ಕನ್ನಡದ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಬರೆದ ಕಾಂತಾರ, ಈಗ ವಿಶ್ವದಾಖಲೆಗೆ ಕೆಲವೇ ಹೆಜ್ಜೆಗೆ ಹತ್ತಿರದಲ್ಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಆಸ್ಕರ್ ಅಂಗಳಕ್ಕೆ ಅಧಿಕೃತ ಎಂಟ್ರಿ ಕೊಟ್ಟಿದೆ. ಕಾಂತಾರ ಚಿತ್ರವನ್ನು ಖಾಸಗಿಯಾಗಿ ಆಸ್ಕರ್ಗೆ ನಾಮನಿರ್ದೇಶನ ಸಲ್ಲಿಸಿದ್ದರು. ಚಿತ್ರಕ್ಕೀಗ ಅಧಿಕೃತ ಎಂಟ್ರಿ ಸಿಕ್ಕಿದ್ದು, ಹೊಂಬಾಳೆ ತಂಡ ಮಾಹಿತಿ ಹಂಚಿಕೊಂಡಿದೆ.
ಕಾಂತಾರ ಸಿನಿಮಾ 2 ವಿಭಾಗಳಲ್ಲಿ ಆಸ್ಕರ್ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದೆ ಹೊಂಬಾಳೆ. ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಟ ವಿಭಾಗದಲ್ಲಿ ಕಾಂತಾರ ಆಸ್ಕರ್ಗೆ ಅರ್ಹತೆ ಪಡೆದಿದೆ.
ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಸುತ್ತಿಗೆ ಆಯ್ಕೆಯಾದರೆ.. ಅಲ್ಲೊಂದು ಹೊಸ ಇತಿಹಾಸವೇ ಸೃಷ್ಟಿಯಾಗಲಿದೆ. ಒಟ್ಟು 301 ಚಿತ್ರಗಳ ಪೈಕಿ ಕಾಂತಾರ ಚಿತ್ರಕ್ಕೂ ಅರ್ಹತೆ ಸಿಕ್ಕಿದೆ. ಜನವರಿ 24 ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆಯಾಗಲಿದೆ. ಆಸ್ಕರ್ ಅಂಗಳದಲ್ಲಿರುವ ಕಾಂತಾರ ಪ್ರಶಸ್ತಿ ಗೆಲ್ಲುತ್ತಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಕಾಂತಾರ ತಂಡಕ್ಕೆ ಎಲ್ಲರೂ ಶುಭಹಾರೈಸಿತ್ತಿದ್ದಾರೆ. ಆಸ್ಕರ್ ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ.
ಕಾಂತಾರ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿ ಮಿಂಚಿರುವ ಸಿನಿಮಾ. ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದರು. ಕಿಶೋರ್ ಕುಮಾರ್ ಫಾರೆಸ್ಟ್ ಆಫೀಸರ್ ಆಗಿ, ಅಚ್ಯುತ್ ಕುಮಾರ್ ಖಳನಾಯಕರಾಗಿ ನಟಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ಕಾಂತಾರ, 400 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಚಿತ್ರ. ಅಲ್ಲದೆ ಕನ್ನಡದಲ್ಲಿ ಅತೀ ಹೆಚ್ಚು ಜನ ನೋಡಿರುವ ಹಾಗೂ ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರ. ಇಂಗ್ಲಿಷ್ನಲ್ಲೂ ಡಬ್ ಆಗಿ ಒಟಿಟಿಯಲ್ಲಿ ದಾಖಲೆ ಬರೆದಿದೆ.



