ಬೆಲ್ಬಾಟಂ. ಈ ಚಿತ್ರದ ಮೂಲಕವೇ ರಿಷಬ್ ಶೆಟ್ಟಿ ಹೀರೋ ಆಗಿದ್ದು. ಡಿಟೆಕ್ಟಿವ್ ದಿವಾಕರನ ಪಾತ್ರದ ಮೂಲಕ ಮೋಡಿ ಮಾಡಿದ್ದು. ಕ್ರೈಮ್ ಕಾಮಿಡಿ ಜಾನರ್ನ ಬೆಲ್ಬಾಟಂ ಹಿಟ್ ಆಗಿತ್ತು. ಈಗ ಕಾಂತಾರದಲ್ಲಿನ ವರಾಹರೂಪಂ.. ಹಾಡು ಹೇಗೆ ಸೆನ್ಸೇಷನ್ ಸೃಷ್ಟಿಸಿತ್ತೋ.. ಹಾಗೆಯೇ ಬೆಲ್ಬಾಟಂನ ಆದಿಜ್ಯೋತಿ ಬನ್ಯೋ.. ಹಾಡು ಕೂಡಾ ಹಿಟ್ ಆಗಿತ್ತು. ಈಗಿನ ಕಾಂತಾರದ ಸಿಂಗಾರ ಸಿರಿಯೇ.. ಹಾಡಿನಂತೆಯೇ.. ಏತಕೆ ಬೊಗಸೆ ತುಂಬ ಆಸೆ ತುಂಬುವೆ.. ಹಾಡು ಹಿಟ್ ಆಗಿತ್ತು. ಈಗ ಲೀಲಾ ಪಾತ್ರದ ಮೂಲಕ ಸಪ್ತಮಿ ಗೌಡ ಸೆನ್ಸೇಷನ್ ಸೃಷ್ಟಿಸಿದ್ದಂತೆಯೇ ಹರಿಪ್ರಿಯಾ ಕೂಡಾ ಕುಸುಮ ಪಾತ್ರಕ್ಕೆ ಜೀವ ತುಂಬಿದ್ದರು. ಜಯತೀರ್ಥ ನಿರ್ದೇಶಕ. ಹೀಗೆ ದೊಡ್ಡ ಮಟ್ಟದಲ್ಲಿ ಗೆದ್ದಿದ್ದ ಈ ಚಿತ್ರದ ಸೀಕ್ವೆಲ್ ಬೆಲ್ ಬಾಟಮ್ 2 ತಯಾರಿಗೆ ಚಿತ್ರ ತಂಡ ಮುಂದಾಗಿತ್ತು. ಮುಹೂರ್ತವೂ ಆಗಿತ್ತು.
ಆದರೆ ಮುಹೂರ್ತ ನಡೆದು ಎರಡು ವರ್ಷಗಳು ಕಳೆದರೂ ಚಿತ್ರದ ಚಿತ್ರೀಕರಣ ಮಾತ್ರ ಆರಂಭವಾಗಿಲ್ಲ. ಈಗ ನಿರ್ದೇಶಕ ಜಯತೀರ್ಥ ಅವರೇ ಬೆಲ್ ಬಾಟಂ 2 ಯಾವಾಗ ಶುರು ಎಂಬ ಸುಳಿವು ಕೊಟ್ಟಿದ್ದಾರೆ.
ಬೆಲ್ ಬಾಟಂ 2 ಚಿತ್ರದ ಚಿತ್ರಕತೆ ಸಿದ್ಧವಾಗಿದೆ. ಮುಹೂರ್ತವೂ ಆಗಿದೆ. ಮುಹೂರ್ತ ಮಾಡಿ 2 ವರ್ಷ ಆಯಿತು. ಅಪ್ಪು ಸರ್ ಬಂದು ಚಿತ್ರಕ್ಕೆ ವಿಷ್ ಮಾಡಿದ್ದರು. ಮಧ್ಯೆ ಕೊರೊನಾ ಬಂತು. ಈ ಮಧ್ಯೆ ತಾವು ಬನಾರಸ್ ಚಿತ್ರದಲ್ಲಿ ಬ್ಯುಸಿಯಾದರೆ ರಿಷಬ್ ಕಾಂತಾರದಲ್ಲಿ ತೊಡಗಿಸಿಕೊಂಡರು. ಈಗ ರಿಷಬ್ ಕಾಂತಾರದ ಕೆಲಸಗಳನ್ನೆಲ್ಲ ಮುಗಿಸಿ ಬಂದ ತಕ್ಷಣ ಬೆಲ್ ಬಾಟಂ 2 ಶುರುವಾಗಲಿದೆ ಎಂದಿದ್ದಾರೆ ಜಯತೀರ್ಥ.
ಜಯತೀರ್ಥ ಕೆರಿಯರ್ನಲ್ಲಿ ಬೆಲ್ಬಾಟಂ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಆದರೆ ಅದಾದ ನಂತರ ಬನಾರಸ್ ಚಿತ್ರದಲ್ಲಿ ಅದೇ ನಿರೀಕ್ಷೆ ಉಳಿಸಿಕೊಳ್ಳುವದಲ್ಲಿ ಜಯತೀರ್ಥ ಸೋತಿದ್ದಾರೆ. ಬನಾರಸ್ ನಿರೀಕ್ಷೆಯ ಮಟ್ಟದ ಅಂಚಿಗೂ ಹೋಗಲಿಲ್ಲ. ಈಗ ಬೆಲ್ಬಾಟಂ 2 ಚಿತ್ರದ ಸುಳಿವು ಕೊಟ್ಟಿದ್ದಾರೆ. ಇದರ ಮಧ್ಯೆ ಮತ್ತೊಂದು ಕಥೆಯ ಸಿದ್ಧತೆಯೂ ನಡೆಯುತ್ತಿದೆ. ಕರಗದ ಹಿನ್ನೆಲೆಯ ಚಿತ್ರದ ತಯಾರಿಯೂ ಇದೆ.
ಇತ್ತ ಕಾಂತಾರದ ನಂತರ ರಿಷಬ್ ಶೆಟ್ಟಿ ಸ್ಟಾರ್ ಗಿರಿಯೂ ಬದಲಾಗಿದೆ. ಆದರೆ ಎಂದಿನಂತೆಯೇ ರಿಷಬ್ ಶೆಟ್ಟಿ ಕಥೆಯೇ ಹೀರೋ ಎನ್ನುವವರು. ಹಾಗಾದರೆ ಜಯತೀರ್ಥ ನಿರ್ದೇಶನದ ಬೆಲ್ಬಾಟಂ 2 ಚಿತ್ರ ಸೆಟ್ಟೇರಬಹುದು. ರಿಷಬ್ ಇಮೇಜ್ ಬದಲಾಗಿದೆ. ಈಗಿರುವ ಇಮೇಜ್ಗೆ ತಕ್ಕಂತೆ ಚಿತ್ರಕತೆ ಮಾಡಬೇಕು ಆದರೆ ಪಾತ್ರವನ್ನು ಬದಲಿಸಲು ಆಗುವುದಿಲ್ಲ. ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುತ್ತೇವೆ. ಡಿಟೆಕ್ಟರ್ ದಿವಾಕರ್ ಪಾತ್ರ ಹಾಗೆಯೇ ಇರಲಿದೆ ಎಂದಿದ್ದಾರೆ ಜಯತೀರ್ಥ.
ಬೆಲ್ ಬಾಟಂ 2 ಚಿತ್ರಕ್ಕೂ ಟಿಕೆ ದಯಾನಂದ್ ಅವರೇ ಕಥೆಗಾರ. ರಿಷಬ್ ಜೊತೆ ಬೆಲ್ಬಾಟಂ ಅಣ್ಣಪ್ಪ ಅಚ್ಯುತ್ ಕುಮಾರ್ ಕೂಡಾ ಇರಲಿದ್ದಾರೆ. ಹರಿಪ್ರಿಯಾ ಅವರ ಜೊತೆ ತಾನ್ಯಾ ಹೋಪ್ ನಟಿಸಲಿದ್ದಾರೆ. ಪ್ರಮೋದ್ ಶೆಟ್ಟಿ ಮತ್ತು ಯೋಗರಾಜ್ ಭಟ್ ಇರಲಿದ್ದಾರೆ ಎಂದು ಚಿತ್ರತಂಡ ಹೇಳಿತ್ತು. ಅದೇ ಕಂಟಿನ್ಯೂ ಆಗಲಿದೆಯಾ..? ನೋಡಬೇಕು.



