ವೈಷ್ಣವಿ ಗೌಡ. 16ನೇ ವಯಸ್ಸಿನಲ್ಲಿಯೇ ಕಿರುತೆರೆಗೆ ಬಂದ ನಟಿ. ದೇವಿ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದ ವೈಷ್ಣವಿ ಗೌಡ ಮುಂಗಾರು ಮಳೆ, ಪುನರ್ ವಿವಾಹ ಧಾರಾವಾಹಿಗಳಲ್ಲೂ ನಟಿಸಿದರು. ದೊಡ್ಡ ಮಟ್ಟದ ಖ್ಯಾತಿ, ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ. ಬಿಗ್ ಬಾಸ್ ಮನೆಗೆ ಹೋಗಿ ಜನಪ್ರಿಯತೆಯ ಇನ್ನೊಂದು ಮಜಲು ಏರಿದ ವೈಷ್ಣವಿ, ಗಿರ್ಗಿಟ್ಲೆ, ಬಹುಕೃತ ವೇಷಂ.. ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಜಾಹೀರಾತು, ಡ್ಯಾನ್ಸ್, ಕಿರುತೆರೆ, ಸ್ಫೋಟ್ರ್ಸ್ ಈವೆಂಟ್.. ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ವೈಷ್ಣವಿ ಗೌಡ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಸಂಚಲನ ಮೂಡಿಸಿತ್ತು.
ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಫೋಟೋಗಳು ವೈರಲ್ ಆಗಿದ್ದವು. ವೈಷ್ಣವಿ ಅವರ ತಂದೆ ರವಿಕುಮಾರ್, ತಾಯಿ ಭಾನು, ಅಣ್ಣ ಸುನಿಲ್ ಕುಮಾರ್, ಕರ್ನಾಟಕದ ನಿವೃತ್ತ ಡಿಜಿಪಿ ಶಂಕರ್ ಬಿದರಿ ಇದ್ದ ಫೋಟೋ ಅದು. ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಎಂಬುವವರು ಹಾರ ಹಾಕಿಕೊಂಡಿರುವ ಫೋಟೋ ಅದು. ನಿಶ್ಚಿತಾರ್ಥವೆಂದೇ ಸುದ್ದಿಯಾಗಿತ್ತು. ಈ ವಿದ್ಯಾಭರಣ ಕೂಡಾ ಸಿನಿಮಾ ನಂಟು ಹೊಂದಿದವರೇ. 2018ರಲ್ಲಿ ವಿರಾಜ್ ಎಂಬ ಸಿನಿಮಾ ಹೀರೋ ಆಗಿದ್ದವರು. ಆದರೆ ಬ್ಯುಸಿನೆಸ್ ಮ್ಯಾನ್. ಇನ್ನೇನು ಅಗ್ನಿಸಾಕ್ಷಿ ನಾಯಕಿ ಅಗ್ನಿಸಾಕ್ಷಿಯಾಗಿ ವಿವಾಹವಾಗುವ ಸಮಯ ಎಂದುಕೊಂಡಿರುವಾಗಲೇ ವೈಷ್ಣವಿ ಗೌಡ ಹೇಳಿಕೆ ಸಂಚಲನ ಮೂಡಿಸಿದೆ.
ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಹುಡುಗನ ಕಡೆಯವರು. ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜ. ಆದರೆ ಇದು ಎಂಗೇಜ್ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದಿದ್ದಾರೆ. ಮನೆಯವರು ನಿರ್ಧರಿಸಿರೋದರಿಂದ ಹುಡುಗ ಕೂಡ ನನಗೆ ಹೊಸ ವ್ಯಕ್ತಿ ಆಗಿರೋದ್ರಿಂದ ನನಗೂ ಕೊಂಚ ಸಮಯಾವಕಾಶ ಬೇಕಾಗಿದೆ. ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ನಟಿ ಪಬ್ಲಿಕ್ ಟಿವಿ ಡಿಜಿಟಲ್ಗೆ ಸ್ಪಷ್ಟನೆ ನೀಡಿದ್ದಾರೆ.
ಆದರೆ ಅರ್ಥವಾಗದೇ ಇರುವುದು ಇಷ್ಟೆ. ಕೇವಲ ಮಾತುಕತೆಯಲ್ಲಿ ಪರಸ್ಪರ ಹಾರ ಹಾಕಿಕೊಂಡು ಫೋಟೋ ತೆಗೆಸಿಕೊಳ್ತಾರಾ? ಫ್ಯಾಮಿಲಿ ಫ್ರೆಂಡ್ ಆಗಿರುವ ಶಂಕರ್ ಬಿದರಿ ಕೂಡಾ ಫೋಟೋದಲ್ಲಿದ್ದಾರೆ. ಮಾತುಕತೆಗೇ ಹಾರ, ಫೋಟೋನಾ.. ಇದು ಅಭಿಮಾನಿಗಳಿಗೂ ಕಾಡ್ತಿರೋ ಪ್ರಶ್ನೆ.



