ಅಪ್ಪ ನೆನಪಿರಲಿ ಪ್ರೇಮ್ ಹೀರೋ. ಅಪ್ಪ ಎಂದರೆ ಇಷ್ಟವೇ ಆದರೂ ಆಕೆ ಪುನೀತ್ ರಾಜಕುಮಾರ್ ಅಭಿಮಾನಿ. ಪುನೀತ್ ಅವರಿಗೂ ಅಷ್ಟೆ.. ಪ್ರೇಮ್ ಮಗಳು ಎಲ್ಲಿಯೇ ಕಾಣಿಸಲಿ.. ಎಷ್ಟೇ ಗುಂಪಿರಲಿ.. ಆಕೆಯನ್ನು ಗುರುತಿಸಿ ಕರೆದು ಆಕೆಯ ಎಜುಕೇಷನ್ ಬಗ್ಗೆ ವಿಚಾರಿಸುತ್ತಿದ್ದರಂತೆ. ಚೆನ್ನಾಗಿ ಓದಬೇಕು ಎನ್ನುತ್ತಿದ್ದರಂತೆ. ಅಮೃತಾಗೆ ಅಪ್ಪು ಇವರ ಈ ನಡವಳಿಕೆ ಇಷ್ಟವಾಗಿತ್ತು. ಪುನೀತ್ ನಿಧನರಾದಾಗ ನಾನು ನೋಡಬೇಕು ಎಂದು ಹಠ ಹಿಡಿದರಂತೆ. ಸಾವಿರಾರು ಜನರ ಮಧ್ಯೆ ಮಗಳನ್ನು ಕರೆದುಕೊಂಡು ಹೋಗಿ ಬಂದ ಪ್ರೇಮ್, ಪುನೀತ್ ಅವರ ಅಂತಿಮ ದರ್ಶನ ಮಾಡಿಸಿದ್ದರಂತೆ.

ನೆನಪಿರಲಿ ಪ್ರೇಮ್ ಅವರ ಮಗ ಗುರು ಶಿಷ್ಯರು ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಎಂಟ್ರಿ ಕೊಟ್ಟು ಶಹಬ್ಬಾಸ್ ಎನ್ನಿಸಿಕೊಂಡ ಬೆನ್ನಲ್ಲೇ ಮಗಳು ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಈಗ ಪ್ರೇಮ್ ಪುತ್ರಿ ಅಮೃತಾ ಅವರ ಸರದಿ. ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಚಿತ್ರಕ್ಕೆ ಅಮೃತಾ ಹೀರೋಯಿನ್.

ಇಡೀ ಚಿತ್ರದಲ್ಲಿ ಎದ್ದು ಕಾಣುವುದೇ ಮಹಾಲಕ್ಷ್ಮಿ ಪಾತ್ರ. ಆ ಪಾತ್ರ ಗೆದ್ದರೆ ಇಡೀ ಸಿನಿಮಾ ಗೆದ್ದಂತೆ. ಚಿತ್ರದ ನಾಯಕಿಯ ಪಾತ್ರವೇ ಅಷ್ಟು ಚೆನ್ನಾಗಿದೆ. ಮಹಾಲಕ್ಷ್ಮಿಯಂತಿರಬೇಕು. ಅಂತಹ ಹುಡುಗಿ ಬೇಕು ಎಂದು ಹುಡುಕುತ್ತಿದ್ದಾಗ ನಮ್ ಡೈರೆಕ್ಟರ್ ಪ್ರೇಮ್ ಅವರ ಮಗಳನ್ನು ತೋರಿಸಿದು. ನಾನು ಅಮೃತಾರನ್ನು ನೋಡಿರಲಿಲ್ಲ. ಆದರೆ ಫೋಟೋ ಮತ್ತು ವಿಡಿಯೋ ನೋಡಿದಾಗ ಇಷ್ಟವಾಯಿತು. ಪ್ರೇಮ್ ಅವರಿಗೆ ಫೋನ್ ಮಾಡಿದೆ. ನಂತರ ಕಥೆ ಹೇಳಿದೆವು. ಪ್ರೇಮ್ ಯೆಸ್ ಎಂದರು ಎಂದಿದ್ದಾರೆ ಡಾಲಿ ಧನಂಜಯ್.
ದುನಿಯಾ ವಿಜಯ್ ಅವರ ಜಾಕ್ಸನ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಉಮೇಶ್ ಕೆ. ಕೃಪ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತುಂಬಾ ವರ್ಷಗಳ ಗ್ಯಾಪ್ ನಂತರ ಉಮೇಶ್ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಾಯಕನಾಗಿ ಧನಂಜಯ್ ಗೆಳೆಯರ ಬಳಗದ ನಾಗಭೂಷಣ್ ಇದ್ದಾರೆ. ಬಂಡಿಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವೂ ನೆರವೇರಿದೆ.



