ಸಿಂಗಾರ ಸಿರಿಯೇ.. ಹಾಡಿನ ಮೂಲಕ ಕನ್ನಡ ಚಿತ್ರರಸಿಕರಿಗೆ ಕಚಗುಳಿಯಿಟ್ಟ ನಟಿ ಲೀಲಾ. ಸಪ್ತಮಿಗೌಡ. ರಿಷಬ್ ಶೆಟ್ಟಿ ಜೊತೆಗೆ ಘಟಾನುಘಟಿ ಕಲಾವಿದರ ಜೊತೆ ಮೈನವಿರೇಳಿಸುವ ಅಭಿನಯ ನೀಡಿ ಸೈ ಎನಿಸಿಕೊಂಡ ಸಪ್ತಮಿ ಗೌಡ ಈಗ ಚಿತ್ರರಂಗದ ಸೆನ್ಸೇಷನ್ ಕೂಡಾ ಹೌದು. ಕಾಂತಾರದ ಡಿ-ಗ್ಲಾಮರ್ ರೋಲ್‍ನಲ್ಲೂ ಸಕ್ಸಸ್ ಕಂಡ ಸಪ್ತಮಿ ಗೌಡ ಸಿನಿ ಜರ್ನಿ ಬೇರೆಯದೇ ದಿಕ್ಕಿಗೆ ಸಾಗುತ್ತಿದೆ.
ಮೊದಲನೆ ಆಫರ್ ಬಂದಿರೋದು ಪೈಲ್ವಾನ್ ಕೃಷ್ಣ ಕಡೆಯಿಂದ. ಹೆಬ್ಬುಲಿ ಕೃಷ್ಣ ಕಾಳಿ ಚಿತ್ರಕ್ಕೆ ಸಿದ್ಧರಾಗಿದ್ದು ಅಭಿಷೇಕ್ ಅಂಬರೀಷ್ ಹೀರೋ ಆಗಿ ನಟಿಸುತ್ತಿದ್ದಾರೆ. ರಗಡ್ ಚಿತ್ರದ ರಗಡ್ ಪಾತ್ರಕ್ಕೆ ಸಪ್ತಮಿ ಗೌಡ ಆಯ್ಕೆಯಾಗಿದ್ದಾರಂತೆ. ಅಂದಹಾಗೆ ಕಾಂತಾರ ಸಪ್ತಮಿ ಗೌಡ ಅವರ 2ನೇ ಸಿನಿಮಾ. ಪಾಪ್‍ಕಾರ್ನ್ ಮಂಕಿ ಟೈಗರ್‍ನಲ್ಲಿ ಗಿರಿಜಾ ಪಾತ್ರ ಮಾಡಿದ್ದರು ಸಪ್ತಮಿ ಗೌಡ. ಮೊದಲ ಚಿತ್ರದ ಪಾತ್ರವನ್ನು ಪ್ರೇಕ್ಷಕರು ಪಾತ್ರದ ಹೆಸರಿಂದಲೇ ಗುರುತಿಸುತ್ತಾರೆ. ಕಾಂತಾರದ ಪಾತ್ರವನ್ನೂ ಜನ ಲೀಲಾ ಅನ್ನೋ ಪಾತ್ರದ ಹೆಸರಿಂದಲೇ ಗುರುತಿಸುತ್ತಾರೆ. ಈಗ ಕಾಳಿ.
ಅಷ್ಟೇ ಅಲ್ಲ.. ಉತ್ತರಕಾಂಡ ಚಿತ್ರದಲ್ಲೂ ಸಪ್ತಮಿ ಗೌಡ ನಟಿಸುತ್ತಿದ್ದಾರೆ ಅನ್ನೋ ಸುದ್ದಿಯಿದೆ. ಡಾಲಿ ಮತ್ತು ರಮ್ಯಾ ಕಾಂಬಿನೇಷನ್‍ನ ಸಿನಿಮಾ ಇದು. ಕಾರ್ತಿಕ್ ಗೌಡ ನಿರ್ಮಾಣದ ಈ ಚಿತ್ರದ ಮೂಲಕ ರಮ್ಯಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಮ್ಯಾ ಚಿತ್ರರಂಗಕ್ಕೆ ನಟಿಯಾಗಿ ಬರುತ್ತಿದ್ದಾರೆ ಎನ್ನುವುದೇ ದೊಡ್ಡ ಸೆನ್ಸೇಷನ್ ಸೃಷ್ಟಿಸಿದೆ. ಈಗ ಅದೇ ಚಿತ್ರದಲ್ಲಿ ರಮ್ಯಾ ಅವರಷ್ಟೇ ಅಲ್ಲದೆ ಸಪ್ತಮಿ ಗೌಡ ಕೂಡಾ ಸೇರ್ಪಡೆಗೊಂಡಿದ್ದಾರೆ.



