ಒಂದು ಸಿನಿಮಾ ವಿಮರ್ಶೆ ಮಾಡುವುದು ಹೇಗೆ..? ಎಂಬ ಬಗ್ಗೆ ಈಗ ಸಂಶೋಧನೆಗಳು ಶುರುವಾಗಿವೆ. ನೀತಿ ಪಾಠಗಳೂ ಆರಂಭವಾಗಿವೆ. ವಿಮರ್ಶೆ ಮಾಡುವುದು ಎಂದರೆ.. ಏನನ್ನೂ ಹೇಳಬಾರದು. ಸರಿ ಇದ್ದರೆ, ಸರಿ ಎಂದು ಹೇಳಬೇಕು. ಆದರೆ ತಪ್ಪಾಗಿದೆ ಎಂದು ಅನ್ನಿಸಿದರೆ ಅಪ್ಪಿತಪ್ಪಿಯೂ ಹೇಳಬಾರದು. ಇದು ಧ್ರುವ ಸರ್ಜಾರ ಮಾರ್ಟಿನ್ ಚಿತ್ರದ ಎಫೆಕ್ಟ್. ಅದೀಗ ವಿಮರ್ಶೆ ಮಾಡಿದರೆ, ಸಿನಿಮಾ ಇಷ್ಟವಾಗಲಿಲ್ಲ ಎಂದು ಹೇಳಿದರೆ ಕೇಸು ಹಾಕುವ ಹಂತಕ್ಕೆ ಹೋಗಿದೆ. ಅದಕ್ಕೆಲ್ಲ ಕಾರಣವಾಗಿದ್ದು ಧ್ರುವ ಸರ್ಜಾರ ಮಾರ್ಟಿನ್ ಚಿತ್ರದ ಯೂಟ್ಯೂಬರ್ ಸುಧಾಕರ್ ಗೌಡ ಮಾಡಿದ ವಿಮರ್ಶೆ. ಈಗ ಒಂದು ಹಂತಕ್ಕೆ ಬಂದು ನಿಂತಿದ್ದು, ಇದು ಇಲ್ಲಿಗೇ ಕೊನೆಯಾಗುತ್ತದಾ.. ಗೊತ್ತಿಲ್ಲ. ಸದ್ಯಕ್ಕಂತೂ ಸುಧಾಕರ್ ಗೌಡ, ಕಾಂಟ್ರವರ್ಸಿಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ.
ನನ್ನ ಕಡೆಯಿಂದ ನಾನು ಇದನ್ನು ಮುಂದುವರೆಸುವುದಿಲ್ಲ. ನಿಮ್ಮ ಕಡೆಯಿಂದನೂ ಆಗದೇ ಇರಲಿ ಅಂತ ಮನವಿ ಮಾಡಿಕೊಳ್ಳುತ್ತೇನೆ. ಇದರ ಮೇಲೆ ನೀವು ಏನಾದರೂ ಮಾಡಿದರೆ ನಾನು ಪ್ರತಿಕ್ರಿಯೆ ನೀಡಲ್ಲ. ವಾರಕ್ಕೆ ಎರಡು ಮೂರು ಕಂಟೆಂಟ್ ಮಾಡುತ್ತಿದ್ದೆ. ಅದನ್ನು ಮಾಡುತ್ತೇನೆ.. ಎಂಬುದೊಂದು ಪೋಸ್ಟ್ ಹಾಕಿ ಯೂಟ್ಯೂಬರ್ ಸುಧಾಕರ್ ಗೌಡ ʻಮಾರ್ಟಿನ್ ವಿಮರ್ಶೆʼ ವಿವಾದಕ್ಕೆ ಅಂತ್ಯ ಹಾಡಲು ಬಯಸಿದ್ದಾರೆ.
ನಾನೂ ಧ್ರುವ ಸರ್ಜಾ ಅಭಿಮಾನಿ. ಸಿನಿಮಾ ನೋಡಿ ನೋವಾಯ್ತು : ಸುಧಾಕರ್ ಗೌಡ ಅವರೂ ಧ್ರುವ ಸರ್ಜಾ ಅಭಿಮಾನಿಯಂತೆ. ನಾನೂ ಕೂಡಾ ಧ್ರುವ ಸರ್ಜಾ ಅವರ ಫ್ಯಾನ್. ಕಾಲೇಜಿನಲ್ಲಿದ್ದಾಗ ಬಹದ್ದೂರ್ ಸಿನಿಮಾ ನೋಡಿ ಬಹದ್ದೂರ್ ಸುಧಾಕರ್ ಅಂತಾ ಹೆಸರಿಟ್ಟುಕೊಂಡಿದ್ದವನು. ಧ್ರುವ ಸರ್ಜಾ ಅವರ ಚಿತ್ರಗಳ ಪ್ರತೀ ಡೈಲಾಗ್, ಹಾಡು ನನ್ನ ನೆನಪಿನಲ್ಲಿದೆ. ಧ್ರುವ ಸರ್ ಕರ್ನಾಟಕದ ಒಂದು ಮಾಸ್ ಕಟೌಟ್. ಆ ಕಟೌಟ್ʻಗೆ ತಕ್ಕಂತಹ ಸಿನಿಮಾ ಬಂದಿಲ್ಲ ಎಂಬ ನೋವಿನಲ್ಲಿ ವಿಡಿಯೋ ಮಾಡಿದ್ದೆ. ಕೆಟ್ಟ ಉದ್ದೇಶ ಖಂಡಿತಾ ಇರಲಿಲ್ಲ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ ಸುಧಾಕರ್ ಗೌಡ.
ಧ್ರುವ ಸರ್ಜಾ ಅಭಿಮಾನಿಗಳು ನಿರಂತರವಾಗಿ ಕರೆ ಮಾಡಿ ಬೈದು ಹಿಂಸೆ ಕೊಟ್ಟಿದ್ದ ಕಾರಣಕ್ಕೆ ತಾವು ಹಾಗೆಲ್ಲ ಮಾಡಬೇಕಾಯ್ತು ಎಂದು ಹೇಳಿಕೊಂಡಿರುವ ಸುಧಾಕರ್ ಗೌಡ ʻʻನನ್ನ ಕಡೆಯಿಂದ ತಪ್ಪು ಆಗಿ ಹೋಗಿದೆ. ಧ್ರುವ ಸರ್ಜಾ ಸರ್‌ಗೆ ಮತ್ತು ಅವರ ಫ್ಯಾನ್ಸ್‌ಗೆ ಹಾಗೇ ಸುಧಾಕರ್ ಮಾಡಿದ್ದು ತಪ್ಪು ಯಾರಿಗೆಲ್ಲ ಅನಿಸಿದೆಯೋ, ಕನ್ನಡ ಚಿತ್ರರಂಗ ಇರಬಹುದು, ಮಾಧ್ಯಮದವರು ಇರಬಹುದು, ಯಾರಿಗೆ ತಪ್ಪು ಅನಿಸಿದೆಯೋ ಅದರ ಬಗ್ಗೆ ಚರ್ಚೆನೇ ಬೇಡ. ತಪ್ಪು ನನ್ನದೇ ಅಂತ ನಾನೇ ಒಪ್ಪಿಕೊಳ್ಳುತ್ತೇನೆ. ಧ್ರುವ ಸರ್ ದೊಡ್ಡವರು. ನಾನು ಏನೂ ಅಲ್ಲ. ಅವರು ಸಮುದ್ರ, ನಾವು ಬಾವಿಯಲ್ಲಿರೋ ಕಪ್ಪೆ ಲೆಕ್ಕ ಸರಿನಾ? ಗೊತ್ತಿದ್ದೋ.. ಗೊತ್ತಿಲ್ಲದೆಯೋ ರಿವ್ಯೂ ಮಾಡಿ ಆಗಿದೆ. ತಪ್ಪಾಗಿದೆ. ಇದನ್ನು ಇಲ್ಲಿಗೇ ಬಿಟ್ಟು ಬಿಡಿ ಪ್ಲೀಸ್ ಎಂದು ಮನವಿ ಮಾಡಿಕೊಂಡಿದ್ದಾರೆ ಸುಧಾಕರ್ ಗೌಡ. ಧ್ರುವ ಸರ್ಜಾ ಅಭಿಮಾನಿಗಳಿಗೆ ಹಾಗೂ ಕರ್ನಾಟಕದ ಸಿನಿಮಾ ಪ್ರೇಕ್ಷಕರಿಗೆ ಕ್ಷಮೆ ಕೇಳಿದ್ದಾರೆ.
ಇಷ್ಟಾದರೂ ಮಾರ್ಟಿನ್ ಚಿತ್ರದ ಕಲೆಕ್ಷನ್ ಮೇಲಕ್ಕೆದ್ದಿಲ್ಲ. ಸತತ ೬ನೇ ದಿನವೂ ಕಲೆಕ್ಷನ್ ಡಲ್ಲು ಹೊಡೆದಿದೆ. ಅಂದಹಾಗೆ ಚಿತ್ರದ ಬಜೆಟ್ ಸರಿಯಾಗಿದ್ದರೆ, ಈ ಕಲೆಕ್ಷನ್ ಕೂಡಾ ಹಿಟ್ ಅಥವಾ ಸೂಪರ್ ಹಿಟ್ ಸಾಲಿಗೆ ಸೇರುತ್ತಿತ್ತು. ಚಿತ್ರದ ಬಜೆಟ್ ಹೆಚ್ಚಾಗಿರುವ ಕಾರಣಕ್ಕಷ್ಟೇ ಸಿನಿಮಾ ಫ್ಲಾಪ್ ಆಗುತ್ತಿದೆ. ಅಷ್ಟೇ ಹೊರತು, ಧ್ರುವ ಸರ್ಜಾ ಅವರ ರೆಗ್ಯುಲರ್ ಮಾರ್ಕೆಟ್ಟಿಗೆ ತಕ್ಕಂತೆ ಸಿನಿಮಾ ಮಾಡಿದ್ದರೆ, ಧ್ರುವ ಸರ್ಜಾ ಅವರ ಹಿಟ್ ಕಲ್ಚರ್ ಕಂಟಿನ್ಯೂ ಆಗುತ್ತಿತ್ತು.



