ಹೊಸಪೇಟೆ. ಬಳ್ಳಾರಿ, ಚಳ್ಳಕೆರೆ.ಚಿತ್ರದುರ್ಗ.. ಮೈಸೂರು ಕರ್ನಾಟಕದ ಜೈತ್ರ ಯಾತ್ರೆ ಮುಗಿಸಿಕೊಂಡ ವೇದ ತಂಡ ಈಗ ಉತ್ತರ ಕನಾಟಕ ಯಾತ್ರೆ ಹೊರಟಿದೆ. ಚಳ್ಳಕೆರೆಯಲ್ಲಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ನಗರದ ತುಂಬೆಲ್ಲ ಮೆರವಣಿಗೆ ಮಾಡಿ ವೇದ ತಂಡಕ್ಕೆ ಶುಭ ಹಾರೈಸಿದರೆ ಬಳ್ಳಾರಿ, ಹೊಸಪೇಟೆಯ ಅಭಿಮಾನಿಗಳದ್ದು ಎಂದಿನಂತೆ ಕರಡಿಯ ಅಪ್ಪುಗೆ.

ಶಿವಣ್ಣ, ಗೀತಾ, ನಿರ್ದೇಶಕ ಹರ್ಷ, ಗಾನವಿ, ಆದಿತಿ ಸಾಗರ್ ಸೇರಿದಂತೆ ಇಡೀ ಚಿತ್ರತಂಡ ಗೆಲುವಿನ ಯಾತ್ರೆಯಲ್ಲಿ ಊರೂರು ತಲುಪುತ್ತಿದೆ. ವರ್ಷಾರಂಭದಲ್ಲೇ ಭರ್ಜರಿ ಹಿಟ್ ಕೊಟ್ಟು ಸಂಚಲನ ಸೃಷ್ಟಿಸಿರುವ ಶಿವರಾಜ ಕುಮಾರ್ ಮೈಸೂರು ಭಾಗದ ಯಾತ್ರೆ ಮುಗಿಸಿ ಉತ್ತರ ಕನಾಟಕಕ್ಕೆ ಕಾಲಿಟ್ಟಿದ್ದಾರೆ.

ಬಳ್ಳಾರಿಯ ನಟರಾಜ್ ಹಾಗೂ ಉಮಾ ಚಿತ್ರಮಂದಿರಕ್ಕೆ ಶಿವಣ್ಣ ದಂಪತಿ ಹಾಗೂ ವೇದ ಚಿತ್ರ ತಂಡ ಭೇಟಿ ನೀಡಿತ್ತು. ಈ ವೇಳೆ ಶಿವಣ್ಣನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾದ ಪರಿಣಾಮ ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿದ್ದಾರೆ. ಬಹಳಷ್ಟು ಜನರಿದ್ದ ಕಾರಣ ಅಭಿಮಾನಿಗಳನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಶಿವಣ್ಣ ಅವರಿಗೆ ಹೂಮಳೆಗರೆದು ಸ್ವಾಗತ ಕೋರಿದ್ದಾರೆ ಅಭಿಮಾನಿಗಳು. ಶಿವಣ್ಣ ದಂಪತಿ ಅಭಿಮಾನಿಗಳ ಜೊತೆಗೆ ಕೆಲ ಕಾಲ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

ಶಿವರಾಜ್ ಕುಮಾರ್ ಪೊಲೀಸರಿಗೆ ಮನವಿ ಮಾಡಿ ಲಾಠಿ ಪ್ರಹಾರ ನಿಯಂತ್ರಿಸಿ ಅಭಿಮಾನಿಗಳನ್ನು ಕಂಟ್ರೋಲ್ ಮಾಡಿದ್ದು ವಿಶೇಷ. ಹೊಸಪೇಟೆಯಲ್ಲಿಯಂತೂ ಅಭಿಮಾನಿಗಳ ಮಧ್ಯೆ ಪುಟ್ಟ ಜಾಗದಲ್ಲಿಯೇ ಅಭಿಮಾನಿಗಳ ಒತ್ತಡಕ್ಕೆ ಮಣಿದು ಪುಷ್ಪಾ ಪುಷ್ಪಾ ಹಾಗೂ ಗಿಲಕ್ಕೋ ಹಾಡಿಗೆ ಡ್ಯಾನ್ಸ್ ಮಾಡಿದರು. ಅಭಿಮಾನಿಗಳು ಹುಚ್ಚೆದ್ದು ಕುಣಿದರು.
ಅಂದಹಾಗೆ ಇಂದು ದಾವಣಗೆರೆಯ ಅಶೋಕ ಥಿಯೇಟರ್, ಹರಿಹರದ ಜಯಶ್ರೀ, ರಾಣೆಬೆನ್ನೂರಿನ ಶಿವಶಕ್ತಿ, ಹಾವೇರಿಯ ಮಾಗವಿ ಹಾಗೂ ಗದಗ ನಗರದ ಮಹಾಲಕ್ಷ್ಮಿ ಥಿಯೇಟರ್ ವಿಸಿಟ್ ಇದೆ.
ನಾಳೆ ಬೆಳಗಾವಿ, ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ವೇದ ಯಾತ್ರೆ ಮುಂದುವರೆಯಲಿದೆ.



