ಮೂಗಿಗೆ ಮೂಗುತಿ, ನತ್ತು, ಕಿವಿಯಲ್ಲಿ ತೂಗಾಡುವ ಓಲೆ, ತುಟಿಗೆ ಕೆಂಪು ಬಣ್ಣದ ಲಿಪ್ಸ್ಟಿಕ್ಕು, ತೋಳಿಗೆ ತೋಳುಬಂಧಿ, ಕೊರಳಿಗೆ ಎರಡೆರಡು ಸರ ಜೊತೆಗೆ ನಿಂಬೆ ಹಾರ, ಕೆಂಪು ಬಣ್ಣದ ರವಿಕೆ, ಅದರ ಮೇಲೆ ನೀಲಿ ಸೀರೆ, ಕೈಗೆ ಕೆಂಪು ಬಳೆ, ಉಗುರಿಗೆ ಬಣ್ಣ, ಕೈಗೆ ಮೆಹಂದಿ, ಬೆರಳುಗಳಿಗೆ ಹಲವು ಉಂಗುರ ಧರಿಸಿರುವ ಜೊತೆಗೆ ಕೈಯಲ್ಲಿ ಬಂದೂಕು ಹಿಡಿದು, ಬಹು ತೀಕ್ಷಣ ದೃಷ್ಟಿಯಿಂದ ನೋಡುತ್ತಿರುವ ಅಲ್ಲು ಅರ್ಜುನ್ ಅಂದವಾಗಿ ಕಾಣುತ್ತಿರುವ ಜೊತೆಗೆ ಭಯಾನಕವಾಗಿಯೂ ಕಾಣುತ್ತಿದ್ದಾರೆ. ಯಾರನ್ನೋ ಸಂಹರಿಸಲು ಹೊರಟಂತಿದೆ ಅವರ ಅವತಾರ. ಆದರೆ ಈ ಕಾಳಿ ಅವತಾರದಲ್ಲಿಯೂ ಗಡ್ಡ ಹಾಗೆಯೇ ಬಿಟ್ಟಿದ್ದಾರೆ ಅಲ್ಲು.
ಪುಷ್ಪ. ಕಳೆದ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲೊಂದು. ತೆಲುಗಿನ ಚಿತ್ರ ಕನ್ನಡದಲ್ಲೂ ಡಬ್ ಆಗಿ ಭಾರಿ ಸದ್ದು ಮಾಡಿತ್ತು. ಈಗ ಪುಷ್ಪ ಚಿತ್ರದ ಸೀಕ್ವೆಲ್ ಬಿಡುಗಡೆಗೆ ಮುಹೂರ್ತ ಸಿದ್ಧವಾಗಿದೆ. ಜೊತೆಗೊಂದು ಪೋಸ್ಟರ್. ಆ ಪೋಸ್ಟರ್‍ನ ಲುಕ್ ಇದು.
ಈ ಲುಕ್ ಹೊರಬಿದ್ದಿದ್ದೇ ತಡ, ಕಾಂತಾರದ ಕಾಪಿ ಎಂದು ಶುರುವಿಟ್ಟುಕೊಂಡರು ಕೆಲವರು. ಅಫ್‍ಕೋರ್ಸ್, ಪುಷ್ಪ ಬಂದಾಗ ಇದು ಕೆಜಿಎಫ್ ನಕಲು ಎಂದವರೂ ಇದ್ದರು. ಈಗ ಈ ಗೆಟಪ್ ನೋಡುತ್ತಿದ್ದಂತೆಯೇ ಇದು ಕಾಂತಾರದ ಪಂಜುರ್ಲಿ ರೀತಿ ಅಲ್ಲು ಅರ್ಜುನ್ ಎತ್ತಿರುವ ಅವತಾರ ಎನ್ನುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ, ಸುನಿಲ್, ಅನುಸೂಯ, ರಾವ್ ರಮೇಶ್..ನಟಿಸಿದ್ದ ಚಿತ್ರಕ್ಕೆ ಸುಕುಮಾರ್ ನಿರ್ದೇಶನವಿದೆ. ಪುಷ್ಪದಲ್ಲಿ ಸಾಮಾನ್ಯ ಕೂಲಿಯೊಬ್ಬ ರಕ್ತಚಂದನ ಸ್ಮಗ್ಲಿಂಗ್ ಲೋಕದ ಡಾನ್ ಆಗುವ ಕಥೆಯಿದ್ದರೆ, ಪುಷ್ಪ 2 ರೂಲ್`ನಲ್ಲಿ ಬೇರೆಯದೇ ಕಥೆ ಇದೆ.
ಅಂದಹಾಗೆ ಪುಷ್ಪದಲ್ಲಿ ಒಂದು ಹಾಡಿದೆ, ಆ ಹಾಡಿನಲ್ಲಿ ಗಂಗಮ್ಮ ತಲ್ಲಿ ಎಂಬ ದೇವಿಯ ಹೆಸರು ಬರುತ್ತದೆ. ಗಂಗಮ್ಮ ತಲ್ಲಿ ಎಂದರೆ ಗಂಗಮ್ಮ ತಾಯಿ ಎಂದರ್ಥ. ಈಗ ಅಲ್ಲು ಅರ್ಜುನ್ ಅವತಾರ ಎತ್ತಿರೋ ಈ ವೇಷದ ಮೂಲ ಆ ಗಂಗಮ್ಮ ತಲ್ಲಿಯೇ. ಆ ಅವತಾರ ಎತ್ತೋದು ಯಾಕೆ.. ಈ ಪ್ರಶ್ನೆಗೆ ಉತ್ತರ ಸಿನಿಮಾ ಬರುವವರೆಗೂ ಕಾಯಬೇಕಷ್ಟೆ. ಏಕೆಂದರೆ ಚಿತ್ರದ ಸೀಕ್ವೆಲ್ ಕಥೆಯ ಬಗ್ಗೆ ಸುಳಿವನ್ನೇ ಕೊಟ್ಟಿರಲಿಲ್ಲ ಸುಕುಮಾರ್. ಈಗ ಟೀಸರ್ ಬಂದಿದೆ.


ಆಗ ಕಾಡಿನಲ್ಲಿ ಹುಲಿಗಳ ಚಲನವಲನ ಗುರುತಿಸಲು ಇಟ್ಟಿರುವ ಕ್ಯಾಮೆರಾದ ಎದುರು ಹುಲಿಯೊಂದು ಘರ್ಜಿಸುತ್ತದೆ. ಹಾಗೆ ಘರ್ಜಿಸುತ್ತಿರುವಾಗಲೇ ವ್ಯಕ್ತಿಯೊಬ್ಬ ಹುಲಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಾನೆ. ಹುಲಿ ಎರಡು ಹೆಜ್ಜೆ ಹಿಂದಿಡುತ್ತದೆ. ಅವನೇ ಪುಷ್ಪ. ಕಾಡಿನಲ್ಲಿ ಪ್ರಾಣಿಗಳು ಎರಡು ಹೆಜ್ಜೆ ಹಿಂದೆ ಇಟ್ರೆ, ಹುಲಿ ಬಂದಿದೆ ಅಂತ ಅರ್ಥ.. ಆದ್ರೆ ಹುಲಿನೇ ಎರಡು ಹೆಜ್ಜೆ ಹಿಂದೆ ಇಟ್ರೆ, ಅಲ್ಲಿ ಪುಷ್ಪ ಬಂದಿದ್ದಾನೆ ಅಂತ ಅರ್ಥ.. ಎಂಬ ಡೈಲಾಗ್ ಇದೆ.
ಇದೇ ವೇಳೆ ಚಿತ್ರತಂಡ ಅಲ್ಲು ಅರ್ಜುನ್ ಅವರ ಲುಕ್ ಪೋಸ್ಟರ್ ಮಾಡಿದ್ದು, ಸ್ತ್ರೀದೇವತೆಯ ಗೆಟಪ್ಪಿನಲ್ಲಿದ್ದಾರೆ ಅಲ್ಲು ಅರ್ಜುನ್. ಒಟ್ಟಿನಲ್ಲಿ ಚಿತ್ರದ ಟೀಸರ್ ಹವಾ ಎಬ್ಬಿಸಿದೆ.



