ಇತ್ತೀಚೆಗೆ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ವಿವಾದವಾಗುವುದು ಇದ್ದೇ ಇದೆ. ರಶ್ಮಿಕಾ, ಹಿಂದಿ ಚಾನೆಲ್ಲೊಂದರ ಇಂಟರ್‍ವ್ಯೂನಲ್ಲಿ ತಮ್ಮ ಸಿನಿಮಾ ಎಂಟ್ರಿಯ ಬಗ್ಗೆ ಮಾತನಾಡುವಾಗ ಬ್ಯಾನರ್ ಹೆಸರು ಹೇಳೋದನ್ನು ಅವಾಯ್ಡ್ ಮಾಡಿದ್ದರು. ರಕ್ಷಿತ್ ಶೆಟ್ಟಿಯವರ ಪರಂವಾ ಸ್ಟುಡಿಯೋ ಹೆಸರನ್ನಾಗಲೀ, ಹೀರೋ ಕಂ ಪ್ರೊಡ್ಯೂಸರ್ ಆಗಿದ್ದ ರಕ್ಷಿತ್ ಶೆಟ್ಟಿ ಹೆಸರನ್ನಾಗಲೀ, ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನಾಗಲೀ ಅಪ್ಪಿ ತಪ್ಪಿಯೂ ಹೇಳಿರಲಿಲ್ಲ. ಅದು ವಿವಾದವಾಗಿತ್ತು. ಟ್ರೋಲ್ ಆಗಿತ್ತು. 



ಅಂಜನಿಪುತ್ರ. ರಶ್ಮಿಕಾ ಮಂದಣ್ಣ ಅಭಿನಯದ 2ನೇ ಸಿನಿಮಾ. ಮೊದಲನೇ ಸಿನಿಮಾ ಕಿರಿಕ್ ಪಾರ್ಟಿ ಹಿಟ್ ಆದ ನಂತರ ರಶ್ಮಿಕಾಗೆ ಪುನೀತ್ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಡೈರೆಕ್ಟರ್ ಹರ್ಷ. ಅಂಜನಿಪುತ್ರ ಬಿಡುಗಡೆಯಾಗಿ 5 ವರ್ಷವಾಗಿದ್ದನ್ನು ರಶ್ಮಿಕಾ ಮಂದಣ್ಣ ನೆನಪಿಸಿಕೊಂಡಿದ್ದಾರೆ.
ಅಂಜನಿಪುತ್ರನಿಗೆ 5 ವರ್ಷಗಳಾಗಿವೆ. ಪುನೀತ್ ಅವರೊಂದಿಗೆ ಆಡಿದ ಮಾತುಕತೆಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಆ ಸಮಯದಲ್ಲಿ ನನಗೆ ನನ್ನ ಮೇಲಿದ್ದ ವಿಶ್ವಾಸಕ್ಕಿಂತ ಅವರಿಗೇ ಹೆಚ್ಚು ವಿಶ್ವಾಸವಿತ್ತು. ಆ ಸಹೃದಯಿಯೊಂದಿಗಿನ ಬಂಧವನ್ನು ಬದಲಾಯಿಸಲು ಸಾಧ್ಯವಿಲ್ಲ. ನನಗೆ ಅವಕಾಶ ನೀಡಿದ್ದಕ್ಕಾಗಿ ನಿರ್ದೇಶಕ ಹರ್ಷ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

ಅಂಜನಿಪುತ್ರ 2017ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಚಿತ್ರದ ಹಾಡುಗಳು ಇವತ್ತಿಗೂ ಪ್ಯಾಪುಲರ್. ಮೊದಲ ಚಿತ್ರದ ಡೈರೆಕ್ಟರ್ ರಿಷಬ್ ಶೆಟ್ಟಿ ಅನ್ನೋ ಹೆಸರು ಮರೆತಿದ್ದರೂ, ನಂತರ ತಮಗೆ ಆಕ್ಷನ್ ಕಟ್ ಹೇಳಿದ್ದ ಹರ್ಷ ಹೆಸರನ್ನು ಮಾತ್ರ ಮರೆತಿಲ್ಲ.



