ಕೋಟಿಗಳಿಗೀಗ ಲೆಕ್ಕವೇ ಇಲ್ಲ. ಒಂದು ಮಾಮೂಲಿ.. ಸರಳ ಕಥೆಯುಳ್ಳ.. ಹೆಚ್ಚು ಪ್ರಾಪರ್ಟಿ, ಲೊಕೇಷನ್ ಬಯಸದ.. ಕಡಿಮೆ ಪಾತ್ರಧಾರಿಗಳುಳ್ಳ ಒಂದೇ ಭಾಷೆಯ ಸಿನಿಮಾ ಖರ್ಚು ಕೂಡಾ 2 ಕೋಟಿ ದಾಟುತ್ತಿದೆ. ಅಂತಾದ್ದರಲ್ಲಿ ಕಬ್ಜ. ಉಪೇಂದ್ರ, ಸುದೀಪ್ ಎಂಬ ಸೂಪರ್ ಸ್ಟಾರ್ಸ್ ಜೊತೆಗೆ ಶಿವಣ್ಣ ಎಂಬ ಲೆಜೆಂಡ್. ಅದೂ ಒಂದು ಪುಟ್ಟ ಪಾತ್ರದಲ್ಲಿ.. ಶ್ರೇಯಾ ಎಂಬ ದಕ್ಷಿಣದ ಚೆಲುವೆ ಹೀರೊಯಿನ್. ಚಿತ್ರದ ತುಂಬಾ ವಿವಿಧ ಭಾಷೆಯ ಸ್ಟಾರ್ ಪೋಷಕ ನಟರು. ರಿಲೀಸ್ ಆಗುತ್ತಿರುವುದು ಒಂದಲ್ಲ..ಎರಡಲ್ಲ.. 5 ಭಾಷೆಗಳಲ್ಲಿ. ಜೊತೆಗೆ ಇನ್ನೂ 3 ಭಾಷೆಯ ಡಬ್ಬಿಂಗ್ ಕೆಲಸವೂ ನಡೆಯುತ್ತಿದೆ. ಇಂತಹ ಕಬ್ಜ ಸಿನಿಮಾ ಮುಂದಿನ ವಾರ ರಿಲೀಸ್ ಆಗಲಿದೆ. ಪುನೀತ್ ಹುಟ್ಟುಹಬ್ಬದ ದಿನಿವೇ ರಿಲೀಸ್ ಆಗಲಿರುವ ಕಬ್ಜ ಚಿತ್ರಕ್ಕೆ ತ್ರಿಬಲ್ ಸ್ಟಾರ್ ಶಕ್ತಿಯಂತೂ ಇದೆ. ಖರ್ಚು ಕೂಡಾ ಹಾಗೆಯೇ ಆಗಿದೆ. ನಿರ್ದೇಶಕ ಆರ್.ಚಂದ್ರು ಈ ಚಿತ್ರಕ್ಕೆ ನಿರ್ಮಾಪಕರೂ ಹೌದು. ತಮ್ಮ ಕನಸಿನ ಚಿತ್ರಕ್ಕೆ ಅಷ್ಟೇ ಅದ್ಧೂರಿಯಾಗಿ ಖರ್ಚೂ ಮಾಡಿರುವ ಚಂದ್ರು ಚಿತ್ರದ ಸೆಟ್‍ಗಳಿಗಾಗಿಯೇ ಕೋಟಿ ಕೋಟಿ ಖರ್ಚು ಮಾಡಿದ್ದಾರೆ.




ಆರ್ಟ್ ಡೈರೆಕ್ಟರ್ ಶಿವಕುಮಾರ್ ‘ಕಬ್ಜ’ ಕೋಟೆ ಕಟ್ಟುವುದಕ್ಕೆ ಸುಮಾರು 150 ಮಂದಿ ಹಗಲ ರಾತ್ರಿ ಕೆಲಸ ಮಾಡಿದ್ದಾರೆ. 1945 ರಿಂದ 1987ರ ಕಾಲಘಟ್ಟದವರೆಗೂ ನಡೆಯುವ ಕಥೆಯಾಗಿರುವುದರಿಂದ ಮೇಜರ್ ಪೋಷನ್ ಅನ್ನು ಸೆಟ್ಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.
ಈ ಸಿನಿಮಾದಲ್ಲಿ ಸುಮಾರು 30 ಮೇಜರ್ ಸೆಟ್ಗಳಿವೆ. ಹಾಗೇ 15 ಸಬ್ ಸೆಟ್ಗಳನ್ನು ಹಾಕಲಾಗಿದೆಯಂತೆ. ಇಲ್ಲಿ ಮಾರ್ಕೆಟ್ ಸೆಟ್ನಿಂದ ಹಿಡಿದು, ಅರಮನೆ, ಆಗಿನ ಕಾಲದ ರಸ್ತೆ, ಪೋಸ್ಟರುಗಳು, ಆಯುಧಗಳು ಜೈಲು, ಮನೆ.. ಎಲ್ಲವನ್ನೂ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಎರಡೂ ಕಾಲದ ಸೆಟ್ ಬೇಕು. ಅಂದಹಾಗೆ ಕೇವಲ ಈ ಸೆಟ್‍ಗಳ ನಿರ್ಮಾಣಕ್ಕಾಗಿಯೇ ಚಿತ್ರತಂಡ 20 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆಯಂತೆ. ಅಂದಹಾಗೆ ಈಗಾಗಲೇ ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ 100 ಕೋಟಿ ಬ್ಯುಸಿನೆಸ್ ಮಾಡಿದೆ.
ಸೆಟ್ಟುಗಳೆಂದರೆ ಸುಮ್ಮನೆ ಆಗಲ್ಲ. ಹಳೆಯ ಕಾಲದವರು ಆಗಿನ ಕಾಲಕ್ಕೆ ಬಡವರೇ ಇರಬಹುದು, ಅದನ್ನೇ ಸೆಟ್ ಹಾಕುವುದು ಎಂದರೆ ಕೋಟಿ ಕೋಟಿಗಳೇ ಖರ್ಚಾಗುತ್ತೆ. ಇನ್ನು ಸಿನಿಮಾ ಕೋಟಿ ಕೋಟಿ ದುಡಿದರೆ ಆರ್.ಚಂದ್ರು ದಿಗ್ವಿಜಯ ಗೆದ್ದಂತೆ.



