ಕಾಂತಾರ ಯಶಸ್ವಿಯಾದ ನಂತರ ಕಾಂತಾರದ ಲೀಲಾ, ಕಾಳಿಯಾಗುತ್ತಿದ್ದಾರೆ. ಕಾಂತಾರ ನಂತರ ಸಪ್ತಮಿ ಗೌಡ ಓಕೆ ಎಂದಿರುವ ಹೊಸ ಸಿನಿಮಾ ಪೈಲ್ವಾನ್ ಕೃಷ್ಣ ನಿರ್ದೇಶನದ ಕಾಳಿ. ಅಭಿಷೇಕ್ ಅಂಬರೀಷ್ ಹೀರೋ ಆಗಿರುವ ಚಿತ್ರಕ್ಕೆ ಬಂಡಿ ಮಾಂಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತವೂ ಆಗಿದೆ. ಅಭಿಷೇಕ್ ಅಂಬರೀಷ್ ಚಾಮರಾಜನಗರದ ಹುಡುಗನಾದರೆ ಸಪ್ತಮಿ ಗೌಡ, ಕರ್ನಾಟಕದಲ್ಲಿರುವ ತಮಿಳು ಹುಡುಗಿ. ಅವರಿಬ್ಬರ ಮಧ್ಯೆ ಪ್ರೀತಿ ಮತ್ತೊಂದೆಡೆ ಕಾವೇರಿಗಾಗಿ ಎರಡು ರಾಜ್ಯಗಳ ನಡುವೆ ನಡೆಯುವ ಹೋರಾಟ.. ಕನ್ನಡದ ಹುಡುಗ ಮತ್ತು ತಮಿಳು ಹುಡುಗಿಯ ನಡುವಿನ ಪ್ರೀತಿ.. ಎಲ್ಲವೂ ಚಿತ್ರದಲ್ಲಿರಲಿದೆ.
ಕಾಂತಾರ ಮುಗಿದ ಮೇಲೆ ನಾನು ಹಲವಾರು ಕಥೆ ಕೇಳಿದೆ. ನಾನು ಕೇಳಿದ 10ಕ್ಕೂ ಹೆಚ್ಚು ಕಥೆಗಳಲ್ಲಿ ಇದು ನನಗೆ ಬೆಸ್ಟ್ ಎನಿಸಿತು. ನನಗೆ ನಾನು ನಟಿಸುವ ಪ್ರತಿ ಪಾತ್ರವೂ ಹೊಸದಾಗಿರಬೇಕು. ನಾನು ಈ ಹಿಂದೆ ನಟಿಸಿರುವ ಯಾವುದೇ ಪಾತ್ರದ ಶೇಡ್ ಇರಬಾರದು ಎಂದು ಬಯಸುತ್ತೇನೆ. ನನ್ನ ಪ್ರತಿ ಪಾತ್ರವೂ ವಿಭಿನ್ನವಾಗಿರಬೇಕು. ಒಂದೊಂದು ಪಾತ್ರ ಮಾಡುತ್ತ ಒಂದೊಂದು ಪಾಠ ಕಲಿಯಬೇಕು. ಸಿನಿಮಾ ನೋಡಿದವರು ಈ ಹುಡುಗಿ ಹೊಸ ಪಾತ್ರವನ್ನೇ ಮಾಡಿದ್ದಾಳೆ ಎನ್ನಬೇಕು ಎನ್ನುವುದು ನನ್ನ ಆಸೆ. ಕಾಳಿಯಲ್ಲಿ ಅಂತಹ ಪಾತ್ರವಿದೆ ಎಂದಿದ್ದಾರೆ ಸಪ್ತಮಿ ಗೌಡ.
ಅಂದಹಾಗೆ ಸಪ್ತಮಿ ಗೌಡ ಸಂಭಾವನೆ ಹೆಚ್ಚಾಗಿದೆಯಾ..
ನೀವು ಹೆಚ್ಚಾಗಿದೆ ಎಂದುಕೊಂಡರೆ ಹೆಚ್ಚಾಗಿದೆ ಎಂದರ್ಥ ಎನ್ನುತ್ತಾರೆ. ಅದರರ್ಥ ಇಷ್ಟೆ. ಅವರು ಸಂಭಾವನೆ ಎಷ್ಟು ಅಂತ ಹೇಳಲ್ಲ. ಹೆಚ್ಚಾಗಿದೆ ಎಂದುಕೊಳ್ಳಬೇಕು. ಹೆಣ್ಣು ಮಕ್ಕಳ ವಯಸ್ಸನ್ನಷ್ಟೇ ಅಲ್ಲ, ನಾಯಕಿಯರ ಸಂಭಾವನೆಯನ್ನೂ ಕೇಳಬಾರದು. ಅಂದಹಾಗೆ
ಹಿಂದಿಯ ಒಂದು ಆಫರ್‍ನ್ನು ದೊಡ್ಡ ಬ್ಯಾನರ್ ಆಗಿದ್ದರೂ ಕಥೆ ಇಷ್ಟವಾಗದೆ ಸಪ್ತಮಿ ಗೌಡ ನೋ ಎಂದಿರುವ ಸುದ್ದಿ ಇದೆ. ಇದರ ಜೊತೆಗೆ ಇನ್ನೊಂದು ಕನ್ನಡ ಸಿನಿಮಾಗೂ ಯೆಸ್ ಎಂದಿದ್ದು ಆ ಚಿತ್ರದ ಘೋಷಣೆಯೂ ಸದ್ಯದಲ್ಲೇ ಹೊರಬೀಳಲಿದೆ.
ಕಾಂತಾರದ ಲೀಲಾ ಪಾತ್ರದಂತೆಯೇ ಈ ಚಿತ್ರದ ಪಾತ್ರವೂ ಇರಲಿದೆ. ಬಹಳ ಇಂಟೆನ್ಸ್ ಇರುವ ಪಾತ್ರ. ಪಾತ್ರ ಆ ರೀತಿ ಎಂದರೆ ಅಷ್ಟೇ ಪ್ರಾಮುಖ್ಯತೆ ಇರುವ ಪಾತ್ರ ಎಂದರ್ಥ ಅಷ್ಟೆ. ಅವರ ಪಾತ್ರದ ಲುಕ್ ಟೆಸ್ಟ್ ಮತ್ತು ಫೋಟೋಶೂಟ್ ಮಾಡಲಿದ್ದು ಶೀಘ್ರದಲ್ಲೇ ಫಸ್ಟ್ ಲುಕ್ ಹೊರಬಿಡಲಿದ್ದೇವೆ ಎಂದಿದ್ದಾರೆ ಡೈರೆಕ್ಟರ್ ಕೃಷ್ಣ.



