ನಾನು ಈ ವಿಡಿಯೋವನ್ನು ಇಷ್ಟ ಪಟ್ಟು ಮಾಡಿದ್ದೇನೆ. ಯಾರಿಗೂ ಅವಮಾನಿಸುವ, ನಂಬಿಕೆಗೆ ಅವಹೇಳನ ಮಾಡುವ ಉದ್ದೇಶದಿಂದ ಮಾಡಿದ್ದಲ್ಲ. ಸಿನಿಮಾ ನೋಡಿದ ಮೇಲೆ ಸಿನಿಮಾ, ಪಂಜುರ್ಲಿ ಎಲ್ಲವೂ ಇಷ್ಟವಾಯಿತು. ಇದರ ಹೊರತಾಗಿ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆ ಖುಷಿಯಲ್ಲಿಯೇ ವಿಡಿಯೋ ಮಾಡಿದ್ದೆನೇ ಹೊರತು ಕೆಟ್ಟ ಉದ್ದೇಶದಿಂದ ಅಲ್ಲ.
ಯಕ್ಷಗಾನ ಮತ್ತು ದೈವಕೋಲ ಒಂದೇ ಎಂದುಕೊಂಡಿದ್ದೆ. ಈಗ ಗೊತ್ತಾಗಿದೆ. ದಯವಿಟ್ಟು ಹರಕೆ ಇಡಬೇಡಿ. ನಿಮಗೆ ನಿಮ್ಮ ದೈವಕ್ಕೆ ನೋವಾಗಿದ್ದರೆ ಕ್ಷಮೆಯಿರಲಿ. ಮುಂದೆಂದೂ ಸಂಸ್ಕøತಿಗೆ ಅಪಚಾರ ಎಸಗುವ ಕೆಲಸ ಮಾಡುವುದಿಲ್ಲ. ದೈವಕೋಲವನ್ನೊಮ್ಮೆ ನೋಡಬೇಕು. ಖಂಡಿತಾ ನೋಡುತ್ತೇನೆ.

ಇದು ಶ್ವೇತಾ ರೆಡ್ಡಿ ಎಂಬ ಯುವತಿಯ ಮಾತು.ಅಂದಹಾಗೆ ಈ ಯುವತಿ ಕನ್ನಡದವರಲ್ಲ. ಮೂಲತಃ ತೆಲುಗಿನವರು. ಹೈದರಾಬಾದ್‍ನವರು. ವರಾಹ ರೂಪಂ ಹಾಡನ್ನು ಎಷ್ಟು ಇಷ್ಟಪಟ್ಟಿದ್ದರೆಂದರೆ ಸ್ವತಃ ಮೇಕಪ್ ಆರ್ಟಿಸ್ಟ್ ಕೂಡಾ ಆಗಿದ್ದ ಶ್ವೇತಾ ಮನೆಗೆ ಬಂದವರೇ ಪಂಜುರ್ಲಿ ವೇಷ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದರು. ಅದನ್ನು ವಿಡಿಯೋ ಕೂಡಾ ಮಾಡಿ ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಹಾಕಿದ್ದರು.
ಪೋಸ್ಟ್ ನೋಡುತ್ತಿದ್ದಂತೆಯೇ ನೆಟ್ಟಿಗರು ತರಾಟೆಗೆ ತೆಗೆದುಕೊಂಡರು. ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಲು ದೈವಾರಾಧನೆ ಅಣಕ ಮಾಡಿದ್ದಾಳೆ ಅಂತ ಯುವತಿ ವಿರುದ್ದ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ರಿಷಬ್ ಮಾಡಿದ ಪಾತ್ರವನ್ನೇ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಳು. ಹಲವರು ಶ್ವೇತಾ ರೆಡ್ಡಿ ವಿರುದ್ಧ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ ಅಂತ ಹೇಳಿದ್ದರು. ಅಲ್ಲದೇ ದೈವಗಳು ನೋಡಿಕೊಳ್ಳಲಿ ಅಂತ ಹರಕೆ ಮಾದರಿ ಎಚ್ಚರಿಕೆ ಸಂದೇಶ ಹಾಕಿದ್ದರು. ಇದಾದ ಬಳಿಕ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದ ಶ್ವೇತಾ ರೆಡ್ಡಿ, ದಯವಿಟ್ಟು ಹರಕೆ ಇಡಬೇಡಿ, ಕ್ಷಮೆ ಕೋರುತ್ತೇನೆ ಎಂದಿದ್ದರು.
ಯಾವಾಗ ನೆಟ್ಟಿಗರು ಹರಕೆಯ ಬಗ್ಗೆ ಸೀರಿಯಸ್ಸಾಗಿ ಬೈದರೋ.. ಆಗ ಆಕೆ ಪಂಜುರ್ಲಿ ಬಗ್ಗೆ, ದೈವದ ಬಗ್ಗೆ ತಿಳಿದುಕೊಳ್ಳೋಕೆ ಶುರು ಮಾಡಿದರು. ಕಾಂತಾರ ಸಿನಿಮಾ ರಿಲೀಸ್ ಆದ ಹೊತ್ತಿನಲ್ಲಿ ರಿಷಬ್ ಶೆಟ್ಟಿ ಒಂದು ಮನವಿ ಮಾಡಿದ್ದರು. ಆ ಹೊತ್ತಿಗೆ ಓಓಓ.. ಎಂಬುದು ಹಾಗೂ ಪಂಜುರ್ಲಿಯ ದೃಶ್ಯಗಳು ಮೋಡಿ ಮಾಡುವುದಕ್ಕೆ ಶುರು ಮಾಡಿದ್ದವು. ಆಗ ಖುದ್ದು ರಿಷಬ್ ಪ್ರೇಕ್ಷಕರಿಗೆ ರೀಲ್ಸ್ ಅಥವಾ ಮೇಮ್ಸ್ ಮಾಡಬೇಡಿ. ದೈವಕ್ಕೆ ಅಪಚಾರ ಮಾಡಬೇಡಿ. ದೈವನನ್ನು ಆರಾಧಿಸುವವರ ನಂಬಿಕೆಗೆ ಘಾಸಿ ಮಾಡಬೇಡಿ ಎಂದಿದ್ದರು. ಆ ವಿಡಿಯೋ ಕೂಡಾ ನೋಡಿದ ಶ್ವೇತಾ ರೆಡ್ಡಿಗೆ ಜೊತೆಯಲ್ಲೇ ಜ್ವರವೂ ಶುರುವಾದಾಗ ಬೆದರಿದರು. ಇನ್‍ಸ್ಟಾಗ್ರಾಂನಲ್ಲಿದ್ದ ವಿಡಿಯೋ ಡಿಲೀಟ್ ಮಾಡಿ ನೆಟ್ಟಿಗರ ಕ್ಷಮೆ ಕೇಳಿದರು.
ಅಷ್ಟಕ್ಕೇ ಸುಮ್ಮನಾಗದೆ ನೇರ ಧರ್ಮಸ್ಥಳಕ್ಕೆ ಬಂದು ತೀರ್ಥಸ್ನಾನ ಮಾಡಿ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿದರು. ಖಾವಂದರಾದ ವೀರೇಂದ್ರ ಹೆಗ್ಗಡೆಯವರನ್ನೂ ಭೇಟಿ ತಪ್ಪು ಕಾಣಿಕೆ ಸಲ್ಲಿಸಿ ಅಪರಾಧವನ್ನು ಮನ್ನಿಸುವಂತೆ ಮನವಿ ಮಾಡಿದರು.
ಅರಿಯದೆ ಮಾಡುವ ತಪ್ಪಿಗೆ ಕ್ಷಮೆಯಂತೂ ಇದೆ. ನಮ್ಮ ಮಂಜುನಾಥ ಸ್ವಾಮಿ, ಅಣ್ಣಪ್ಪ ಕೂಡಾ ಕ್ಷಮಿಸುತ್ತಾನೆ ಬಿಡಿ. ಇನ್ನೆಂದೂ ಇಂತಹ ಕೆಲಸ ಮಾಡಬೇಡಿ ಎಂದು ಬೈದಿದ್ದವರೇ ಸಮಾಧಾನ ಹೇಳಿದರು.



