ಹಿಂದೂ, ಕ್ರಿಶ್ಚಿಯನ್ ಯುವತಿಯರನ್ನು ಮತಾಂತರ ಮಾಡಿ, ಐಸಿಸ್ ಉಗ್ರರಿಗೆ ಒಪ್ಪಿಸುವ ಕಥೆ, ಇದು ಕಥೆಯಲ್ಲ. ಕೇರಳದಲ್ಲಿ ನಡೆದು ಹೋದ ನಿಜ ಘಟನೆಯೂ ಹೌದು. ಚಿತ್ರದಲ್ಲಿ 32 ಸಾವಿರ ಯುವತಿಯರ ಕಥೆ ಎಂದಿದೆಯಾದರೂ, ಇದು ಸತ್ಯವಲ್ಲ. ನಂಬರ್ಸ್ ಲೆಕ್ಕವನ್ನು ಉತ್ಪ್ರೇಕ್ಷೆ ಮಾಡಿ ಹೇಳಲಾಗಿದೆ. ಆದರೆ ನಡೆದಿರುವ ಘಟನೆಯಂತೂ ಸತ್ಯ ಎಂದು ಚಿತ್ರವನ್ನು ವಿರೋಧಿಸುತ್ತಿರುವವರೂ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಚಿತ್ರವನ್ನು ಸೋಲಿಸೋಕೆ ಸಂಚು ನಡೆಯುತ್ತಿದೆಯಾ..? ಕೆಲವು ಘಟನೆಗಳನ್ನು ನೋಡಿ.
ಕೇರಳದಲ್ಲಿ : ಕೇರಳ ಸ್ಟೋರಿಗೆ ಕೇರಳದಲ್ಲೇ ಶೋಗಳಿಲ್ಲ. 30 ಚಿತ್ರಮಂದಿರಗಳಲ್ಲಿ ಪ್ರದರ್ಶನಗಳೇನೋ ಇವೆ. ಆದರೆ ಶೋ ಆರಂಭಕ್ಕೆ ಮೊದಲು ನಡೆಯುತ್ತಿರುವ ಗಲಾಟೆಗಳ ಕಾರಣ ಚಿತ್ರಮಂದಿರಕ್ಕೆ ಜನ ಹೋಗುತ್ತಿಲ್ಲ. ಅಂದರೆ ಟಿಕೆಟ್ ಕೊಡ್ತಾರೆ. ಆಮೇಲೆ ಗಲಾಟೆ ಶುರುವಾಗುತ್ತೆ. ಗಲಾಟೆ ನಡೆಯುವ ಸ್ಥಳಗಳಿಗೆ ಪ್ರೇಕ್ಷಕರೆಲ್ಲಿ ಹೋಗ್ತಾರೆ..?
ತಮಿಳುನಾಡಿನಲ್ಲಿ : ಚಿತ್ರ ಬಿಡುಗಡೆಯಾದ 2 ದಿನಗಳ ನಂತರ ನಿಷೇಧವಾಗಿದೆ. ಮೊದಲ ದಿನವಂತೂ ಟಿಕೆಟ್ ನೀಡಿದ ಮೇಲೆ ಥಿಯೇಟರ್ ಎದುರು ಗಲಾಟೆಯಾಗಿ ಪ್ರದರ್ಶನಗಳು ರದ್ದಾಗಿದ್ದವು. ಚಿತ್ರವನ್ನು ಹಣ ಕೊಟ್ಟು ಖರೀದಿಸಿದ ವಿತರಕರಿಗೆ ಲಾಸ್ ಮಾಡುವ ಸಲುವಾಗಿಯೇ ಈ ಪ್ಲಾನ್ ಮಾಡಲಾಯಿತು ಎನ್ನುವುದು ಒಂದು ವಾದ.
ಪ.ಬಂಗಾಳದಲ್ಲಿ : ಚಿತ್ರವನ್ನು ನಿಷೇಧಿಸುವ ಪಟ್ಟಿಗೆ ಇದೀಗ ಆ ಲಿಸ್ಟಿಗೆ ಪ.ಬಂಗಾಳ ಕೂಡಾ ಸೇರಿದೆ. ಅಲ್ಲಿಗೆ ಮೂರು ರಾಜ್ಯಗಳಲ್ಲಿ ನಿಷೇಧವಾಗಿರುವ ಕೇರಳ ಸ್ಟೋರಿಗೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿಯೂ ಇದೆ.
ಇನ್ನು ಹಲವು ಮಲ್ಟಿಪ್ಲೆಕ್ಸುಗಳಲ್ಲಿ ಚಿತ್ರದ ಶೋ ಆರಂಭವಾದ ಮೇಲೆ ಎಸಿ ವ್ಯವಸ್ಥೆ ಬಂದ್ ಮಾಡಲಾಗುತ್ತಿದೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ಪ್ರೇಕ್ಷಕರು ಸಿನಿಮಾ ನೋಡೋದು ಹೇಗೆ? ಪ್ರೇಕ್ಷಕರು ಕಂಪ್ಲೇಂಟ್ ಕೂಡಾ ಮಾಡಿದ್ದಾರೆ. ಹಲವು ಕಡೆ ಶೋಗಳಿವೆ. ಆದರೆ ನಿರೀಕ್ಷಿತ ಮಟ್ಟದ ಪ್ರೇಕ್ಷಕರ ಕೊರತೆಯಿದೆ ಎಂದು ಹೇಳಿ ಪ್ರೇಕ್ಷಕರನ್ನು ಸಾಗಹಾಕಲಾಗುತ್ತಿದೆ. ಥಿಯೇಟರಿನ ಹೊರಗೆ ಮಾರಾಟವಾಗುವ ಆಹಾರವನ್ನು ಕೇರಳ ಸ್ಟೋರಿ ಪ್ರೇಕ್ಷಕರಿಗೆ ಇನ್ನೂ ಇನ್ನೂ ಹೆಚ್ಚು ಬೆಲೆಗೆ ಮಾರುವ ಸಂಚೂ ನಡೆಯುತ್ತಿದೆ. ಕೇರಳದಲ್ಲಿ ನಡೆದ ಹಾಗೂ ನಡೆಯುತ್ತಿರುವ ನೈಜ ಘಟನೆಗಳಿಗೆ ಸಿನಿಮಾ ರೂಪ ನೀಡಿರುವ ಚಿತ್ರ ಕೇರಳ ಸ್ಟೋರಿ.
ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಪಕ್ಷಗಳ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಚಿತ್ರಕ್ಕೆ ದೊಡ್ಡ ಸ್ವಾಗತ ಹಾಗೂ ಬಿಜೆಪಿಯೇತರ ರಾಜ್ಯಗಳಲ್ಲಿ ಚಿತ್ರಕ್ಕೆ ನಿಷೇಧದ ಭೀತಿ ಎದುರಾಗಿದೆ. ಹೀಗಿದ್ದರೂ ಚಿತ್ರ ಮೂರು ದಿನಗಳಲ್ಲಿ 35 ಕೋಟಿ ಬಿಸಿನೆಸ್ ಮಾಡಿದೆ. 4ನೇ ದಿನದ ಲೆಕ್ಕ ಇನ್ನೂ ಬರಬೇಕಿದೆ. ಸೋಮವಾರವಾದ್ದರಿಂದ ಸಹಜವಾಗಿಯೇ ಕಲೆಕ್ಷನ್ ಕಡಿಮೆಯಾಗಿರುವ ಸಾಧ್ಯತೆ ಇದೆ. ಅದಾ ಶರ್ಮ ಬಿಟ್ಟರೆ ಬೇರೆ ಸ್ಟಾರ್ ನಟರಿಲ್ಲ. ಅದಾ ಶರ್ಮ ಕೂಡಾ ಸ್ಟಾರ್ ನಟಿಯೇನಲ್ಲ. ಕೇವಲ ಕಥೆ ಹಾಗೂ ವಿವಾದಗಳಿಂದಾಗಿಯೇ ಗೊತ್ತಾಗಿರುವ ಚಿತ್ರ ಕೇರಳ ಸ್ಟೋರಿ. ಚಿತ್ರ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಪರ ಕಂಗನಾ ರಣಾವತ್ ಮೊದಲಾದವರು ಬೆಂಬಲ ಸೂಚಿಸಿದ್ದರೆ, ಪ್ರಕಾಶ್ ರೈ ಮೊದಲಾದವರು ವಿರೋಧಿಸಿದ್ದಾರೆ.



