ಗಣೇಶ್ ಚಿತ್ರಗಳಲ್ಲಿ ರೊಮ್ಯಾನ್ಸ್ ದೃಶ್ಯಗಳು ಹಿತವಾದ ಅನುಭವ ನೀಡುತ್ತವೆ. ಪ್ರೀತಂ ಗುಬ್ಬಿ ಚಿತ್ರದಲ್ಲಿ ಪ್ರೀತಿಯನ್ನು ಹೇಳೋ ರೀತಿಯೇ ಮನಮೋಹಕ. ಕವಿರಾಜ್, ಪ್ರೀತಿ ಪ್ರೇಮವನ್ನು ಅಕ್ಷರಗಳಲ್ಲಿ ಹುಟ್ಟಿಸೋದ್ರಲ್ಲಿ ಪ್ರಣಯರಾಜ. ಸೋನು ನಿಗಮ್, ಪ್ರೇಮ ಗೀತೆಯನ್ನು ಹಾಡುತ್ತಿದ್ದರೆ ಪ್ರೀತಿಯನ್ನೇ ಮರೆತವನೂ ಲವ್ ಎಂಬ ಸುಳಿಗೆ ಸಿಲುಕಿಬಿಡುತ್ತಾನೆ. ಅಂತಹವರೆಲ್ಲ ಒಟ್ಟಾಗಿ ಬಾನದಾರಿಯಲ್ಲಿ.. ಜೊತೆಗೂಡಿದಾಗ ನಿನ್ನನ್ನು ನೋಡಿದ ನಂತರ ಜೀವಕೆ.. ಎಂಬ ಮಧುರ ಗೀತೆ ಸೃಷ್ಟಿಯಾಗಿದೆ.

ಕವಿರಾಜ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರ ಜಂಟಿ ಜರ್ನಿ ಶುರುವಾಗಿದ್ದು ಮಂದಾಕಿನಿಯೇ.. ಹಾಡಿನಿಂದ. ಹುಡುಗಾಟ ಚಿತ್ರದಲ್ಲಿ ಗಣೇಶ್`ಗಾಗಿ ಮಂದಾಕಿನಿಯೇ.. ಹಾಡಿಗೆ ಸಾಹಿತ್ಯ ಬರೆದಿದ್ದ ಕವಿರಾಜ್, ಗಣೇಶ್ ಅವರಿಗೆ ಕೊಟ್ಟಿರುವ ಹಿಟ್ ಹಾಡುಗಳಿಗೆ ಲೆಕ್ಕವಿಲ್ಲ. ಬಾನದಾರಿಯಲ್ಲಿ.. ಚಿತ್ರದ ಈ ಹಾಡು ಕೂಡಾ ಸೊಗಸಾಗಿದೆ. ಅರ್ಜುನ್ ಜನ್ಯ ಮ್ಯೂಸಿಕ್, ಸೋನು ನಿಗಮ್ ವಾಯ್ಸ್.. ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ.. 

ಚಿತ್ರದ ಆಡಿಯೋ ರೈಟ್ಸ್ ಆನಂದ್ ಆಡಿಯೋದವರಿಗೆ ಗಣೇಶ್ ಕೆರಿಯರಿನಲ್ಲೇ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಮತ್ತೊಮ್ಮೆ ಮಗದೊಮ್ಮೆ ಜೊತೆಯಾಗಿರುವ ಚಿತ್ರ ಬಾನದಾರಿಯಲ್ಲಿ. ಈ ಚಿತ್ರದಲ್ಲಿ ಗಣೇಶ್ ಕ್ರಿಕೆಟರ್ ಆಗಿದ್ದರೆ, ಈ ಹಾಡಿನಲ್ಲಿ ಕಾಣಿಸಿಕೊಳ್ಳೋ ರುಕ್ಮಿಣಿ ವಸಂತ್ ಸರ್ಫಿಂಗ್ ಮಾಡುತ್ತಾರೆ. ರೀಷ್ಮಾ ನಾಣಯ್ಯ ಅವರದ್ದು ಫೋಟೋಗ್ರಾಫರ್ ಕೆಲಸ. ಚಿತ್ರ ನೇರವಾಗಿ ಹೃದಯಕ್ಕೇ ಕೈ ಹಾಕಿ ಪರಪರ ಕೆರೆಯುತ್ತದೆ ಎನ್ನುವ ಭರವಸೆಯಂತೂ ಚಿತ್ರತಂಡದಿಂದ ಸಿಕ್ಕಿದೆ.



