ಅಪ್ಪು ಗಂಧದ ಗುಡಿ. ಇದು ಡಾ.ರಾಜ್ ಗಂಧದ ಗುಡಿ ಅಲ್ಲ. ರಾಜ್-ಕಲ್ಪನಾ ಜೋಡಿಯ ಪ್ರೇಮ ಪ್ರಸಂಗ ಇಲ್ಲ. ಎಂಪಿ ಪ್ರಕಾಶ್ ವಿಲನ್ ರೋಲ್ ಇಲ್ಲ. ವಿಷ್ಣುವರ್ಧನ್-ಬಾಲಕೃಷ್ಣ ಜೋಡಿಯ ಖಳರ ಕರಾಮತ್ತೂ ಇಲ್ಲ. ಅಣ್ಣ-ತಮ್ಮನ ಸೆಂಟಿಮೆಂಟ್ ಇಲ್ಲ. ಶಿವಣ್ಣನ ಗಂಧದ ಗುಡಿಯಲ್ಲಿದ್ದಂತೆ ಚರಣ್‍ರಾಜ್-ಪ್ರಭಾಕರ್ ಜೋಡಿಯ ಮಿಂಚೂ ಇಲ್ಲ. ರೊಮ್ಯಾನ್ಸ್ ಇಲ್ಲ. ಆದರೂ ಚಿತ್ರದ ಕಲೆಕ್ಷನ್ 20 ಕೋಟಿ ದಾಟಿದೆ ಅನ್ನೋ ಸುದ್ದಿಯಿದೆ.
ಗಂಧದ ಗುಡಿ ನೋಡಿ ಬರುತ್ತಿರುವವರು ಹೇಳುತ್ತಿರೋದು ಒಂದೇ ಮಾತು. ಅಪ್ಪು ಜೀವನವನ್ನಷ್ಟೇ ಅಲ್ಲ, ಮತ್ತೊಂದು ಸಂದೇಶ ಕೊಟ್ಟೇ ಹೊರಟಿದ್ದಾರೆ. ಇದು ಮಕ್ಕಳೊಂದಿಗೆ ನೋಡಬೇಕಾದ ಸಿನಿಮಾ. ಮಕ್ಕಳು ತಪ್ಪದೇ ನೋಡಬೇಕಾದ ಸಿನಿಮಾ. ಇಡೀ ಕರ್ನಾಟಕ ಒಂದು ಜರ್ನಿಯಲ್ಲಿ ಮುಗಿಯುತ್ತೆ. ಕನ್ನಡಿಗರು ಕರ್ನಾಟಕದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ತಾರೆ. ಇದು ಮಕ್ಕಳಿಗೆ ಕರ್ನಾಟಕದ ಮೇಲೆ ಪ್ರೀತಿ ಹುಟ್ಟಿಸುವ ಸಿನಿಮಾ ಎಂದಿದ್ದಾರೆ ಸಿನಿಮಾ ನೋಡಿದವರು.
ಮಕ್ಕಳಿಗೆ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ಅದ್ಧೂರಿಯಾಗಿ ತೋರಿಸುವುದಕ್ಕೆ ಗಂಧದ ಗುಡಿ ನೋಡಬೇಕು.
ಕರ್ನಾಟಕದ ಬಗ್ಗೆ ಹೆಮ್ಮೆ ಪಡುವಂತೆ ಮಾಡುವುದಕ್ಕು ಗಂಧದ ಗುಡಿ ನೋಡಬೇಕು.
ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದರೆ ಎಷ್ಟೋ ಕಡೆ ಒಂದು ಸ್ಥಳದಲ್ಲೇ ಎಲ್ಲವನ್ನೂ ನೋಡೋಕೆ ಆಗಲ್ಲ. ಆದರೆ ಗಂಧಧ ಗುಡಿ ಹಾಗಿಲ್ಲ.
ಮಕ್ಕಳು ನೋಡುವುದಷ್ಟೇ ಅಲ್ಲ, ದೊಡ್ಡವರಾದ ಮೇಲೆ ಹೇಗಿರಬೇಕು. ವಿನಯವಂತಿಕೆ ಇರಬೇಕು. ಸರಳವಾಗಿ ಬದುಕಬೇಕು ಎನ್ನುವುದನ್ನು ಮಕ್ಕಳಿಗೆ ಅರ್ಥ ಮಾಡಿಸುವುದಕ್ಕೆ ಗಂಧದ ಗುಡಿ ನೋಡಬೇಕು ಎನ್ನುತ್ತಿದ್ದಾರೆ ಸಿನಿಮಾ ನೋಡಿದವರು. ಇದು ಅಪ್ಪು ಕಡೆಯ ಬಾರಿ ಕಾಣಿಸಿರುವ ಕೊನೆಯ ಸಿನಿಮಾ. ಇದು ಸಿನಿಮಾ ಅಲ್ಲ. ಡಾಕ್ಯು-ಡ್ರಾಮಾ. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ಕನ್ನಡಿಗರಿಗೆ ತೋರಿಸುವ ಸಾಹಸ. ಇದು ಅಪ್ಪು ಅವರ ಜರ್ನಿ. ಇಲ್ಲಿ ಪುನೀತ್ ಪುನೀತ್ ಅವರಾಗಿಯೇ ಕಾಣಿಸಿದ್ದಾರೆ. ನಟಿಸಿಲ್ಲ. ಇದು ಪುನೀತ್ ಅವರ ಚಿತ್ರಗಳಲ್ಲಿ ಎಂದಿನಂತೆ ಸಿಗುವ ಮಾಸ್ ಮಸಾಲ ಇಲ್ಲ. ಕಾಮಿಡಿ ಇಲ್ಲ. ಕೌಟುಂಬಿಕ ಕಥೆಯಿಲ್ಲ. ಹೀರೋಯಿನ್ ಇಲ್ಲ. ಹಾಡುಗಳಿಲ್ಲ. ಡ್ಯಾನ್ಸ್ ಇಲ್ಲ. ಕೇವಲ ಅಪ್ಪು ಮತ್ತು ಕರ್ನಾಟಕದ ಕಾಡಿನ ಜಗತ್ತು ಇದೆ.
ಇಂತಹ ಚಿತ್ರ ರಿಲೀಸ್ ಆಗಿ ಇದುವರೆಗಿನ ಕಲೆಕ್ಷನ್ 20 ಕೋಟಿ ದಾಟಿದೆಯಂತೆ. ಹೊಂಬಾಳೆ ಹಾಗೂ ಕೆಆರ್‍ಜಿ ಸ್ಟುಡಿಯೋಸ್ ರಿಲೀಸ್ ಆದ ಚಿತ್ರವಿದು. ತಮ್ಮದೇ ಸಿನಿಮಾ ಕಾಂತಾರ ಚಿತ್ರ ಅದ್ಧೂರಿಯಾಗಿ ಹೋಗುತ್ತಿದ್ದರೂ ಅದನ್ನು ತೆಗೆದು ಗಂಧದ ಗುಡಿ ಹಾಕಿದ್ದಾರೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಕೇವಲ ಪುನೀತ್ ಅವರಿಗಾಗಿ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕೇವಲ 2 ಶೋ ನೀಡಲಾಗಿತ್ತು. ಮೊದಲ 2ಶೋಗೆ ಜನರಿಂದ ಬಂದ ಪ್ರತಿಕ್ರಿಯೆ ನೊಡಿ ಶೋಗಳ ಸಂಖ್ಯೆಯನ್ನು 23 ಶೋಗಳಿಗೆ ಹೆಚ್ಚಿಸಲಾಯ್ತು. ಬೆಂಗಳೂರು, ಮೈಸೂರು ಹಾಗೂ ಉ.ಕರ್ನಾಟಕದಲ್ಲಿ ಜನ ಮುಗಿಬೀಳುತ್ತಿದ್ದಾರೆ. ಎಲ್ಲ ಕಡೆ ಹೌಸ್‍ಫುಲ್.
ಸರಳವಾಗಿ ಹೇಳಬೇಕೆಂದರೆ ಕನ್ನಡಿಗರಿಗಾಗಿ.. ಕನ್ನಡದ ಮಕ್ಕಳಿಗಾಗಿ.. ಮುಂದಿನ ಭವಿಷ್ಯದ ದಾರಿ ತೋರುವುದಕ್ಕಾಗಿ..ಅಪ್ಪು ಮಾಡಿದ ಸಿನಿಮಾ ಗಂಧದ ಗುಡಿ.



