ಧರಣಿ ಮಂಡಲ ಮಧ್ಯದೊಳಗೆ.. ಇದು ಗೋವಿನ ಹಾಡಲ್ಲ. ಇದೇ ವಾರ ಬಿಡುಗಡೆಯಾಗಿರೋ ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಕನ್ನಡಕ್ಕೆ ಅಪರೂಪವೆನಿಸುವ ಕಥೆ ಮತ್ತು ನಿರೂಪಣೆಗೆ ಗೆಲುವೂ ಸಿಕ್ಕರೆ.. ಇದು ಚಿತ್ರರಂಗದ ಅಭಿಮಾನಿಗಳ ನಿರೀಕ್ಷೆ. ಒಂದು ಒಳ್ಳೆಯ ಸಿನಿಮಾ ಚಿತ್ರರಂಗ ಮತ್ತು ಉದ್ಯಮವನ್ನೂ ಬೆಳೆಸುತ್ತದೆ. ಹಾಗೆಯೇ ಧರಣಿ ಮಂಡಲ ಮಧ್ಯದೊಳಗೆ. ನಾವು ಒಬ್ಬರಿಗೆ ಸಹಾಯ ಮಾಡಿದರೆ, ಇನ್ಯಾರೋ, ಮತ್ತಾವುದೋ ಗಳಿಗೆಯಲ್ಲಿ ನಮ್ಮ ನೆರವಿಗೆ ಬರುತ್ತಾರೆ ಅನ್ನೋದು ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ಥೀಮ್. ಹೊಸ ನಿರ್ದೇಶಕ ಶ್ರೀಧರ್ ಶಿಕಾರಿಪುರ ತಮ್ಮ ಮೊದಲ ಯತ್ನದಲ್ಲೇ ಒಂದು ವಿಭಿನ್ನ ಮಾದರಿಯ ನಿರೂಪಣೆಯ ಮೂಲಕ ಬೆರಗು ಹುಟ್ಟಿಸುತ್ತಾರೆ. ಹಲವು ಚಿತ್ರ ವಿಮರ್ಶಕರು ಚಿತ್ರವನ್ನು ಮುಲಾಜಿಲ್ಲದೆ ಮೆಚ್ಚಿಕೊಂಡಿರೋದು ಶ್ರೀಧರ್ ಶಿಕಾರಿಪುರ ಪ್ರತಿಭೆಗೆ ಸಾಕ್ಷಿ.

ಬಾಕ್ಸರ್ ಚಾಂಪಿಯನ್ ಆಗಬೇಕೆಂದಿರುವ ಆದಿ ಮತ್ತು ಆತನ ಗೆಳತಿ ಮಾದಕ ವ್ಯಸನಿ ಇವರದು ಒಂದು ಕಥೆ. ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಇಬ್ಬರೂ ಪಾತ್ರವನ್ನು ತಿಂದು ಹಾಕುತ್ತಾರೆ ಎನ್ನುತ್ತಾರಲ್ಲ..ಹಾಗೆಯೇ ನಟಿಸಿದ್ದಾರೆ. 5 ವರ್ಷಗಳ ನಂತರ ಮಗನನ್ನು ನೋಡಲು ಬೆಂಗಳೂರಿಗೆ ಬರುತ್ತಿರುವ ಅಪ್ಪ-ಅಮ್ಮ, ಅವರನ್ನು ನೋಡಲು ಕಾತುರನಾಗಿರುವ ಮಗ ಯಶ್ ಶಟ್ಟಿ, ಮತ್ತೊಂದು ಕಡೆ. ಭೂಗತ ಜಗತ್ತಿನ ಆಂಟನಿ ಗ್ಯಾಂಗ್, ಸೂಸೈಡ್ ಮೋಡ್‍ನಲ್ಲಿರೋ ಭಗ್ನ ಪ್ರೇಮಿಯಾಗಿ ನಿತೇಶ್, ವಿಚಿತ್ರ ವರ್ತನೆಯಿಂದಲೇ ವಿಭಿನ್ನವಾಗಿ ಗುರುತಿಸಿಕೊಳ್ಳೋ ಮರ್ಯಾದೆ ರಾಮಣ್ಣ, ಪ್ಯಾರಾಚೂಟ್, ಡಿಸ್ಕೋ ಪಾತ್ರಗಳು.. ಈ ಎಲ್ಲ ಪಾತ್ರಗಳೂ ಒಂದೇ ಊರಿನಲ್ಲಿ ಒಂದೇ ದಿನ ರಾತ್ರಿಯಲ್ಲಿ ಒಂದಕ್ಕೊಂದು ಸಂಧಿಸಿ ಕಥೆ ನಡೆಯುತ್ತದೆ. ಧರಣಿ ಮಂಡಲ ಮಧ್ಯದೊಳಗೆ.. ಕಥೆಯ ವೇಗಕ್ಕೆ ಡಿಸ್ಟರ್ಬ್ ಎನಿಸುವುದು ಸಾಂಗ್ ಬಂದಾಗ ಮಾತ್ರ.. ಹಾಡು ಓಕೆ ಎನ್ನುವಂತಿದ್ದರೂ.. ಕಥೆ ಹೇಳುತ್ತಿರುವ ವೇಗಕ್ಕೆ ಬ್ರೇಕಪ್ ಹಾಡು.. ಬ್ರೇಕ್ ಹಾಕಿದಂತೆಯೇ ಎನಿಸುತ್ತದೆಂದರೆ ಸುಳ್ಳಲ್ಲ.

ಅಂದಹಾಗೆ ಚಿತ್ರಕ್ಕೀಗ ಡಾಲಿ ಧನಂಜಯ್ ಜೈ ಎಂದಿದ್ದಾರೆ. ಕೊಟ್ಟ ಹಣಕ್ಕೆ ಮೋಸವಿಲ್ಲ. ಇಂಥಾದ್ದೊಂದು ವಿಭಿನ್ನ ಯಶಸ್ವಿ ಪ್ರಯತ್ನವನ್ನು ಗೆಲ್ಲಿಸಬೇಕು ಎಂದು ಹೇಳಿದ್ದಾರೆ. ಚಿತ್ರ ನೋಡಿದ ಹಲವರು ಸ್ವಯಂಸ್ಫೂರ್ತಿಯಿಂದ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿರುವುದು ವಿಶೇಷ. ಅಂದಹಾಗೆ ಸಿನಿಮಾ ಸ್ಟಡಿಯಾಗಿ ಸ್ಟಾಂಡ್ ಆಗುತ್ತಿದೆ.



