ರೈಡರ್ ಚಿತ್ರದ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪೈಲ್ವಾನ್ ಕೃಷ್ಣ ಜೊತೆ ಸಿನಿಮಾ, ಲೈಕಾದವರ ಜೊತೆಗೆ ಸಿನಿಮಾ.. ಹೀಗೆ ಹಲವು ಸುದ್ದಿಗಳು ಹರಿದಾಡಿದ್ದವು.





ಲಹರಿ ಜಿ. ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಮತ್ತೊಮ್ಮೆ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರವಿದು. ಮನೋಹರ್ ಎಂಬುವವರು ಚಿತ್ರದ ಡೈರೆಕ್ಟರ್. ಯುಐ ಚಿತ್ರಕ್ಕೂ ಇದೇ ಮನೋಹರನ್ ಮತ್ತು ಶ್ರೀಕಾಂತ್ ಜೋಡಿ. ಮತ್ತೊಮ್ಮೆ ಇದೇ ಜೋಡಿ ನಿಖಿಲ್ ಅವರಿಗಾಗಿ ಚಿತ್ರ ನಿರ್ಮಾಣ ಮಾಡುತ್ತಿದೆ. ಅಷ್ಟೇ ಅಲ್ಲ, ನಿಖಿಲ್ ಅವರ ಈ ಹಿಂದಿನ ರೈಡರ್ ಚಿತ್ರಕ್ಕೂ ಮನೋಹರ್ ಅವರೇ ಪ್ರೊಡ್ಯೂಸರ್ ಎನ್ನವುದು ವಿಶೇಷ. ರೈಡರ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಇನ್ನೊಂದು ಚಿತ್ರ ಅವರದ್ದೇ ಬ್ಯಾನರ್‍ನಿಂದ ಘೋಷಣೆಯಾಗಿದೆ.
ನಿಖಿಲ್ ಹುಟ್ಟುಹಬ್ಬಕ್ಕೆ ಮುನ್ನ ಶ್ರೀಕಾಂತ್ ಒಂದು ಟ್ವೀಟ್ ಮಾಡಿದ್ದರು. ಹೊಸ ಸೆನ್ಸೇಷನ್ ಘೋಷಿಸುವ ಸುಳಿವು ಕೊಟ್ಟಿದ್ದರು. ಆ ಟ್ವೀಟ್‍ನಲ್ಲಿ ಶಿವನಂದಿ ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದರು. ಅದೇ ಚಿತ್ರದ ಟೈಟಲ್ ಇರಬೇಕು ಎನ್ನುವುದು ಅಭಿಮಾನಿಗಳ ಊಹೆ. ಆರಂಭದಲ್ಲಿ ಆ ಟೈಟಲ್`ಗೆ ಶಿವಣ್ಣ ಮತ್ತು ಸುದೀಪ್ ಅವರನ್ನು ಊಹಿಸಿಕೊಂಡ ಅಭಿಮಾನಿಗಳ ಲೆಕ್ಕಾಚಾರ ಉಲ್ಟಾ ಆಗಿದೆ.


ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದಿದ್ದಾರೆ ಮನೋಹರ. ಆದರೆ ರಾಮನಗರ ಕ್ಷೇತ್ರಕ್ಕೆ ನಿಖಿಲ್ ಅಭ್ಯರ್ಥಿ. ಸದ್ಯಕ್ಕೆ ಎಂದರೆ ಎಲೆಕ್ಷನ್ ಮುಗಿದ ಮೇಲೆಯೇ ಹೊಸ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಚಿತ್ರದಲ್ಲಿ ಆಕ್ಷನ್ ಡ್ರಾಮಾ ಇದ್ದರೂ ಎಂದಿನಂತೆ ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾ ಮಾಡಲಿದ್ದಾರೆ ನಿಖಿಲ್. ಜೊತೆಗೆ ಚಿತ್ರದಲ್ಲೊಂದು ಸಮಾಜಮುಖಿ ಸಂದೇಶವೂ ಇರಲಿದೆ. ಆದರೆ ಶುರುವಾಗುವುದೇನಿದ್ದರೂ ಕರ್ನಾಟಕ ಅಸೆಂಬ್ಲಿ ಚುನಾವಣೆ ಮುಗಿದ ನಂತರ. ಅಲ್ಲಿಯವರೆಗೂ ಕಾಯಬೇಕಷ್ಟೆ.



