ಅಪ್ಪ ಸ್ವಾತಂತ್ರ್ಯ ಹೋರಾಟಗಾರ. ಮಗ ಭೂಗತ ಜಗತ್ತಿನ ಡಾನ್. ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ. ಡಾನ್ ಆಗುವುದೇಕೆ ಎನ್ನುವುದೇ ಚಿತ್ರದ ಕಥೆ. 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುವ ಕಥೆ. ಡಾನ್ ಆಗುವುದಷ್ಟೇ ಅಲ್ಲ, ಇಡೀ ಇಂಡಿಯಾದಲ್ಲಿ ಹವಾ ಎಬ್ಬಿಸುತ್ತಾನಂತೆ. ಕಬ್ಬ ಚಿತ್ರದ ಟೀಸರ್ ಸೃಷ್ಟಿಸೋ ಸಂಚಲನ ಅಂಥದ್ದು. ಈಗ ಹಿಂದಿಯ ಟೀಸರ್ ಹೊರಬಿಟ್ಟು ಪ್ರೇಕ್ಷಕರ ನಾಡಿ ಮಿಡಿತ ಪರೀಕ್ಷೆ ಮಾಡಿದ್ದಾರೆ ಆರ್.ಚಂದ್ರು.

‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.
ಒಂದೂವರೆ ನಿಮಿಷದ ಟೀಸರಿನಲ್ಲಿ ಒಂದೇ ಒಂದು ಸಂಭಾಷಣೆಯಿಲ್ಲ. ಆದರೆ ಚಿತ್ರದಲ್ಲಿ ಇನ್ನೇನೋ ಇದೆ ಎಂಬ ಮೆಸೇಜ್ ತಲುಪಿಸುತ್ತಾರೆ. ಉಪೇಂದ್ರ, ಸುದೀಪ್, ಶ್ರೀಯಾ ಸರಣ್, ಕೋಟಾ ಶ್ರೀನಿವಾಸ ರಾವ್, ಮುರಳಿ ಶರ್ಮಾ, ನವಾಬ್ ಶಾ, ಕಬೀರ್ ಸಿಂಗ್, ಡ್ಯಾನಿಶ್ ಅಖ್ತರ್, ದೇವ್‍ಗಿಲ್.. ಹೀಗೆ ಘಟಾನುಘಟಿ ನಟರೇ ತುಂಬಿರುವ ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ. ಕಬ್ಜದ ಹಿಂದಿ ಅವತರಣಿಕೆಯ ಹಕ್ಕು ಗಳನ್ನು ಪ್ರತಿಷ್ಠಿತ ವಿತರಣಾ ಸಂಸ್ಥೆ ಆನಂದ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಮೊದಲ ಹಂತವಾಗಿ ಹಿಂದಿ ಟೀಸರ್ ಬಿಡುಗಡೆಯಾಗಿದೆ. ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.
ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಗ್ಗೆ ಉಪೇಂದ್ರ, ಸುದೀಪ್, ಚಂದ್ರು ಪ್ರೀತಿಯಿಂದ ಮಾತನ್ನಾಡಿದ್ದಾರೆ. ಇದು ಚಿತ್ರತಂಡದ ಶ್ರಮಕ್ಕೆ ಸಿಕ್ಕ ಪ್ರತಿಫಲ. ಇವರ ಸಹಕಾರ ಹೀಗೆಯೇ ಇರಲಿ ಎಂದಿದ್ದಾರೆ.



