ಒಬ್ಬೊಬ್ಬರಿಗೆ ಒಬ್ಬರು ವ್ಯಕ್ತಿಗಳ ಮಾತು ಹಾರ್ಟಿಗೆ ಟಚ್ ಆಗುತ್ತದೆ. ಹೊಸದಾಗಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಹುಡುಗನಿಗೆ ತೆಂಡೂಲ್ಕರ್ ಹೊಗಳಿದರೆ ಆಗುವ ಖುಷಿಯ ಮುಂದೆ, ಸೆಂಚುರಿ ಹೊಡೆದದ್ದೂ ಕಡಿಮೆ ಎನಿಸುತ್ತದೆ. ಉದ್ಯಮಪತಿಗೆ ಟಾಟಾ ಅಂತಹವರು ಮೆಚ್ಚಿದರೆ ಆಗುವ ಸಂಭ್ರಮವೇ ಬೇರೆ. ಸಂಗೀತಗಾರರಿಗೂ ಅಷ್ಟೆ, ಯಾರನ್ನು ತಾವು ಆರಾಧಿಸುತ್ತಾರೋ.. ಅಂತಹವರೇ ಮೆಚ್ಚಿದಾಗ ಸಿಗುವ ಖುಷಿ ಊಹೆಗೂ ನಿಲುಕದ್ದು. ಅಂತಹುದೇ ಒಂದು ಅನುಭವ ಕೀರಣವಾಗಿ ಅವರದ್ದು.
ಎಂ.ಎಂ.ಕೀರವಾಣಿ. ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.. ಆರ್.ಆರ್.ಆರ್. ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಗೆದ್ದ ಕೀರವಾಣಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಆದರೆ ಕೀರವಾಣಿ ಅವರಿಗೆ ಆಸ್ಕರ್ ಎಂಬುದು ಅಷ್ಟೊಂದು ಮಹತ್ವದ್ದಲ್ಲ ಎನಿಸಿತ್ತಂತೆ. ಎಲ್ಲ ಪ್ರಶಸ್ತಿಗಳಂತೆಯೇ ಅದೂ ಒಂದು ಪ್ರಶಸ್ತಿ ಎಂಬ ಭಾವನೆ ಇತ್ತು. ಆಸ್ಕರ್`ನ ಮಹತ್ವದ ಬಗ್ಗೆ ಗೊತ್ತಿತ್ತು. ತೀರ ಆಸಕ್ತಿ ಇರಲಿಲ್ಲ ಎಂದಿರುವ ಕೀರವಾಣಿ
ಆಸ್ಕರ್ ಗೆದ್ದಿದ್ದೇವೆ. ನಾನು ಮತ್ತು ಗಾಯಕ ಚಂದ್ರಭೋಸ್ ಉತ್ಸವ ಮೂರ್ತಿಗಳು. ಆದರೆ ಮೂಲ ದೇವರು ರಾಜಮೌಳಿ ಮತ್ತು ಪ್ರೇಮ್ ರಕ್ಷಿತ್ ಎಂದಿದ್ದಾರೆ. ನನ್ನ ಪತ್ನಿಗೆ ರಾಮೋಜಿರಾವ್ ಅವರೆಂದರೆ ತುಂಬಾ ಗೌರವ. ಅಭಿಮಾನ. ಆಸ್ಕರ್`ಗೆ ಹೊರಡುವ ಮುನ್ನ ರಾಮೋಜಿರಾವ್ ಅವರನ್ನು ಭೇಟಿ ಮಾಡಲು ಹೋದೆವು. ಅಸ್ಕರ್‍ನ್ನು ಮನೆಗೆ ತಂದು ತೋರಿಸು ಎಂದರು ರಾಮೋಜಿರಾವ್. ಅಂತಹ ರಾಮೋಜಿರಾವ್ ಆಸ್ಕರ್‍ಗೆ ಮಹತ್ವ ನೀಡುತ್ತಿದ್ದಾರೆಂದರೆ ಅದು ನಿಜವಾಗಿಯೂ ಶ್ರೇಷ್ಟ ಪ್ರಶಸ್ತಿಯೇ ಇರಬೇಕು ಎಂದು ಭಾವಿಸಿದೆ. ನಂತರ ರಾಮೋಜಿರಾವ್ ಅವರಿಗಾಗಿಯಾದರೂ ಆಸ್ಕರ್ ಬರಬೇಕು ಎಂದುಕೊಂಡೆ ಎಂದು ಹೇಳಿದ್ದಾರೆ ಕೀರವಾಣಿ.


ಜೂ.ಎನ್.ಟಿ.ಆರ್. ಮೊದಲ ಚಿತ್ರಕ್ಕೆ ರಾಮೋಜಿರಾವ್ ಅವರೇ ನಿರ್ಮಾಪಕ. ಕನ್ನಡದಲ್ಲಿ ರಾಮೋಜಿರಾವ್ ಪರಿಚಯಿಸಿದವರಲ್ಲಿ ನಿರ್ದೇಶಕ ಶಶಾಂಕ್, ವಿಜಯ್ ರಾಘವೇಂದ್ರ, ರಾಧಿಕಾ ಕುಮಾರಸ್ವಾಮಿ, ಚಿತ್ರ ರೇಖಾ.. ಸೇರಿದಂತೆ ಹಲವರಿದ್ದಾರೆ. ಚರಣ್‍ರಾಜ್ ತೆಲುಗಿನಲ್ಲಿ ಸ್ಟಾರ್ ಆಗಿದ್ದು ಕೂಡಾ ರಾಮೋಜಿರಾವ್ ನಿರ್ಮಾಣದ ಚಿತ್ರದಿಂದಲೇ. ತೆಲುಗಿನಲ್ಲಿ ರಾಮೋಜಿರಾವ್ ಅವರದ್ದು ಒಂದು ದೊಡ್ಡ ಚರಿತ್ರೆ. ಕ್ರಾಂತಿಕಾರಿ ಸಿನಿಮಾ ಮಾಡಿದವರು. ಜೊತೆಗೆ ಈನಾಡು ಪತ್ರಿಕೆ, ಈಟಿವಿ ಚಾನೆಲ್, ರಾಮೋಜಿ ಫಿಲ್ಮ್ ಸಿಟಿ, ಮಾರ್ಗದರ್ಶಿ ಚಿಟ್‍ಫಂಡ್, ಜ್ಯುವೆಲ್ಲರಿ ಮಳಿಗೆಗಳು, ಪ್ರಿಯಾ ಅಡುಗೆ, ಹೋಟೆಲ್ಲುಗಳು.. ಹೀಗೆ ರಾಮೋಜಿರಾವ್ ಅವರ ಖ್ಯಾತಿಯೂ ದೊಡ್ಡದು. ಸಾಧನೆಯೂ ದೊಡ್ಡದು. ಕೊಡುಗೆಯೂ ದೊಡ್ಡದು. ಅಂತಹವ್ಯಕ್ತಿ ಹೇಳಿದ್ದಾರೆಂದು ಕೀರವಾಣಿ ಥ್ರಿಲ್ ಆದರೆ ಸಹಜವೇ.



