಿಸಿದ್ದು ಸುಳ್ಳಲ್ಲ.


ಸೀರಿಯಲ್ ಮುಗಿದರೂ, ಧಾರಾವಾಹಿಯ ತಂಡದ ಸದಸ್ಯರ ಜೊತೆ ಈಗಲೂ ಅದೇ ಬಾಂಧವ್ಯ ಇಟ್ಟುಕೊಂಡಿರುವ ಅನಿರುದ್ಧ, ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಮೇಘಾ ಶೆಟ್ಟಿಯವರಂತೂ ಅನಿರುದ್ಧ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರಷ್ಟೇ ಅಲ್ಲ, ಇನ್ನು ಮುಂದೆ ಸಿನಿಮಾಗಳತ್ತ ಗಮನ ಹರಿಸುತ್ತೇನೆ. ಅನು ಸಿರಿಮನೆ ಪಾತ್ರದಿಂದ ಹೊರಬರಬೇಕಿದೆ ಎಂದಿದ್ದಾರೆ. ಆರೂರು ಜಗದೀಶ್ ಆಗಲೇ ಹೊಸ ಪ್ರಾಜೆಕ್ಟಿನಲ್ಲಿ ಬ್ಯುಸಿಯಾಗಿದ್ದಾರೆ.
ಒಟ್ಟಿನಲ್ಲಿ ಹಲವು ವಿವಾದಗಳ ನಂತರ ಅನಿರುದ್ಧ ಅವರನ್ನು ಹೊರಹಾಕಿದ್ದ ಜೊತೆ ಜೊತೆಯಲ್ಲಿ ಟಿಆರ್‍ಪಿ ರೇಸಿನಲ್ಲಿ ಉಳಿದದ್ದು ಕೇವಲ ಎರಡು ವಾರ. ಅದಾದ ಮೇಲೆ ಕುಸಿಯಲು ಶುರುವಾದ ಧಾರಾವಾಹಿಯ ವೀಕ್ಷಕರು, ಮತ್ತೆ ವಾಪಸ್ ಆಗಲೇ ಇಲ್ಲ. ಜೊತೆಗೆ ಸೀರಿಯಲ್ಲಿನ ಉಳಿದ ಕಲಾವಿದರು ಅಸಹಾಕಾರ ತೋರುವುದಕ್ಕೆ ಶುರು ಮಾಡಿದರು. ಇಡೀ ತಂಡವೇ ನಿರ್ದೇಶಕರ ವಿರುದ್ಧ ತಿರುಗಿಬಿದ್ದಾಗ, ಏನೂ ಮಾಡಲಾಗದೆ ಆರೂರು ಜಗದೀಶ್ ಧಾರಾವಾಹಿಯನ್ನು ಮುಕ್ತಾಯಗೊಳಿಸಿದರು.



