ಹೆಡ್ ಬುಷ್ ವಿವಾದವಂತೂ ಆಗಿದೆ. ಡಾಲಿ ಧನಂಜಯ್ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರೂ ಬಹುತೇಕ ಸಮುದಾಯದ ಹಿರಿಯರು ಅಗತ್ಯವಿಲ್ಲ ಎಂದ ಹಿನ್ನೆಲೆಯಲ್ಲಿ ಕ್ಷಮೆಯನ್ನೇನೂ ಕೇಳಿಲ್ಲ. ಅಂದಹಾಗೆ ಇದು ಡಾಜ್ ಜೈರಾಜ್ ಬಯೋಪಿಕ್. ಚಿತ್ರದಲ್ಲೇನೋ ವೀರಗಾಸೆ ವೇಷ ತೊಟ್ಟು ಬಂದ ರೌಡಿಗಳು ಜೈರಾಜ್ ಮೇಲೆ ಅಟ್ಯಾಕ್ ಮಾಡ್ತಾರೆ. ಜೈರಾಜ್ ಅವರನ್ನು ಎದುರಿಸಿ ಹೊಡೆದಾಡುತ್ತಾರೆ. ಒದೆಯುತ್ತಾರೆ. ಇದು ಸಿನಿಮಾದಲ್ಲಿರೋ ದೃಶ್ಯ.

ಹಾಗಾದರೆ ನಿಜ ಜೀವನದಲ್ಲಿ ಜೈರಾಜ್ ಮೇಲೆ ಈ ರೀತಿಯಲ್ಲಿಯೇ ಅಟ್ಯಾಕ್ ನಡೆದಿತ್ತಾ?
ಈ ಬಗ್ಗೆ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರೋ ಒಂದು ಕಾಲದ ರೌಡಿ, ಹಾಲಿ ಪತ್ರಕರ್ತರೂ ಆಗಿರುವ ಚಿತ್ರ ನಿರ್ದೇಶಕರೂ ಆಗಿರುವ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. ರಿಯಲ್ ಲೈಫ್ನಲ್ಲಿ ಅಟ್ಯಾಕ್ ನಡೆದಿದ್ದು ನಿಜ. ತಿಗಳರ ಪೇಟೆಯಲ್ಲಿ ಕೊಲೆಗೆ ಯತ್ನಿಸಿದ್ದೂ ಸತ್ಯ.ವೀರಗಾಸೆ ವೇಷ ಹಾಕಿಕೊಂಡು ಮಾಡಿದ ಅಟ್ಯಾಕ್ ಆಗಿರಲಿಲ್ಲ. ಅದು ನಮ್ಮ ಸೃಜನಶೀಲತೆ. ಕ್ರಿಯೇಟಿವಿಟಿ. ಆದರೆ ಎಲ್ಲಿಯೂ ವೀರಗಾಸೆಗಾಗಲೀ, ಕರಗಕ್ಕಾಗಲೀ ಅವಮಾನವಾಗದಂತೆ ಅಪಚಾರವಾಗದಂತೆ ಸಿನಿಮಾ ಮಾಡಿದ್ದೇವೆ ಎಂದಿದ್ದಾರೆ ಅಗ್ನಿ ಶ್ರೀಧರ್.
ಯಾವ ಕಾರಣಕ್ಕೂ ಸಿನಿಮಾದ ಯಾವುದೇ ಸೀನ್ ಕಟ್ ಮಾಡಲ್ಲ. ದೃಶ್ಯ ತೆಗೆಯುವುದೂ ಇಲ್ಲ. ಕೋರ್ಟ್ ತೀರ್ಮಾನಕ್ಕೆ ಬದ್ಧ. ಅವರು ತೆಗೆಯಿರಿ ಎಂದರೆ ತೆಗೆಯುತ್ತೇವೆ. ಇಲ್ಲ ಅಂದ್ರೆ ಇಲ್ಲ. ಯಾರೋ ಕೆಲವರು ಹೇಳಿದ ಕಾರಣಕ್ಕೆ ತೀರ್ಮಾನ ಮಾಡೋಕಾಗಲ್ಲ. ಬಗ್ಗೋಕಾಗಲ್ಲ ಎಂದಿದ್ದಾರೆ ಅಗ್ನಿ ಶ್ರೀಧರ್.



