ವಿಷ್ಣುವರ್ಧನ್ ಹೆಸರಲ್ಲಿ ಹಲವಾರು ದಾಖಲೆಗಳಿವೆ. ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿರುವ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್. ಕನ್ನಡದಲ್ಲಿ ಅತೀ ಹೆಚ್ಚು ದ್ವಿಪಾತ್ರಗಳಲ್ಲಿ ನಟಿಸಿರುವ ನಾಯಕ ನಟ, ಮಾರ್ಷಲ್ ಆಟ್ರ್ಸ್ ಕೂಡಾ ಕಲಿತಿದ್ದವರು. 2014ರಲ್ಲಿ ವಿಷ್ಣುವರ್ಧನ್ ಅವರ ಖೈದಿ ರೀ-ರಿಲೀಸ್ ಆಗಿತ್ತು. ಆಗ ತ್ರಿವೇಣಿ ಚಿತ್ರಮಂದಿರದ ಎದುರಿನ ಕಟೌಟಿಗೆ 113 ಅಡಿ ಎತ್ತರದ ಹೂವಿನ ಹಾರ ದಾಖಲೆ ಬರೆದಿದ್ದರು ಅಭಿಮಾನಿಗಳು. ವಿಷ್ಣುವರ್ಧನ್ ಬರೆದ ದಾಖಲೆಗಳೇನೇ ಇರಲಿ, ಅಭಿಮಾನಿಗಳು ಇವತ್ತಿಗೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಎಂದಿನಂತೆ ವಿಷ್ಣು ಸ್ಟೈಲಿನಲ್ಲೇ. ಮಾಸ್ ಅಲ್ಲ, ಕ್ಲಾಸ್. ಈಗಲೂ ಒಂದು ದಾಖಲೆ ಬರೆದಿದ್ದಾರೆ.
ಸೆಪ್ಟೆಂಬರ್ 18. ಆ ದಿನ ವಿಷ್ಣುವರ್ಧನ್ ಹುಟ್ಟುಹಬ್ಬವನ್ನ ನಾಡಹಬ್ಬದಂತೆ ಆಚರಿಸಿತ್ತು ವಿಷ್ಣುಸೇನೆ. ವೀರಕಪುತ್ರ ಶ್ರೀನಿವಾಸ್ ಅವರು ಆ ದಿನ ವಿಷ್ಣುವರ್ಧನ್ ಅವರ 50 ಕಟೌಟ್`ಗಳನ್ನು ವಿಷ್ಣುವರ್ಧನ್ ಪುಣ್ಯಭೂಮಿಯಲ್ಲಿ ನಿಲ್ಲಿಸಲಾಗಿತ್ತು. ಅದಕ್ಕೆ ಕಾರಣವೂ ಇತ್ತು. ನಾಗರಹಾವು ತೆರೆಕಂಡು 50 ವರ್ಷ ಪೂರೈಸಿದ ಸಂಭ್ರಮವನ್ನು ಹುಟ್ಟುಹಬ್ಬದಂದು ವಿಶೇಷವಾಗಿ ಆಚರಿಸಿದ್ದರು ವಿಷ್ಣು ಫ್ಯಾನ್ಸ್. ಇದೀಗ ಆ ಸಂಭ್ರಮ ವಿಶೇಷ ಪುರಸ್ಕಾರಕ್ಕೆ ಪಾತ್ರವಾಗಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ‘ಕಟೌಟ್ ಜಾತ್ರೆ’ ದಾಖಲಾಗಿದೆ.
ವಿಷ್ಣುವರ್ಧನ್ ಅವರ ೫೦ ಸೇನಾನಿಗಳು 2022ರ ಸೆಪ್ಟೆಂಬರ್ 18ರಂದು ಬೆಂಗಳೂರಿನ ಡಾ ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್ ಕಟೌಟ್ಗಳನ್ನು ಸ್ಥಾಪಿಸಿ ‘ಕಟೌಟ್ ಜಾತ್ರೆ’ ಸಮಾರಂಭ ಆಯೋಜಿಸಿದ್ದರು. ಬೃಹತ್ ಹಾರಗಳನ್ನು ಸಹ ಹಾಕಿಸಿದ್ದರು. ಅಂದಾಜು 40 ಲಕ್ಷ ರೂಪಾಯಿ ಹಣ ಖರ್ಚಾಗಿತ್ತು. ಪೊಲೀಸ್ ಇಲಾಖೆಯ ಪ್ರಕಾರ, ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್ ಜಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ ವೀರಕಪುತ್ರ ಶ್ರೀನಿವಾಸ್.
ಕಟೌಟ್ ಜಾತ್ರೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದ್ದರು. ಅಲ್ಲದೆ, ಅವರೇ ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಮಾಡಿದ್ದರು. ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು, ಕಟೌಟ್ ಜಾತ್ರೆಯು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯಾಗಿ ಸೇರ್ಪಡೆಗೊಂಡಿವೆ. ದಾಖಲೆಯ ಪ್ರಮಾಣ ಪತ್ರ ಮತ್ತು ಪದಕಗಳು ನಮಗೆ ತಲುಪಿವೆ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್.
ಇದರ ಯಶಸ್ಸಿನ ಪಾಲು 50 ಸೇನಾನಿಗಳಿಗೆ ಹಾಗೂ ಕಟೌಟ್ ವಿನ್ಯಾಸ ಮಾಡಿದ ರಾಜು, ವಿಷ್ಣು ಹಾಗೂ ಇಡೀ ಕಾರ್ಯಕ್ರಮ ಆಯೋಜನೆ ನೋಡಿಕೊಂಡ ಆನಂದರಾಜ್, ಸಾಹಿತಿ ಜನಾರ್ದನ್ ರಾವ್ ಅವರಿಗೆ ಸಲ್ಲಬೇಕು ಎಂದು ಹೇಳಿಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್.
ಇದು ಕೇವಲ ವೀರಕಪುತ್ರ ಶ್ರೀನಿವಾಸ್ ಅವರ ಏಕಾಂಗಿ ಸಾಧನೆಯೂ ಅಲ್ಲ. ನೂರಾರು..ಸಾವಿರಾರು ಅಭಿಮಾನಿಗಳು ಅವರ ಜೊತೆಯಲ್ಲಿದ್ದಾರೆ. ಖರ್ಚನ್ನು ಮಾತ್ರ ಸ್ವತಃ ಹಾಕಿಕೊಳ್ಳುವ ಶ್ರೀನಿವಾಸ್, ಅಭಿಮಾನಿಗಳ ಜೇಬು ಬರಿದು ಮಾಡುವುದಿಲ್ಲ. ಸ್ವಂತ ಖರ್ಚಿನಲ್ಲಿಯೇ ವಿಷ್ಣುವರ್ಧನ್ ಮೇಲಿನ ಪ್ರೀತಿಗಾಗಿ ಪ್ರತಿವರ್ಷವೂ ಹುಟ್ಟುಹಬ್ಬ, ವಿಶೇಷ ಆಚರಣೆ ಮಾಡುವ ವೀರಕಪುತ್ರ ಶ್ರೀನಿವಾಸ್ ಈ ಬಾರಿ ಕಟೌಟ್ ಜಾತ್ರೆಯನ್ನು ಮಾಡಿ ಗೆದ್ದಿದ್ದಾರೆ.
ವಿಷ್ಣುವರ್ಧನ್ ಅವರಿಗಾಗಿ ಆಸ್ಟ್ರೇಲಿಯಾ, ಅಮೆರಿಕಾದಲ್ಲಿ ಫೋಟೋ ಎಕ್ಸಿಬಿಷನ್, ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಜಾತ್ರೆ, ವಿವಿಧ ಚಿತ್ರರಂಗದ ಸ್ಟಾರ್ ನಟರನ್ನು ಕರೆಸಿ ವಿಷ್ಣುವರ್ಧನ್ ಕಾರ್ಯಕ್ರಮ ನಡೆಸುವುದು, ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸುವುದನ್ನು ಮಾಡುವ ಶ್ರೀನಿವಾಸ್, ಈ ಬಾರಿ ದಾಖಲೆಯ ಗರಿಯೊಂದನ್ನು ಕಿರೀಟಕ್ಕೆ ಜೋಡಿಸಿಕೊಂಡಿದ್ದಾರೆ.



