ರಶ್ಮಿಕಾ ಮಂದಣ್ಣ. ಅನುಮಾನವೇ ಇಲ್ಲ, ಈಕೆ ಈಗ ಪ್ಯಾನ್ ಇಂಡಿಯಾ ಸ್ಟಾರ್. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಘಟಾನುಘಟಿ ನಟರ ಜೊತೆ ನಟಿಸಿರೋ ರಶ್ಮಿಕಾ ಮಂದಣ್ಣ ಅವರನ್ನ ಕಂಡರೆ ಒಂದಿಷ್ಟು ಜನಕ್ಕೆ ಇಷ್ಟವಾಗಲ್ಲ. ಇಷ್ಟಪಡುವವರಿಗೂ ಕೊರತೆಯಿಲ್ಲ. ಇತ್ತೀಚೆಗೆ ತಾನೇ ತನ್ನನ್ನು ವಿನಾಕಾರಣ ಟ್ರೋಲ್ ಮಾಡಬೇಡಿ ಎಂದು ಉದ್ದುದ್ದನೆ ಪತ್ರ ಬರೆದಿದ್ದ ರಶ್ಮಿಕಾ ಮಂದಣ್ಣ, ಮತ್ತೊಮ್ಮೆ ಅಂತದ್ದೇ ಪ್ರಮಾದ ಮಾಡಿ ಸಿಕ್ಕಿಬಿದ್ದಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ಯೂಟ್ಯೂಬ್ ಚಾನೆಲ್ ಕರ್ಲಿ ಟೇಲ್ಸ್ ಗೆ ಸಂದರ್ಶನ ಕೊಟ್ಟಿದ್ದರು. ಆಗ ತಮ್ಮ ಸಿನಿಮಾ ಜರ್ನಿಯ ಬಗ್ಗೆಯೂ ಮಾತನಾಡಿದ್ದರು. ಆ ವೇಳೆ ನೀವು ಚಿತ್ರರಂಗಕ್ಕೆ ಬಂದಿದ್ದು ಹೇಗೆ ಅನ್ನೋ ಪ್ರಶ್ನೆಗೆ ರಶ್ಮಿಕಾ ಬೆರಗಾಗುವಂತ ಉತ್ತರ ಕೊಟ್ಟಿದ್ದರು.
ನನಗೆ ಸಿನಿಮಾ ಇಷ್ಟ ಇರಲಿಲ್ಲ. ಆಗ ತಾನೇ ಟೈಮ್ಸ್ ಆಫ್ ಇಂಡಿಯದಲ್ಲಿ ನನ್ನನ್ನು ಫ್ರೆಶ್ ಫೇಸ್ ಎಂದು ಆಯ್ಕೆ ಮಾಡಿದ್ದರು. ಅದನ್ನು ನೋಡಿ ಪ್ರೊಡಕ್ಷನ್ ಸ್ಟುಡಿಯೋದವರು ಫೋನ್ ಮಾಡಿದ್ದರು. ನನಗೆ ಇಷ್ಟ ಇಲ್ಲ ಎಂದಿದ್ದೆ. ನಂತರ ನಿರ್ದೇಶಕರು ನೀವೇ ಬೇಕು ಎಂದು ಫೋನ್ ಮಾಡಿ ದುಂಬಾಲು ಬಿದ್ದರು. ಒಂದ್ಸಲ ನೊಡೋಣ ಎಂದು ಅಡಿಷನ್ ಕೊಟ್ಟೆ. ಅದನ್ನೂ ಬೇಕಾಬಿಟ್ಟಿ ಕೊಟ್ಟಿದ್ದೆ. ಆದರೆ ನನ್ನನ್ನೇ ಆಯ್ಕೆ ಮಾಡಿದರು. ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಮೇಲೆ ನನ್ನನ್ನು ಪಾತ್ರದ ಮೂಲಕವೇ ಗುರುತಿಸಿದರು.. ಹೀಗೇ ಹೇಳುತ್ತಾ ಹೋಗುತ್ತಾರೆ ರಶ್ಮಿಕಾ. ಅಪ್ಪಿತಪ್ಪಿಯೂ ಪರಂವಾ ಸ್ಟುಡಿಯೋಸ್ ಹೆಸರನ್ನಾಗಲೀ.. ರಕ್ಷಿತ್ ಶೆಟ್ಟಿ ಹೆಸರನ್ನಾಗಲೀ.. ಹೇಳಲ್ಲ. ನಿರ್ದೇಶಕ ರಿಷಬ್ ಶೆಟ್ಟಿಯ ಹೆಸರನ್ನೂ ಹೇಳಲ್ಲ. ಪರಂವಾ ಸ್ಟುಡಿಯೋಸ್ ಹೆಸರು ಹೇಳುವಾಗ ಕೇವಲ ಕ್ಲಿಕ್ ಕ್ಲಿಕ್ ಸಿಗ್ನಲ್ ತೋರಿಸಿ ಮುಗಿಸಿದ್ದರು. ಅಲ್ಲಿಗೆ ಆ ವಿಷಯ ಮುಗಿಯಿತು.

ಆದರೆ ಇತ್ತೀಚೆಗೆ ಇನ್ನೊಂದು ಸಂದರ್ಶನದಲ್ಲಿ ರಿಷಬ್ ಶೆಟ್ಟಿ ತಮ್ಮದೇ ಸ್ಟೈಲಿನಲ್ಲಿ ಉತ್ತರವನ್ನೂ ಕೊಟ್ಟಿದ್ದಾರೆ,.ರಿಷಬ್ ಈಗ ಕಾಂತಾರದ ಮೂಲಕ ಡಿವೈನ್ ಸ್ಟಾರ್ ಪಟ್ಟಕ್ಕೇರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ರಿಷಬ್ ಅವರನ್ನ ಗುಲ್ಟಿ ಡಾಟ್ ಕಾಮ್ ಅನ್ನೋ ಯೂ ಟ್ಯೂಬ್ ಚಾನೆಲ್ ಸಂದರ್ಶನ ಮಾಡಿತ್ತು. ಅವರು ಸಮಂತಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಹಾಗೂ ರಶ್ಮಿಕಾ ಮಂದಣ್ಣ ಹೆಸರು ಹೇಳಿ, ಇವರಲ್ಲಿ ಯಾರ ನಟನೆ ಇಷ್ಟ ಎಂಬ ಪ್ರಶ್ನೆ ಕೇಳಿದ್ದರು. ಸಮಂತಾ ಹಾಗೂ ಸಾಯಿ ಪಲ್ಲವಿ ನಟನೆ ಇಷ್ಟ ಎಂದಿದ್ದ ರಿಷಬ್ ಶೆಟ್ಟಿ, ನನಗೆ ಹೊಸ ಕಲಾವಿದರ ಜೊತೆ ನಟಿಸುವುದು ಇಷ್ಟ. ಸ್ಕ್ರಿಪ್ಟ್ ಮುಗಿದ ಮೇಲೆಯೇ ನಾನು ಪಾತ್ರಕ್ಕೆ ಸೂಕ್ತವಾದ ಕಲಾವಿದರನ್ನು ಹುಡುಕೋದು ಎಂದಿದ್ದರು. ನಂತರ ನನಗೆ ನೀವು ಹೇಳಿದ ಅಷ್ಟೂ ಹೆಸರುಗಳಲ್ಲಿ ಈ ರೀತಿಯ ನಟಿಯರು ಇಷ್ಟ ಆಗಲ್ಲ ಎಂದಿದ್ದರು. ಆದರೆ ರಿಷಬ್ ಶೆಟ್ಟಿ ಎಲ್ಲಿಯೂ ರಶ್ಮಿಕಾ ಮಂದಣ್ಣ ಹೆಸರು ಹೇಳಲಿಲ್ಲ.
ಅಂದ ಹಾಗೆ ರಶ್ಮಿಕಾ ಮಂದಣ್ಣ ಹಳೆಯ ಸಂದರ್ಶನಗಳಲ್ಲಿ ತಾವು ಸಿನಿಮಾಗೆ ಆಯ್ಕೆಯಾಗಿದ್ದನ್ನು ಕನಸುಗಳನ್ನು ಹೇಳಿಕೊಂಡಿದ್ದರು. ಇದ್ದಕ್ಕಿದ್ದಂತೆ ಅದಕ್ಕೆ ಉಲ್ಟಾ ಆಗಿ ಹೊಸ ಕಥೆ ಹೇಳಿದ್ದೇಕೆ ಎನ್ನುವುದು ಅಭಿಮಾನಿಗಳ ಪ್ರಶ್ನೆ. ರಶ್ಮಿಕಾ ಮಂದಣ್ಣ ಅವರು ನನ್ನನ್ನು ಟ್ರೋಲ್ ಮಾಡಬೇಡಿ ಎಂದು ಹೇಳುವುದಕ್ಕಿಂತ ಹೆಚ್ಚಾಗಿ, ಪತ್ರ ಬರೆಯುವ ಬದಲು.. ಟ್ರೋಲ್‍ಗೆ ಆಹಾರ ಕೊಡುವುದನ್ನು ಬಿಟ್ಟರೆ ಒಳ್ಳೆಯದು. ಇನ್ನು ರಿಷಬ್ ವಿಚಾರಕ್ಕೆ ಬಂದರೆ ನಗುನಗುತ್ತಲೇ ಟಾಂಟ್ ಕೊಡುವುದರಲ್ಲಿ ರಿಷಬ್ ಎತ್ತಿದ ಕೈ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ನೋ ಕಮೆಂಟ್ಸ್.



