ಇತ್ತೀಚೆಗೆ ಯೋಗರಾಜ್ ಭಟ್ ಮತ್ತು ರಾಘವೇಂದ್ರ ಹುಣಸೂರು ಅವರ ನಡುವಿನ ಫೋನ್ ಸಂಭಾಷಣೆಯೊಂದು ವೈರಲ್ ಆಗಿತ್ತು. ಅದು ಸಂಭಾಷಣೆ ಎನ್ನುವುದಕ್ಕಿಂತ ಭಟ್ಟರ ಬೈಗುಳ. ಮಿಕ್ಕಿದ್ದೆಲ್ಲ ಸೈಡಿಗಿಟ್ಟರೆ ಬೈಗುಳವೂ ಅವರ ಮಾತಿನಂತೆಯೇ ಇತ್ತು. ಆಡಿಯೋ ವೈರಲ್ ಆಯ್ತು. ಸುದ್ದಿಯೂ ಆಯ್ತು. ರಾಘವೇಂದ್ರ ಹುಣಸೂರು ಜೀ ಟಿವಿ ಕನ್ನಡದ ಬ್ಯುಸಿನೆಸ್ ಹೆಡ್. ಜೀ ಟಿವಿ ಕನ್ನಡದ ನಂ.1 ಚಾನೆಲ್. ಇತ್ತ ಯೋಗರಾಜ್ ಭಟ್ ಕನ್ನಡದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಜೀ ಕನ್ನಡದ ಪ್ರೋಗ್ರಾಮುಗಳಲ್ಲಿ ಜಡ್ಜ್ ಆಗಿಯೂ ಕೆಲಸ ಮಾಡುತ್ತಿರುವ ಭಟ್ಟರು, ಕನ್ನಡ ಚಿತ್ರರಂಗದ ಎಲ್ಲ ಸ್ಟಾರುಗಳಿಗೂ ಡಾರ್ಲಿಂಗು. ಹೀಗಾಗಿಯೇ ಇವರಿಬ್ಬರ ನಡುವಣ ಜಗಳ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಯೋಗರಾಜ್ ಭಟ್ ಅವರ ಪದವಿಪೂರ್ವ, ಗರಡಿ ಹಾಗೂ ಕರಟಕ ದಮನಕ ಚಿತ್ರಗಳ ಹಕ್ಕು ಖರೀದಿಗೆ ಮಾತನಾಡಿದ್ದ ರಾಘವೇಂದ್ರ ಹುಣಸೂರು ನಂತರ ಫೋನ್ ತೆಗೆಯುವುದನ್ನೇ ಮರೆತುಬಿಟ್ಟಿದ್ದರು. ಅದರಲ್ಲೂ ಭಟ್ಟರ ಫೋನ್ ಪಿಕ್ ಮಾಡ್ತಾನೇ ಇರಲಿಲ್ಲ. ಮಾತಿಗೂ ಸಿಗ್ತಾ ಇರಲಿಲ್ಲ. ಆಫೀಸಿನಲ್ಲಿಯೂ ಸಿಗ್ತಾ ಇರಲಿಲ್ಲ. ಹೀಗಾಗಿ ಭಟ್ಟರು ತಮ್ಮದೇ ಶೈಲಿಯಲ್ಲಿ ಬಾಯಿಗೆ ಬಂದಂತೆ ಬೈದು, ಹಿಗ್ಗಾಮುಗ್ಗಾ ಜಾಡಿಸಿದ್ದರು. ಭಟ್ಟರು ಇದು ಬೈಗುಳ ಎಂದ ಮೇಲಷ್ಟೇ ಅದು ಬೈಗುಳ ಎಂದು ಅರ್ಥವಾಗಿದ್ದು ಎಂಬುದು ಬೇರೆ ವಿಷಯ. ಅಷ್ಟು ಕಾವ್ಯಾತ್ಮಕವಾಗಿತ್ತು. ಆದರೆ ಇಡೀ ಪ್ರಕರಣದಲ್ಲಿ ಯೋಗರಾಜ್ ಭಟ್ಟರು ಪತ್ರಕರ್ತರನ್ನು ಟೂಲ್ ಆಗಿ ಬಳಸಿಕೊಂಡರಾ ಎಂಬ ಅನುಮಾನ ಮೂಡುತ್ತಿದೆ.
ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ನಿರ್ಮಾಣ ಮಾಡಿರುವ ಪದವಿಪೂರ್ವ ಚಿತ್ರದ ಟೀಸರ್ ಇದೀಗ ರಿಲೀಸ್ ಆಗಿದೆ. 

ಅದು ಪಿಯು ಹುಡುಗರ ಹುಡಗಿಯರ ಯೌವ್ವನದ ಕಥೆ. ಡೈರೆಕ್ಟರ್ ಹರಿಪ್ರಸಾದ್ ಜಯಣ್ಣ. ಭಟ್ಟರ ಗರಡಿಯವರೇ. ಶಾಮನೂರು ಕುಟುಂಬದ ಪೃಥ್ವಿ ಹೀರೋ. ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ಎಂಬ ಇಬ್ಬರು ನಾಯಕಿಯರು. ಮೊಬೈಲು, ಇಂಟರ್‍ನೆಟ್ಟು.. ಇಲ್ಲದ ಕಾಲದ 90ರ ದಶಕದ ಲವ್ ಸ್ಟೋರಿ. ಯೋಗರಾಜ್ ಭಟ್ ಪತ್ರಕರ್ತರಿಗೆ ಎದುರಾಗಿದ್ದು ಇದೇ ಪದವಿ ಪೂರ್ವ ಟೀಸರ್ ರಿಲೀಸ್ ಪ್ರೋಗ್ರಾಮಿನಲ್ಲಿ.
ಅಲ್ಲಿ ಯೋಗರಾಜ್ ಭಟ್ ಇದು ನಮ್ಮ ಸಿನಿಮಾ. ಈ ಸಿನಿಮಾದಲ್ಲಿ ನಾನು ನನ್ನ ಪಿಯು ದಿನಗಳನ್ನು ನೆನಪಿಸಿಕೊಂಡೆ. ಸಿನಿಮಾ ಚೆನ್ನಾಗಿದೆ. ಹೊಸ ಹುಡುಗರು ಸಖತ್ತಾಗಿ ನಟಿಸಿದ್ದಾರೆ ಎಂದೆಲ್ಲ ಹೊಗಳಿದರು. ಅದೆಲ್ಲ ಮುಗಿದ ಮೇಲೆ ರಾಘವೇಂದ್ರ ಹುಣಸೂರು ಮತ್ತು ಯೋಗರಾಜ್ ಭಟ್ಟರ ನಡುವಿನ ಆಡಿಯೋ ಬಗ್ಗೆ ಪ್ರಸ್ತಾಪವಾಯ್ತು. ಆಡಿಯೋದಲ್ಲಿ ಅಷೆಲ್ಲ ಕೆಂಡವಾಗಿದ್ದ ಯೋಗರಾಜ್ ಭಟ್ಟರು ಆ ಪ್ರಶ್ನೆಗೆ ಮಾತ್ರ ಅದು ಫ್ರೆಂಡ್‍ಶಿಪ್ಪು ಬಿಡ್ರಿ.. ಎಂದು ಜಾರಿಕೊಂಡರು. ಇನ್ನೊಮ್ಮೆ ಹೇಳೋಣ.. ಇದು ಅದಕ್ಕೆ ಸೂಕ್ತ ಸಮಯ ಅಲ್ಲ ಎಂದರು. ಅಂದರೆ ಆ ಅಡಿಯೋದಲ್ಲಿ ಇದೇ ಪದವಿಪೂರ್ವದ ಪ್ರಸ್ತಾಪವೂ ಇತ್ತು. ಆದರೆ ಅದೇ ಪದವಿಪೂರ್ವ ಟೀಸರ್ ಬಿಡುಗಡೆಯಲ್ಲಿ ಇದು ಇಲ್ಲಿಗೆ ಸಂಬಂಧಪಟ್ಟ ವಿಷಯ ಅಲ್ಲ ಎಂದುಬಿಟ್ಟರು ಭಟ್ಟರು. ಮತ್ತೊಮ್ಮೆ ಗೆಳೆತನದ ಮಾತು ಹೇಳಿದರು. ಗೆಳೆತನ ಇದ್ದ ಕಡೆ ಇದೆಲ್ಲ ಸಾಮಾನ್ಯ ಎಂಬಂತೆ ಮಾತನಾಡಿದರು.

ಹಾಗಾದರೆ ಪದವಿಪೂರ್ವ ಚಿತ್ರವನ್ನು ಜೀಟಿವಿಗೇ ಕೊಟ್ಟರಾ? ಖರೀದಿ ಪ್ರಕ್ರಿಯೆ ಮುಗೀತಾ? ವಿವಾದ ಬಗೆಹರೀತಾ? ಗರಡಿ, ಕರಟಕ ದಮನಕ ಚಿತ್ರಗಳ ರೈಟ್ಸ್ ಪ್ರಕ್ರಿಯೆಯೂ ಕಂಪ್ಲೀಟ್ ಆಯ್ತಾ? ರಾಘವೇಂದ್ರ ಹುಣಸೂರು ಮತ್ತು ಯೋಗರಾಜ್ ಭಟ್ಟರ ನಡುವೆ ನಡೆದಿದ್ದೇನು? ನಿಜಕ್ಕೂ ಏನಾಯ್ತು? ಏನಾಗಿತ್ತು? ವಿವಾದ ಬಗೆಹರಿದಿದ್ದು ಹೇಗೆ? ಬಗೆ ಹರಿಸಿದ್ದು ಯಾರು? ಈ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. ಹಾಗಾದರೆ ತಮ್ಮ ಬ್ಯುಸಿನೆಸ್ ಸಲೀಸ್ ಮಾಡಿಕೊಳ್ಳೋಕೆ ಮಾಧ್ಯಮಗಳನ್ನು ಯೋಗರಾಜ್ ಭಟ್ ಬಳಸಿಕೊಂಡರಾ? ಪ್ರಶ್ನೆಗಳು ಮೂಡೋದು ಸಹಜ. ಉತ್ತರ ಹೇಳ್ರೀ ಭಟ್ರೆ ಅಂದ್ರೆ.. ಯಾವನಿಗ್ಗೊತ್ತು.. ಅಂದ್ರೆ ಕಷ್ಟ.



