ಮೇಜರ್ ಧ್ಯಾನ್ ಚಂದ್. ಹಾಕಿ ಲೋಕದ ದಂತಕಥೆ. ಅವರ ಮಗ ಅಶೋಕ್ ಕುಮಾರ್ ಕೂಡಾ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಹಾಕಿ ಆಟಗಾರ.
ಲಾಲಾ ಅಮರ್ನಾಥ್. ಕ್ರಿಕೆಟ್ ಲೋಕದಲ್ಲಿ ಇಂಡಿಯಾ ಪರ ಪ್ರಥಮ ಸೆಂಚುರಿ ಹೊಡೆದ ಆಟಗಾರ. ಅವರ ಮಕ್ಕಳಿಬ್ಬರೂ ಟೆಸ್ಟ್ ಕ್ರಿಕೆಟ್ ಆಡಿದವರೇ. ಸುರಿಂದರ್ ಅಮರ್ನಾಥ್ ತಂದೆಯಂತೆಯೇ ಪಾದಾರ್ಪಣೆ ಪಂದ್ಯದಲ್ಲಿಯೇ ಶತಕ ಬಾರಿಸಿದವರು. ಇನ್ನೊಬ್ಬ ಮೊಹಿಂದಿರ್ ಅಮರ್ನಾಥ್. ಕಪಿಲ್ ಡೆವಿಲ್ಸ್ 1983ರ ವಿಶ್ವಕಪ್ ಗೆಲುವಿಗೆ ಕಾರಣರಾದವರಲ್ಲಿ ಒಬ್ಬರು.
ಪಂಡಿತ್ ರವಿಶಂಕರ್ ಮತ್ತು ಅನೌಷ್ಕಾ ಶಂಕರ್ ಇಬ್ಬರೂ ಸಂಗೀತ ಲೋಕದಲ್ಲಿ ಸಾಧನೆ ಮಾಡಿದವರೇ. ತಂದೆ ಮಗಳಿಬ್ಬರೂ ಸಂಗೀತ ಲೋಕದಲ್ಲಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರು.
ಹರಿವಂಶರಾಯ್ ಬಚ್ಚನ್ ಸಾಹಿತ್ಯ ಲೋಕದ ದಿಗ್ಗಜ. ಅವರ ಪುತ್ರ ಅಮಿತಾಭ್ ಬಚ್ಚನ್ ಸಿನಿಮಾ ಲೋಕದ ದಂತಕಥೆ.
ಬ್ಯಾಡ್ಮಿಂಟನ್ನಲ್ಲಿ ಪ್ರಕಾಶ್ ಪಡುಕೋಣೆ ಇತಿಹಾಸ ಬರೆದರೆ ದೀಪಿಕಾ ಪಡುಕೋಣೆ ಸಿನಿಮಾ ಲೋಕದಲ್ಲಿ ಇತಿಹಾಸ ಬರೆಯುತ್ತಿದ್ದಾರೆ.
ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಕರೆಸಿಕೊಂಡರೆ ಮಗಳು ಮಲ್ಲಿಕಾ ಸಾರಾಭಾಯ್ ವಿಭಿನ್ನವಾಗಿ ಸಂಗೀತ ನೃತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು.
ಕುವೆಂಪು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಇತಿಹಾಸವನ್ನೇ ಬರೆದವರು. ಜ್ಞಾನಪೀಠ ಪುರಸ್ಕೃತ ಮೊದಲ ಕನ್ನಡಿಗ ಕೆ.ವಿ.ಪುಟ್ಟಪ್ಪ. ಅವರ ಮಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರದ್ದೂ ಸಾಹಿತ್ಯ ಕೃಷಿಯೇ. ಇಂದಿಗೂ ಓದುಗರ ಅಚ್ಚುಮೆಚ್ಚಿನ ಲೇಖಕ.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಲೋಕದಲ್ಲಿ ಇತಿಹಾಸ ಬರೆದರೆ, ಅವರ ಪುತ್ರ ಕ್ಯಾ.ಗೋಪಿನಾಥ್ ವಿಮಾನ ಕ್ಷೇತ್ರದಲ್ಲಿ ಇತಿಹಾಸ ಬರೆದರು.
ಜವಹರ ಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ. ಹಿರಿಯರ ಹೆಜ್ಜೆ ಗುರುತನ್ನು ವಿಸ್ತರಿಸಿದ ಸಾಧಕರು. ಮೂವರೂ ಭಾರತರತ್ನ ಪುರಸ್ಕೃತರು.
ಇಂತಹ ಗಣ್ಯರನ್ನು ಹುಡುಕಿದರೆ ಇನ್ನಷ್ಟು ಸಿಕ್ಕಾವು. ಆ ಪಟ್ಟಿಗೀಗ ಡಾ.ರಾಜ್ ಕುಮಾರ್ ಪುತ್ರ ಡಾ.ಪುನೀತ್ ರಾಜ್ಕುಮಾರ್ ಸೇರಿದ್ದಾರೆ. ಒಂದೇ ಒಂದು ನೋವಿನ ಸಂಗತಿಯೆಂದರೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವತಃ ಡಾ.ರಾಜ್ ಸ್ವೀಕರಿಸಿದ್ದರು. ಪುನೀತ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಸಿಕ್ಕಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ.
ಡಾ.ರಾಜ್ ಕರ್ನಾಟಕ ರತ್ನ ಪಡೆದಾಗ ಇಡೀ ಕರ್ನಾಟಕ ಸಂಭ್ರಮಿಸಿತ್ತು. ಈ ಬಾರಿಯೂ ಅಷ್ಟೆ, ಸಂಭ್ರಮಕ್ಕೇನೂ ಕೊರತೆಯಿಲ್ಲ. ಆದರೆ ಪುನೀತ್ ಇಲ್ಲ ಅನ್ನೋ ನೋವಿದೆ.
ಪುನೀತ್ರ ಮೊದಲ ಚಿತ್ರ ಅಪ್ಪು ಚಿತ್ರವನ್ನು ನೋಡೋಕೆ ರಜನಿಕಾಂತ್ ಬೆಂಗಳೂರಿಗೆ ಬಂದಿದ್ದರು. ರಜನಿಯವರಿಂದ ಮೊದಲ ಚಿತ್ರದಲ್ಲೇ ಶಹಬ್ಬಾಸ್ ತೆಗೆದುಕೊಂಡಿದ್ದರು ಅಪ್ಪು. ಪುನೀತ್ರ ಮೊದಲ ಹೆಜ್ಜೆಯ ಸಾಧನೆಯನ್ನು ಸಂಭ್ರಮಿಸಿದ್ದ ರಜನಿಕಾಂತ್, ಈಗ ಅಪ್ಪು ಅವರಿಗೆ ಕರ್ನಾಟಕ ರತ್ನ ಕೊಡಲು ಆಗಮಿಸುವ ಮುಖ್ಯ ಅತಿಥಿ.
ಪುಟ್ಟ ಮಗುವಿದ್ದಾಗಿನಿಂದ ಲೋಹಿತ್ ಎಂದೇ ಕರೆಯುತ್ತಿದ್ದ ಸುಧಾಮೂರ್ತಿಯವರಿಗೂ ಅಷ್ಟೆ. ನೋವಿನ ವಿಷಯವೇ.
ಕೇವಲ ಗೆಳೆತನಕ್ಕಾಗಿ ಗೆಳೆಯ ಗೆಳೆಯ.. ಹಾಡು ಹಾಡಿದ್ದ ಜೂ.ಎನ್.ಟಿ.ಆರ್. ಕಥೆಯೂ ಅಷ್ಟೆ. ಗೆಳೆಯನ ಸಾಧನೆ ನೋಡಿ ಖುಷಿ ಪಡಲು ಗೆಳೆಯನಿಲ್ಲ. ಆದರೂ.. ಗೆಳೆಯನ ಅಮೋಘ ಪರ್ವಕ್ಕೆ ಸಾಕ್ಷಿಯಾಗಬೇಕು. ಒಂದು ರೀತಿಯಲ್ಲಿ ಕರ್ನಾಟಕ ನೋವಿನಲ್ಲೇ ಸಂಭ್ರಮಿಸುತ್ತಿದೆ.



