2014ರಲ್ಲಿ ಮಿ. & ಮಿಸಸ್ ರಾಮಾಚಾರಿ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಿದ್ದೇನು?
ನಾನ್ ಬರೋವರ್ಗೂ ಮಾತ್ರ ಬೇರೆಯವರ ಹವಾ.. ನಾನ್ ಬಂದ್ ಮೇಲೆ ನಂದೇ ಹವಾ.. ಎಂಬ ಮಾಸ್ ಡೈಲಾಗುಗಳಾ..
ಇವತ್ತಿಂದ ನಾವ್ ನಿಮ್ಮೋರು.. ನೀವ್ ನಮ್ಮೋರು.. ಎಂದು ಬಾಗಿನ ಕೊಟ್ಟು ಪ್ರಪೋಸ್ ಮಾಡಿದ ರೀತಿಯಾ..
ಓದದ ಮಗ ವೇಸ್ಟು ಎಂದುಕೊಂಡಿದ್ದ ಅಪ್ಪ, ಅದೇ ಮಗನನ್ನು ನಡುರಸ್ತೆಯಲ್ಲಿ ನಿಲ್ಲಿಸಿ ನಿನ್ನ ಡ್ಯಾನ್ಸ್ ನೋಡಬೇಕು ಎಂದು ಕುಣಿಸಿ ಕಣ್ಣೀರು ಹಾಕುವ ದೃಶ್ಯವಾ..
24 ಗಂಟೆಯೂ ಲವ್ ಮಾಡ್ತಾ ಕೂರೋಕಾಗಲ್ಲ..ಪ್ರತಿಯೊಬ್ಬರಿಗೂ ಅವರದ್ದೇ ಜವಾಬ್ದಾರಿಗಳಿರ್ತವೆ.. ಎಂದು ಹೀರೋಯಿನ್‍ಗೆ ಹೇಳುವ ಬುದ್ದಿಮಾತಾ..

ಎಲ್ಲವೂ ಒಟ್ಟಿಗೇ ಕನೆಕ್ಟ್ ಆಗಿ 2014ರಲ್ಲಿ ಹಿಟ್ ಆದ ಸಿನಿಮಾ ಮಿಸ್ಟರ್ & ಮಿಸಸ್ ರಾಮಾಚಾರಿ. 2014ರ ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಸಿನಿಮಾ. ಕೆಜಿಎಫ್ ಬಿಡುಗಡೆಗೂ ಮುನ್ನ ಯಶ್ ವೃತ್ತಿ ಬದುಕಿನಲ್ಲಿ ದೊಡ್ಡ ಮಟ್ಟದ ಹಿಟ್ ಆಗಿದ್ದಿದ್ದು ಇದೇ ಸಿನಿಮಾ. ಈ ಚಿತ್ರಕ್ಕೀಗ 8 ವರ್ಷ. ಯಶ್ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿರುವ ಜಯಣ್ಣ-ಭೋಗೇಂದ್ರ ಈ ಚಿತ್ರಕ್ಕೂ ನಿರ್ಮಾಪಕರು. ಸಂಭಾಷಣೆ, ಸಾಹಿತ್ಯ ಬರೆದುಕೊಂಡಿದ್ದ ಸಂತೋಷ್ ಆನಂದರಾಮ್ ಎಂಬ ಹುಡುಗ ಕನ್ನಡ ಚಿತ್ರರಂಗದ ಸಕ್ಸಸ್ ಸ್ಟಾರ್ ಡೈರೆಕ್ಟರ್ ಆಗಿದ್ದು ಇದೇ ಚಿತ್ರದಿಂದ.
ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಯಶ್ ನಟಿಸಿದ್ದರು. ಹೀರೋ ಉಢಾಳನೋ.. ಪೋಲಿಯೋ.. ಹೇಗೆಂದು ನಿರ್ಧರಿಸೋಕೆ ಸಾಧ್ಯವಿಲ್ಲದೆ ಪ್ರೇಕ್ಷಕರು ತೆರೆದ ಹೃದಯದಿಂದ ಅಪ್ಪಿಕೊಂಡಿದ್ದರು. ವಿಷ್ಣು ದಾದಾ ಕ್ಯಾರಿ ಆಗಿದ್ದರು. ಯಶ್-ರಾಧಿಕಾ ಪಂಡಿತ್ ಲವ್ ಸ್ಟೋರಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಚಿತ್ರದ ಆ ಡೈಲಾಗ್‍ನ್ನು ಅದ್ಯಾವ ಕ್ಷಣದಲ್ಲಿ ಸಂತೋಷ್ ಆನಂದರಾಮ್ ಬರೆದರೋ.. ಯಶ್ ಕೆರಿಯರ್ ಕೂಡಾ ಹಾಗೆಯೇ ಹವಾ ಎಬ್ಬಿಸಿತು. ಚಿತ್ರದ ಎಲ್ಲ ಹಾಡುಗಳೂ ಸೂಪರ್ ಹಿಟ್.
ನಿರ್ದೇಶಕ ಸಂತೋಷ್ ಆನಂದರಾಮ್ ಹಾಗೂ ನಿರ್ಮಾಪಕ ಜಯಣ್ಣ ಇಬ್ಬರೂ ಸಕ್ಸಸ್‍ನ್ನು ಯಶ್ ಅವರಿಗೇ ಕೊಟ್ಟಿದ್ದಾರೆ. ಸಂತೋಷ್ ಅವರು 8 ವರ್ಷಗಳ ಸಕ್ಸಸ್ ಟ್ವೀಟ್‍ನಲ್ಲಿ ನೆನಪಿಸಿಕೊಂಡಿರುವುದು ಯಶ್ ಅವರನ್ನೇ. ನಿರ್ಮಾಪಕ ಜಯಣ್ಣ ಸಿನಿಮಾ ಚಿತ್ರೀಕರಣದ ಹೊತ್ತಿಗೆ ಯಶ್ ಮತ್ತು ರಾಧಿಕಾ ಪರಸ್ಪರ ಪ್ರೀತಿಸುತ್ತಿದ್ದುದು ಗೊತ್ತಾಗಿತ್ತು. ಆದರೆ ಇಬ್ಬರೂ ಬಹಿರಂಗಪಡಿಸಿರಲಿಲ್ಲ. ಅದು ಗೊತ್ತಿದ್ದೇ ಚಿತ್ರದ ಕೆಲವು ಸೀನ್ ರೂಪಿಸಿದ್ದೆವು ಎಂದು ಹೇಳಿಕೊಂಡಿದ್ದಾರೆ.

ಯಶ್ ಫ್ಯಾನ್ಸ್ ಈಗ ರಾಜ್ಯಾದ್ಯಂತ ಸೆಲಬ್ರೇಷನ್ ಮಾಡುತ್ತಿದ್ದು 8ನೇ ವರ್ಷಕ್ಕೆ 8 ದಿನ ಸಂಭ್ರಮ ಇಟ್ಟುಕೊಂಡಿದ್ದಾರೆ. ಜನವರಿ 1ರಿಂದ ಜನವರಿ 8ರವರೆಗೆ ಯಶ್ ಟೈಮ್ಸ್ ಹೆಸರಲ್ಲಿ ಕ್ಯಾಂಪೇನ್ ಶುರುವಾಗುತ್ತಿದೆ. ಪ್ರತಿ ಸಂಜೆ 6ಕ್ಕೆ ಯಶ್ ಅವರೇ ಖುದ್ದು ಫ್ಯಾನ್ಸ್ ಸರ್‍ಪ್ರೈಸ್ ಕೊಡುತ್ತಾರೆ. 8ನೇ ತಾರೀಕು ಯಶ್ ಹೊಸ ಸಿನಿಮಾ ಅನೌನ್ಸ್ ಆಗುವ ಸೂಚನೆಗಳಿವೆ. ನಿರೀಕ್ಷೆಗಳಿವೆ. ಆದರೆ.. ಪಕ್ಕಾ ಇಲ್ಲ. ಏಕಂದ್ರೆ ಅದನ್ನು ಡಿಸೈಡ್ ಮಾಡೋದು ಯಶ್ ಆಗಿರುವ ಕಾರಣ ಕನ್‍ಫರ್ಮ್ ಮಾಡುವುದಕ್ಕೆ ಆಗುತ್ತಿಲ್ಲ.
ಆದರೂ ಪ್ರೇಕ್ಷಕರು, ಫ್ಯಾನ್ಸ್ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ. ಆ ದಿನ ಯಶ್ ತಮ್ಮ ಹೊಸ ಸಿನಿಮಾ, 19ನೇ ಸಿನಿಮಾ ಘೋಷಣೆ ಮಾಡಿಯೇ ಮಾಡ್ತಾರೆ ಅನ್ನೋ ನಂಬಿಕೆ ಇದೆ. ಸದ್ಯಕ್ಕಂತೂ ಫೈನಲ್ ಆಗದೇ ಏನನ್ನೂ ಹೇಳೋದಿಲ್ಲ ಎಂದಿದ್ದಾರೆ ಯಶ್. ಆದರೆ ಅಭಿಮಾನಿಗಳ ನಿರೀಕ್ಷೆಗೆ ಸ್ಪಂದಿಸೋದು ನಮ್ಮ ಜವಾಬ್ದಾರಿ, ಬಾಧ್ಯತೆ ಎಂದೂ ಹೇಳಿದ್ದಾರೆ. ಪ್ಲಾನ್ ನಿಧಾನಕ್ಕೆ ಮಾಡ್ಕೊಳಿ, ಇಂತಹ ಸಿನಿಮಾ ಮಾಡ್ತಿದ್ದೀನಿ ಅಂತಾ ಹೇಳೋಕ್ ಏನ್ ಪ್ರಾಬ್ಲಮ್ಮು ಎನ್ನೋದು ರಾಕಿಭಾಯ್ ಫ್ಯಾನ್ಸ್ ಅಪೇಕ್ಷೆ.



