ಆದಿಪುರುಷ್ ಸಿನಿಮಾ ಹೀನಾಯವಾಗಿ ಸೋಲಲಿದೆ. ಹೆಚ್ಚೆಂದರೆ ಒಂದು ಲೆವೆಲ್ಲಿಗೆ ಓಡಬಹುದಷ್ಟೇ, ಬಾಹುಬಲಿ ಲೆವೆಲ್ಲಿನ ಹಿಟ್ ಆಂತೂ ಆಗುವುದಿಲ್ಲ. ಸಿನಿಮಾ ಸೂಪರ್ ಹಿಟ್ ಆಗಲಿದೆ ಎನ್ನುವುದು ಊಹಾಪೋಹಷ್ಟೇ.. ಹೀಗೊಂದು ಭಯಾನಕ ಭವಿಷ್ಯ ನುಡಿದಿರುವುದು ವೇಣು ಸ್ವಾಮಿ. ಆದಿಪುರುಷ್ ಸಿನಿಮಾ ರಿಲೀಸ್ ಆಗುವುದಕ್ಕೆ ಮುನ್ನವೇ, ಪ್ರಭಾಸ್ ಶ್ರೀರಾಮನಾಗಿ ನಟಿಸಿರುವ ಚಿತ್ರವೆಂದು ಕುತೂಹಲ ಹುಟ್ಟಿರುವುದಕ್ಕೆ, ಸೆನ್ಸೇಷನ್ ಸೃಷ್ಟಿಸಿರುವಾಗಲೇ ಈ ಮಾತು ಹೇಳಿದ್ದಾರೆ ವೇಣು ಸ್ವಾಮಿ.
ವೇಣು ಸ್ವಾಮಿಯ ಬಗ್ಗೆ ತೆಲುಗು ಇಂಡಸ್ಟ್ರಿಯಲ್ಲಿ ವಿಶೇಷವಾದ ಮನ್ನಣೆಯೂ ಇದೆ. ಭಯವೂ ಇದೆ. ಕೆಲವರು ಲೇವಡಿ ಮಾಡುವುದೂ ಇದೆ. ಏಕೆಂದರೆ ಆತ ಮಾತನಾಡಿರುವ ವಿಷಯಗಳೆಲ್ಲ ಅಂತಹವೇ. ವಿಚಿತ್ರವೆಂದರೆ ಹಲವಾರು ಸೆಲಬ್ರಿಟಿಗಳು ಈತನ ಮಾತನ್ನು ನಂಬುತ್ತಾರೆ. ಈತನ ಪೂಜೆಯನ್ನು ನಂಬುತ್ತಾರೆ. ಕನ್ನಡದ ರಶ್ಮಿಕಾ ಮಂದಣ್ಣ ಸೇರಿದಂತೆ ತೆಲುಗು ಚಿತ್ರೋದ್ಯಮದ ಹಲವರು ಈತನ ಮಾತನ್ನು ನಂಬುತ್ತಾರೆ. ಇಂತಹ ವೇಣು ಸ್ವಾಮಿ ಇದೀಗ ಆದಿಪುರುಷ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಆದಿಪುರುಷ್ ಸಿನಿಮಾ ಹಿಂದೂಪರ, ಶ್ರೀರಾಮನ ಕುರಿತಾದ ಸಿನಿಮಾ. ಹೀಗಿದ್ದರೂ ಜನ ಈ ಸಿನಿಮಾ ಬಗ್ಗೆ ತುಂಬಾ ಆಸಕ್ತಿ ತೋರಿಸುವುದಿಲ್ಲ. ಕಂಟೆಂಟ್ ಇಲ್ಲದ ಸಿನಿಮಾಗಳನ್ನು, ಗುಣಮಟ್ಟ ಇಲ್ಲದ ಸಿನಿಮಾಗಳನ್ನು ಜನ ನೋಡುವುದಿಲ್ಲ. ಅದು ಮಾತ್ರವೇ ಅಲ್ಲದೆ ಪ್ರಭಾಸ್ ಗ್ರಹಗತಿಗಳು ಸಹ ಸರಿಯಿಲ್ಲ. ಇದೇ ಕಾರಣದಿಂದ ಅವರ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಆದಿಪುರುಷ್ ಸಿನಿಮಾ ಬಾಹುಬಲಿಯಂತೆ ದೊಡ್ಡ ಯಶಸ್ಸು ಪಡೆಯುವುದಿಲ್ಲಎಂದಿದ್ದಾರೆ ವೇಣುಸ್ವಾಮಿ.
ರಾಧೇ ಶ್ಯಾಮ್ ಹಾಗೂ ಸಾಹೋ ಚಿತ್ರಗಳಿಗಾದ ಸ್ಥಿತಿಯೇ ಆದಿಪುರುಷ್ ಸಿನಿಮಾಗೂ ಆಗಲಿದೆ. ಮಕ್ಕಳು ಸಿನಿಮಾ ನೋಡಿದರೆ ಸಿನಿಮಾ ಹಿಟ್ ಎನ್ನುವುದು ಊಹಾಪೋಹವಷ್ಟೇ ಎಂದಿರುವ ವೇಣುಸ್ವಾಮಿ, ಪ್ರಭಾಸ್ ಗ್ರಹಗತಿ ಸದ್ಯಕ್ಕೆ ಸರಿ ಇಲ್ಲ ಎಂದಿದ್ದಾರೆ.
ಅಂದಹಾಗೆ ಈ ವೇಣುಸ್ವಾಮಿಯ ಭವಿಷ್ಯದ ಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳೋಕೆ ಕಾರಣವೂ ಇದೆ. ಸಮಂತಾ-ನಾಗಚೈತನ್ಯ ವಿಚ್ಛೇದವನ್ನು ಮೊದಲೇ ಹೇಳಿದ್ದವನೀತ. ಚಿರಂಜೀವಿ ಮಗಳು ಎರಡನೇ ಬಾರಿ ಮದುವೆಯಾದಾಗ ಇದೂ ಕೂಡಾ ಹೆಚ್ಚು ದಿನ ಬಾಳುವುದಿಲ್ಲ ಎಂದಿದ್ದವ ವೇಣುಸ್ವಾಮಿ. ಇಡೀ ಇಂಡಸ್ಟ್ರಿಯೇ ವಿಜಯ್ ದೇವರಕೊಂಡ ಅವರನ್ನ ಹಾಡಿ ಹೊಗಳುತ್ತಿರುವಾಗ ನೋಡ್ತಾ ಇರಿ, ಈತನ ಚಿತ್ರಗಳು ಫ್ಲಾಪ್ ಆಗುತ್ತವೆ ಎಂದಿದ್ದ ವೇಣುಸ್ವಾಮಿ, ಅಖಿಲ್`ಗೆ ಚಿತ್ರರಂಗದಲ್ಲಿ ಭವಿಷ್ಯವಿಲ್ಲ ಎಂದಿದ್ದ. ಎರಡೂ ನಿಜವಾಗಿವೆ. ಹೀಗಾಗಿಯೇ ಆದಿಪುರುಷ್ ಚಿತ್ರದ ಬಗ್ಗೆ ವೇಣುಸ್ವಾಮಿ ನುಡಿದಿರುವ ಭವಿಷ್ಯವಾಣಿ, ಆದಿಪುರುಷ್ ನಿರ್ಮಾಪಕರು, ವಿತರಕರು ಅಷ್ಟೇ ಏಕೆ ಪ್ರಭಾಸ್ ಅಭಿಮಾನಿಗಳಲ್ಲೂ ಆತಂಕ ಹುಟ್ಟಿಸಿದೆ.



