ಹೇಳೇ ಕನ್ನಡತಿ.. ನೀ ಯಾಕೆ ಹಿಂಗಾಡ್ತಿ.. ವಿಷ್ಣುವರ್ಧನ್ ಅವರ ಅಪ್ಪಾಜಿ ಚಿತ್ರದ ಈ ಹಾಡು ಇಂದಿಗೂ ಅಚ್ಚುಮೆಚ್ಚು. ಈ ಹಾಡಿನಲ್ಲಿ ಕನ್ನಡತಿಯಾಗಿ ನಟಿಸಿದ್ದವರು ಆಮನಿ. ಆದರೆ ಈಕೆ ಪರಭಾಷೆಯವರಲ್ಲ. ಅಪ್ಪಟ ಕನ್ನಡತಿ. ಆದರೆ ಕನ್ನಡದಲ್ಲಿ ನಟಿಸಿದ್ದು ಮಾತ್ರ ಎರಡೇ ಎರಡು ಚಿತ್ರಗಳಲ್ಲಿ. ಅಪ್ಪಾಜಿ ಹಾಗೂ ಬಾಳಿನ ಜ್ಯೋತಿ ಚಿತ್ರಗಳಲ್ಲಿ ಮಾತ್ರ. ಈ ಅಮನಿ ಇತ್ತೀಚೆಗೆ ತಮಗೆ ಆಗಿದ್ದ ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟಿದ್ದಾರೆ.
ನಾನು ಸಾಮಾನ್ಯವಾಗಿ ಅಮ್ಮನ ಜೊತೆ ಆಡಿಷನ್‌ಗಳಿಗೆ ಹೋಗುತ್ತಿದ್ದೆ. ತಾಯಿ ಜೊತೆ ಬಂದರೆ ಅವಕಾಶಗಳು ಸಿಗೊಲ್ಲ. ಕೆಲಸ ನಡೆಯಲ್ಲ ಎನ್ನುತ್ತಿದ್ದರು. ಕೆಲವರು ಸೆಲೆಕ್ಟ್ ಮಾಡುತ್ತಿದ್ದರು. ಕೆಲವರು ರಿಜೆಕ್ಟ್ ಮಾಡುತ್ತಿದ್ದರು. ಆದರೆ ಹೇಳ್ತೀವಿ ಎಂದು ಹೇಳಿ ಕಳುಹಿಸುತ್ತಿದ್ದರು. ಯಾಕೆ ಹೀಗೆ ಅನ್ನೋದು ಮೊದ ಮೊದಲು ಗೊತ್ತಾಗಲಿಲ್ಲ. ಒಬ್ಬರು ಫೋನ್ ಮಾಡಿ, ಮೇಡಂ ನಿರ್ದೇಶಕರು ಐಡಿಯಲ್ ಬೀಚ್ ರೆಸಾರ್ಟ್‌ಗೆ ಬರೋಕೆ ಹೇಳಿದ್ದಾರೆ. ಮೇಕಪ್ ಟೆಸ್ಟ್ಗೆ ಎಂದರು. ಅಮ್ಮ ಬರೋದು ಬೇಡ. ನೀವು ಮಾತ್ರ ಒಂಟಿಯಾಗಿ ಬನ್ನಿ ಎಂದಿದ್ದರು. ಯಾಕೆ ಹೀಗೆ ಹೇಳಿದರು ಎನ್ನುವುದು ಎನ್ನುವುದು ನನಗೆ ನಿಧಾನವಾಗಿ ಅರ್ಥವಾಯಿತು. ಈ ರೀತಿ ಸಾಕಷ್ಟು ಬಾರಿ ಆಗಿದೆ. ಅಮ್ಮ ಇಲ್ಲದೇ ನನ್ನೊಬ್ಬಳನ್ನೇ ಯಾಕೆ ಬರೋಕೆ ಹೇಳುತ್ತಿದ್ದರು ಎನ್ನುವುದು ಗೊತ್ತಾಯಿತು. ಅಡ್ಡದಾರಿಯಲ್ಲಿ ಇಂಡಸ್ಟ್ರಿಗೆ ಬರೋದು ನನಗೆ ಇಷ್ಟ ಇರಲಿಲ್ಲ. ಅದಕ್ಕೆ ನನ್ನ ಬೆಳ್ಳಿತೆರೆ ಎಂಟ್ರಿ 2 ವರ್ಷ ಹಿಡೀತು ಎಂದು ಹೇಳಿಕೊಂಡಿದ್ದಾರೆ ಆಮನಿ. ಆದರೆ ಆ ನಿರ್ದೇಶಕ ಯಾರು ಎಂದು ಹೇಳಿಲ್ಲ.
ಕನ್ನಡದಕ್ಕಿಂತ ಹೆಚ್ಚಾಗಿ ತೆಲುಗು, ತಮಿಳಿನಲ್ಲೇ ನಟಿಸಿದ ಆಮನಿ ಸ್ಟಾರ್ಗಳಾದ ವಿಷ್ಣುವರ್ಧನ್, ಕಮಲ್ ಹಾಸನ್, ನಾಗಾರ್ಜುನ, ಬಾಲಕೃಷ್ಣ, ಮಮ್ಮೂಟಿ, ಕೃಷ್ಣ, ಅರವಿಂದ ಸ್ವಾಮಿ, ಜಗಪತಿ ಬಾಬು ಮೊದಲಾದವರ ಜೊತೆ ನಟಿಸಿದ್ದಾರೆ. ಮಿಸ್ಟರ್ ಪೆಳ್ಳಾಂ, ಶುಭ ಲಗ್ನಂ, ಆ ನಲುಗುರು, ಶುಭ ಲಗ್ನಂ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ನಟಿಸುತ್ತಿರುವ ಆಮನಿ, ಪೋಷಕ ಪಾತ್ರಗಳಲ್ಲಿ ಬ್ಯುಸಿ.



