ಹುಲಿಯ ಹಾಲಿನ ಮೇವು. 1979ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾ. ವಿಜಯ್ ನಿರ್ದೇಶಕ. ಮಯೂರ ನಂತರ ನಿರ್ದೇಶಿಸಿದ್ದ ಸಿನಿಮಾ ಇದು. ಭಾರತಿಸುತ ಅವರ ಕಾದಂಬರಿ ಆಧರಿಸಿದ್ದ ಚಿತ್ರ. ಜನಪದ ಕಥೆ. ಚೆಂಗುಮಣಿ ಎಂಬ ಯೋಧನ ಪ್ರೀತಿ ಮತ್ತು ಶೌರ್ಯದ ಕಥೆಯಿದ್ದ ಸಿನಿಮಾ ಅದು. ಜಯಪ್ರದ ನಾಯಕಿಯಾಗಿದ್ದ ಚಿತ್ರದಲ್ಲಿ ಜಯಚಿತ್ರ ಸೆಕೆಂಡ್ ಹೀರೋಯಿನ್. ಎಂ.ಪಿ.ಶಂಕರ್, ಬಾಲಕೃಷ್ಣ, ವಜ್ರಮುನಿ, ಸಂಪತ್, ಶಕ್ತಿಪ್ರಸಾದ್, ಟೈಗರ್ ಪ್ರಭಾಕರ್ (ಆಗಿನ್ನೂ ಹೀರೋ ಆಗಿರಲಿಲ್ಲ), ರಾಜಾನಂದ್ ನಟಿಸಿದ್ದ ಚಿತ್ರ. ಡಾ.ರಾಜ್ ವೃತ್ತಿಜೀನವದ ಮೊದಲ ಸಿನಿಮಾ ಸ್ಕೋಪ್ ಸಿನಿಮಾ ಸಹ ಹೌದು. ಆಗಿನ ಕಾಲಕ್ಕೆ ಬೆಂಗಳೂರಿನ ಸಾಗರ್ ಚಿತ್ರಮಂದಿರ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಂಡಿದ್ದ ಚಿತ್ರ.



ಹುಲಿಯ ಹಾಲಿನ ಮೇವು ಚಿತ್ರದ
ಚಿನ್ನದ ಮಲ್ಲಿಗೆ ಹೂವೆ.. ಬಿಡು ನೀ ಬಿಂಕವ ಚೆಲುವೆ..
ಆಸೆ ಹೇಳುವಾಸೆ.. ಹೇಳಲಾರೆ.. ನಾನು ತಾಳಲಾರೆ..
ಬೆಳದಿಂಗಳಾಗಿ ಬಾ.. ತಂಗಾಳಿಯಾಗಿ ನಾನು..
ಹಾಡುಗಳು ಇವತ್ತಿಗೂ ಜನಪ್ರಿಯ. ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ್ದರು. ಚಿ.ಉದಯಶಂಕರ್ ಎಲ್ಲ ಹಾಡುಗಳಿಗೂ ಸಾಹಿತ್ಯ ಬರೆದಿದ್ದರು. ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಣ ಮಾಡಿದ್ದ ಸಿನಿಮಾ ಹುಲಿಯ ಹಾಲಿನ ಮೇವು.
ಚಿತ್ರದ ಕ್ಲೈಮಾಕ್ಸ್ ನಾಯಕ ಚೆಂಗುಮಣಿ ಸಾಯುವ ದೃಶ್ಯವಿತ್ತು. ಕ್ಲೈಮಾಕ್ಸ್ ಚೇಂಜ್ ಮಾಡಿ, ಡಾ.ರಾಜ್ ಸಾಯುವುದನ್ನು ನೋಡುವುದಕ್ಕೆ ಆಗಲ್ಲ ಎಂದು ಅಭಿಮಾನಿಗಳು ಪ್ರತಿಭಟನೆ ಕೂಡಾ ನಡೆಸಿದ್ದರು. ಕ್ಲೈಮಾಕ್ಸ್ ಚೇಂಜ್ ಮಾಡದೆ, ಅಭಿಮಾನಿಗಳ ಮನವೊಲಿಸಲಾಗಿತ್ತು. ಈಗ ಈ ಚಿತ್ರದ ಬಗ್ಗೆ ಮತ್ತೆ ಬರೆಯುವುದಕ್ಕೆ ಕಾರಣವೂ ಇದೆ.
ಇತ್ತೀಚೆಗೆ ಒಂದು ಫೋಟೋ ವೈರಲ್ ಆಗಿತ್ತು. ಅದು ಹುಲಿಯ ಹಾಲಿನ ಮೇವು ಚಿತ್ರವನ್ನು ಎಲ್ಲೆಲ್ಲಿ ಎಷ್ಟೆಷ್ಟು ಜನ ನೋಡಿದರು, ಎಷ್ಟೆಷ್ಟು ಕಲೆಕ್ಷನ್ ಮಾಡಿತ್ತು ಎಂಬ ಪುಟ್ಟ ಜಾಹೀರಾತಿನ ಪ್ರತಿಯದು. ಹುಲಿಯ ಹಾಲಿನ ಮೇವು ಎಲ್ಲಾ ಕಾಲಕ್ಕೂ ಅತ್ಯಂತ ಶ್ರೇಷ್ಠ ಚಿತ್ರ. ಕೇವಲ 3 ವಾರಗಳ ಅಂಕಿ ಅಂಶಗಳ ವಿವರವಿರುವ ದಾಖಲೆಯಲ್ಲಿ ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಶಿವಮೊಗ್ಗ ಸೇರಿದಂತೆ 20 ಕಡೆಯಲ್ಲಿ ಚಿತ್ರ ವೀಕ್ಷಿಸಿದ ಪ್ರೇಕ್ಷಕರ ಸಂಖ್ಯೆ ಹಾಗೂ ಕಲೆಕ್ಷನ್ ಆದ ಮೊತ್ತವನ್ನ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೇವಲ ಬೆಂಗಳೂರಿನಲ್ಲಿ 3 ವಾರಗಳಲ್ಲಿ 4,52,068 ಪ್ರೇಕ್ಷಕರು ಚಿತ್ರವನ್ನ ವೀಕ್ಷಿಸಿದ್ದರು. 14,86,759.95 ರೂಪಾಯಿ ಕಲೆಕ್ಷನ್ ಆಗಿತ್ತು. ಬೆಂಗಳೂರು ಬಿಟ್ಟರೆ ಹೆಚ್ಚಿನ ಕಲೆಕ್ಷನ್ ಮೈಸೂರು, ದಾವಣಗೆರೆ, ಹುಬ್ಬಳ್ಳಿಯಲ್ಲಾಗಿತ್ತು.

ಈ ಚಿತ್ರ ಕೇವಲ 3 ವಾರಗಳಲ್ಲಿ 40,49,733.23 ರೂಪಾಯಿ ಗಳಿಸಿತ್ತು. ಮೂರು ವಾರಗಳಲ್ಲಿ ಕರ್ನಾಟಕದಲ್ಲಿ ಒಟ್ಟು 17,90,973 ಮಂದಿ ‘ಹುಲಿಯ ಹಾಲಿನ ಮೇವು’ ಚಿತ್ರವನ್ನ ವೀಕ್ಷಿಸಿದ್ದರು..! ಆ ಮೂಲಕ ‘ಹುಲಿಯ ಹಾಲಿನ ಮೇವು’ ಚಿತ್ರ ಹೊಸ ದಾಖಲೆ ಬರೆದಿತ್ತು.
ಈಗ ಬಿಡಿ, ಬಿಡುಗಡೆಯಾದ ಚಿತ್ರಗಳು ಎಷ್ಟು ಶೋ, ಎಷ್ಟು ಕಲೆಕ್ಷನ್ ಎಂಬ ವಿವರಗಳೆಲ್ಲ ಬೆರಳ ತುದಿಯಲ್ಲಿ ಕ್ಷಣದಲ್ಲಿ ಲಭ್ಯವಾಗಿಬಿಡುತ್ತವೆ. ಜನರೇ ನೋಡದ ಚಿತ್ರವನ್ನೂ ಬ್ಲಾಕ್ ಬಸ್ಟರ್ ಎಂದು ಕರೆಯುವ ಸಂಸ್ಕೃತಿಯೂ ಇದೆ. ನಿರ್ಮಾಪಕರು ಅಧಿಕೃತ ಲೆಕ್ಕ ಕೊಡದಿದ್ದರೂ ಫೇಕ್ ನ್ಯೂಸ್ ಕ್ರಿಯೇಟ್ ಮಾಡ್ತಾರೆ. ಥಿಯೇಟರು ಖಾಲಿ ಹೊಡೆಯುತ್ತಿದ್ದರೂ 20 ಕೋಟಿ, 25 ಕೋಟಿ, 30 ಕೋಟಿ ಕಲೆಕ್ಷನ್ ಎಂದೆಲ್ಲ ಪುಂಗಿಯೂದುತ್ತಾರೆ. ನೆನಪಿರಲಿ, ಈಗ ಟಿಕೆಟ್ ಬೆಲೆ ಕನಿಷ್ಠ 100 ರೂ. ಗರಿಷ್ಠ ಎಷ್ಟು ಬೇಕಾದರೂ ಆಗಬಹುದು. ಸ್ಟಾರ್ ಸಿನಿಮಾ ಎಂದರೆ ಮೊದಲ ಕೆಲವು ದಿನ ಟಿಕೆಟ್ ದರ ಸರಾಸರಿ 500 ರೂ.ನಿಂದ ಸಾವಿರದವರೆಗೂ ಇರುತ್ತವೆ. ಆದರೆ ಇದು 1929ರ ಲೆಕ್ಕ.

1929ರಲ್ಲಿ ಈಗಿನಂತೆ ದರ ಇರಲಿಲ್ಲ. ಇಡುವುದಕ್ಕೆ ಸಾಧ್ಯವೂ ಇರಲಿಲ್ಲ. ಮಾಲ್ಗಳೂ ಇರಲಿಲ್ಲ. ಎಸಿ ಇದ್ದ ಥಿಯೇಟರುಗಳ ಸಂಖ್ಯೆಯೂ ಕಡಿಮೆ. ಜೊತೆಗೆ ಒಂದು ಪ್ರಿಂಟ್ನಲ್ಲಿ ಎಲ್ಲ ಕಡೆ ಪ್ರಸಾರ ಮಾಡುವಂತೆ ಡಿಜಿಟಲ್ ವ್ಯವಸ್ಥೆ ಇರಲಿಲ್ಲ. ಒಂದೊಂದು ಟಾಕೀಸಿಗೆ ಒಂದೊಂದು ಪ್ರಿಂಟ್ ಹಾಕಿಸಬೇಕು. ಹೀಗಾಗಿ ಪ್ರಿಂಟ್ ಕಡಿಮೆ ಹಾಕುತ್ತಿದ್ದರು. ಒಂದು ಥಿಯೇಟರಿನ ಪ್ರದರ್ಶನ ಮುಗಿದ ಮೇಲೆ, ಕೆಲವು ವಾರಗಳ ನಂತರ ಅದೇ ಪ್ರಿಂಟ್ ಬೇರೆ ಬೇರೆ ಕಡೆ ಹೋಗಬೇಕಿತ್ತು. ಇಷ್ಟೆಲ್ಲ ಸರ್ಕಸ್ಸು ಮಾಡಬೇಕಿದ್ದ ಆ ಕಾಲದಲ್ಲಿ ಇದ್ದ ಟಿಕೆಟ್ ದರ ಎಷ್ಟು ಗೊತ್ತೇ.. ಬಾಲ್ಕನಿ ಟಿಕೆಟ್ ದರ 5ರಿಂದ 6 ರೂ. ನೆನಪಿರಲಿ, ಈ 5-6 ರೂ. ದರ ಕೂಡಾ ಎಸಿ ವ್ಯವಸ್ಥೆ ಇದ್ದ ಥಿಯೇಟರುಗಳಲ್ಲಿ ಮಾತ್ರ. ಬಿ, ಸಿ ಸೆಂಟರುಗಳಲ್ಲಿ ಟಿಕೆಟ್ ದರ 2ರಿಂದ 3 ರೂ ಇರುತ್ತಿತ್ತು. ಆ ಕಾಲದಲ್ಲಿ ಹುಲಿಯ ಹಾಲಿನ ಮೇವು ಚಿತ್ರ ಕೇವಲ 3 ದಿನಗಳಲ್ಲಿ 40 ಲಕ್ಷ ರೂ. ಸಂಪಾದನೆ ಮಾಡಿತ್ತು. ಕ್ರೇಜ್ ಅಂದ್ರೆ ಅದು.


