ಹೆಡ್ ಬುಷ್ ಸಿನಿಮಾ ಈ ವಾರವಷ್ಟೇ ರಿಲೀಸ್ ಆಗಿದೆ. ಕಾಂತಾರದ ಅಬ್ಬರದ ಎದುರು ಉತ್ತಮ ಪ್ರದರ್ಶನವನ್ನೂ ಕಾಣುತ್ತಿದೆ. ಬೆಂಗಳೂರಿನ ಮೊದಲ ಡಾನ್ ಜೈರಾಜ್ ಬಯೋಪಿಕ್ ಇದು. ರೌಡಿಸಂ ಇತಿಹಾಸವನ್ನು ತೋರಿಸಿರುವ ಚಿತ್ರಕ್ಕೆ ಡಾಲಿ ಧನಂಜಯ್ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಅಗ್ನಿ ಶ್ರೀಧರ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರೋ ಚಿತ್ರಕ್ಕೆ ಶೂನ್ಯ ಎಂಬುವವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೇಲರಿನಲ್ಲಿ ಕರಗವನ್ನು ತೋರಿಸಲಾಗಿತ್ತು. ಒಂದೆಡೆ ಕಾಂತಾರ ದೈವ, ಭೂತಕೋಲ, ದೈವಾರಾಧನೆ, ಕಂಬಳದಂತ ಕರಾವಳಿಯ ಕಲೆಗಳನ್ನು ಯಶಸ್ವಿಯಾಗಿ ತೋರಿಸಿ ಗೆದ್ದರೆ ಹೆಡ್ ಬುಷ್ ಬೆಂಗಳೂರಿನ ಹೆಮ್ಮೆಯ ಕರಗವನ್ನು ತೋರಿಸಲಿದೆ ಎಂದು ಪ್ರೇಕ್ಷಕರು ಮಾತನಾಡಿಕೊಂಡಿದ್ದರು. ಈಗ ಚಿತ್ರದ ಬಗ್ಗೆ ವೀರಗಾಸೆ ಕಲಾವಿದರು ಆಕ್ರೋಶಗೊಂಡಿದ್ದಾರೆ.

ಚಿತ್ರದ ಒಂದು ದೃಶ್ಯದಲ್ಲಿ ಜೈರಾಜ್ ಮೇಲೆ ವೀರಗಾಸೆ ವೇಷ ತೊಟ್ಟ ರೌಡಿಗಳಿಂದ ಅಟ್ಯಾಕ್ ಆಗುತ್ತದೆ. ಅದು ನಿಜವಾಗಿಯೂ ನಡೆದಿತ್ತೋ ಚಿತ್ರ ನಿರ್ದೇಶಕರ ಕಲ್ಪನೆಯೋ ಗೊತ್ತಿಲ್ಲ. ಆದರೆ ದೃಶ್ಯದಲ್ಲಿ ವೀರಗಾಸೆ ಕಲಾವಿದರನ್ನು ವೀರಗಾಸೆ ವೇಷದಲ್ಲಿಯೇ ಒದೆಯುವ, ಹೊಡೆಯುವ.. ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು ವೀರಶೈವ ಲಿಂಗಾಯತ ಮಹಾಸಭಾದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಸುವರ್ಣ ಕರ್ನಾಟಕ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಬಸವರಾಜ್ ಡಾಲಿ ಧನಂಜಯ್ ಅವರಿಗೆ ಈ ರೀತಿಯದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ



ಅಂದಹಾಗೆ ವೀರಗಾಸೆಗೆ ವೀರಶೈವ ಪರಂಪರೆಯಷ್ಟೇ ಇತಿಹಾಸವಿದೆ. ದಕ್ಷಬ್ರಹ್ಮನ ಅಹಂಕಾರಕ್ಕೆ ನೊಂದ ಪಾರ್ವತಿ ಯಜ್ಞಕುಂಡಕ್ಕೆ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಇದರಿಂದ ಉಗ್ರನಾದ ಶಿವನ ಆಕ್ರೋಶದಿಂದ ಉದ್ಭವಿಸುವವನೇ ವೀರಭದ್ರ ಸ್ವಾಮಿ. ವೀರಭದ್ರ ದಕ್ಷಯ ಬ್ರಹ್ಮನನ್ನು ಕೊಂದು ಯಾಗವನ್ನು ಹಾಳು ಮಾಡುತ್ತಾನೆ. ಇದು ಪುರಾಣದ ಕಥೆ. ಇಂದಿಗೂ ದೇವಸ್ಥಾನ, ಜಾತ್ರೆಗಳಲ್ಲಿ ವೀರಗಾಸೆ ನೃತ್ಯ ನಡೆಯುತ್ತದೆ. ಶೈವ ಸಂಪ್ರದಾಯದ ವೀರನೃತ್ಯ ವೀರಶೈವ ಲಿಂಗಾಯತರ ಅವಿಭಾಜ್ಯ ಅಂಗವೂ ಹೌದು. ವೀರಗಾಸೆ ನೃತ್ಯ ಮಾಡುವವರ ಬಗ್ಗೆ ವೀರಶೈವ ಲಿಂಗಾಯತರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಹೆಡ್ ಬುಷ್ ಎಂಬ ರೌಡಿಸಂ ಸಿನಿಮಾದಲ್ಲಿ ವೀರಗಾಸೆಯನ್ನು ಏಕೆ ಬಳಸಿಕೊಂಡರೋ.. ಆದರೆ ವೀರಗಾಸೆ ಕಲಾವಿದರನ್ನು ಈ ಮೂಲಕ ರೌಡಿಗಳೇನೋ ಎಂಬಂತೆ ಬಿಂಬಿಸಿರುವುದು ವೀರಶೈವ ಲಿಂಗಾಯತರಿಗೆ ಆಕ್ರೋಶಕ್ಕೆ ಕಾರಣವಾಗಿವೆ.




