ನೀವು ವಿಕ್ರಂ ಚಿತ್ರ ನೋಡಿದ್ದರೆ ಈ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಇಡೀ ಚಿತ್ರದಲ್ಲಿ ವಿಜೃಂಭಿಸುವುದು ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ಪಾತ್ರಗಳೇ ಆದರೂ, ಸಣ್ಣ ಸಣ್ಣ ಪಾತ್ರಗಳನ್ನೂ ಯಶಸ್ವಿಯಾಗಿ ತೆರೆಯ ಮೇಲೆ ತಂದಿದ್ದರು ನಿರ್ದೇಶಕ ಲೋಕೇಶ್. ಅಂಥಾದ್ದೊಂದು ಪಾತ್ರ ಸ್ವಸ್ತಿಷ್ಠ ಕೃಷ್ಣನ್ ಅವರದ್ದು. ಕಮಲ್ ಹಾಸನ್ ಮಗ ಪ್ರಭಂಜನ್ ಇರುತ್ತಾನಲ್ಲ, ಆತನ ಪತ್ನಿಯ ಪಾತ್ರ. ನಿಮಿಷಗಳಷ್ಟೇ ತೆರೆಯ ಮೇಲಿದ್ದರೂ ಸ್ವಸ್ತಿಷ್ಟ ಗಮನ ಸೆಳೆದಿದ್ದರು. ಇವರೇ ಈಗ ಸುನಿ ಮತ್ತು ವಿನಯ್ ಚಿತ್ರಕ್ಕೆ ಹೀರೋಯಿನ್.


ಸಿಂಪಲ್ ಸುನಿ ಮತ್ತು ವಿನಯ್ ರಾಜಕುಮಾರ್ ಇದೇ ಮೊದಲ ಬಾರಿ ಜೊತೆಯಾಗಿರುವ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಕನ್ನಡತಿ ಎನ್ನುವುದು ವಿಶೇಷವೇನಲ್ಲ. ಏಕೆಂದರೆ ಎಂದಿನಂತೆ ಸುನಿ ಕನ್ನಡದ ಹುಡುಗಿಯನ್ನೇ ಹುಡುಕಿದ್ದಾರೆ. ಆದರೆ ಈಕೆ ಸುನಿ ಕಣ್ಣಿಗೆ ಬಿದ್ದಿದ್ದು ಮಾತ್ರ ತಮಿಳು ಚಿತ್ರದಿಂದ ಎನ್ನುವುದು ವಿಶೇಷ. ಚಿತ್ರಕ್ಕೆ ಆಯ್ಕೆಯಾಗಿರುವುದು ಸ್ವಸ್ತಿಷ್ಠ. ಸದ್ಯಕ್ಕೆ ಚೆನ್ನೈ ನಿವಾಸ್.


ನಾನು ಕನ್ನಡದವರಾದರೂ ಅವಕಾಶ ಸಿಕ್ಕಿದ್ದು ಇಲ್ಲಿ. ಕೆಲಸ ಸಿಕ್ಕಿದ್ದೂ ಇಲ್ಲಿ. ಈ ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ವಿನಯ್ ರಾಜಕುಮಾರ್ ಎದುರು ಸುನಿ ಅವರ ಡೈರೆಕ್ಷನ್. ಎಕ್ಸೈಟ್ ಅಂತೂ ಇದೆ. ಕನ್ನಡದ ಯಾರಾದರೂ ಸರಿ, ರಾಜ್ ಕುಟುಂಬದವರ ಚಿತ್ರದಲ್ಲಿ ನಟಿಸೋದನ್ನು ಇಷ್ಟ ಪಡ್ತಾರೆ. ನಾನೂ ಕನ್ನಡದವಳೇ ಅಲ್ವಾ.. ಎನ್ನುತ್ತಾರೆ ಸ್ವಸ್ತಿಷ್ಠ. ಅಂದಹಾಗೆ ಸ್ವಸ್ತಿಷ್ಠಗೆ ಮಾರ್ಷಲ್ ಆಟ್ರ್ಸ್ ಚೆನ್ನಾಗಿಯೇ ಗೊತ್ತು.




ಚಿತ್ರ ಅಷ್ಟೇ ಅಲ್ಲ, ಹಾಫ್ ಬಾಯಿಲ್ ಅನ್ನೋ ವೆಬ್ ಸಿರೀಸ್, ಪರಿತಾಬಂಗಳ್, ಸಾವರ್‍ಕತ್ತಿ, ಜಡ, ಕೀ ಅನ್ನೋ ತಮಿಳು ಚಿತ್ರಗಳು ಗುಂಡೆ ಕಥಾ ವಿಂಟಾರಾ ಅನ್ನೋ ಒಂದು ತೆಲುಗಿನ ಚಿತ್ರದಲ್ಲಿ ನಟಿಸಿದ್ದಾರೆ. ಸಿಂಪಲ್ ಸುನಿ ಹಾಗೂ ವಿನಯ್ ರಾಜಕುಮಾರ್ ಜೊತೆಗಿನ ಚಿತ್ರದ ಮೂಲಕ ಕನ್ನಡಕ್ಕೂ ಬರುತ್ತಿದ್ದಾರೆ.



