ಕನ್ನಡ ಚಿತ್ರರಂಗ ಆತನನ್ನು ಕನಸುಗಾರ ಎಂದೇ ಕರೆಯುತ್ತದೆ. ಆತ ಸೃಷ್ಟಿಸಿದ ಕನಸುಗಳು ಅದೆಷ್ಟೋ.. ಅಂತಹ ರವಿಚಂದ್ರನ್ ಬಗ್ಗೆ ಇತ್ತೀಚೆಗೆ ದೊಡ್ಡ ಸುದ್ದಿಗಳು ಬಂದಿದ್ದವು. ರವಿಚಂದ್ರನ್ ತಮ್ಮ ರಾಜಾಜಿನಗರ ಮನೆ ಬಿಟ್ಟು ಹೋಗಿದ್ದೇ ಎಲ್ಲದಕ್ಕೂ ಮುನ್ನುಡಿ ಬರೆದಿತ್ತು. ರವಿಚಂದ್ರನ್ ಸಾಲ ಮಾಡಿದ್ದಾರಂತೆ. ಬಡ್ಡಿ ಕಟ್ಟೋಕೂ ಆಗ್ತಿಲ್ವಂತೆ. ಸಿನಿಮಾಗಳು ಮತ್ತೆ ಮತ್ತೆ ಸೋತ ಕಾರಣ ದುಡ್ಡಿಲ್ಲದೆ ಮನೆ ಮಾರಿದ್ದಾರಂತೆ. ಏನೋ.. ಇಂಡಸ್ಟ್ರಿಯವರೇ ಮುಂದೆ ನಿಂತು ಸಹಾಯ ಮಾಡಿದ್ದಾರಂತೆ. ಅವರು ಹೆಲ್ಪ್ ಮಾಡಿದ್ರಂತೆ. ಇವರು ಕೋಟಿ ಕೋಟಿ ಕೊಟ್ರಂತೆ. ಹೀಗೆ.. ಇಡೀ ಸುದ್ದಿಗಳೋ.. ಸುದ್ದಿಗಳು. ಅದಕ್ಕೆ ತಕ್ಕಂತೆ ರವಿಚಂದ್ರನ್ ಜೀ ಕನ್ನಡ ರಿಯಾಲಿಟಿ ಶೋನಲ್ಲಿ ಭಾವುಕರಾಗಿ ಆಡಿದ ಮಾತುಗಳು ವೈರಲ್ ಆದವು. ರವಿಚಂದ್ರನ್ ಓಪನ್ ಆಗಿ ಹೇಳಿದರೆ, ಅಭಿಮಾನಿಗಳು ಅಯ್ಯೋ ಪಾಪ ಎಂದುಕೊಂಡರು. ಆದರೆ, ಸುದ್ದಿಗಳಿಗೇನೂ ಬರವಿರಲಿಲ್ಲ. ಈಗ ಅವುಗಳಿಗೆಲ್ಲ ರವಿಚಂದ್ರನ್ ಫುಲ್ ಸ್ಟಾರ್ ಇಟ್ಟಿದ್ದಾರೆ.

ಎಲ್ಲ ಟಿವಿಗಳಲ್ಲಿ ಹೇಳ್ಕೊಂಡ್ ಓಡಾಡ್ತಿದ್ದಾರೆ. ಅವರು ಬಂದು ಸಹಾಯ ಮಾಡಿದ್ರು. ಇವರು ಬಂದು ಹೆಲ್ಪ್ ಮಾಡಿದ್ರು ಅಂತಾ. ಯಾರು ಬಂದಿಲ್ಲ ರೀ. ಎಲ್ಲ ಸುಳ್ಳು. ಆ ಪರಿಸ್ಥಿತಿ ನನಗಿನ್ನೂ ಬಂದಿಲ್ಲ. ಬೇಕಾಗೂ ಇಲ್ಲ. ಬರುವುದೂ ಬೇಡ. ಸದ್ಯಕ್ಕೆ ಆ ಪರಿಸ್ಥಿತಿ ಇಲ್ಲ ಎಂದಿದ್ದಾರೆ ರವಿಚಂದ್ರನ್. ಜೊತೆಯಲ್ಲಿರೋ ಸಂಬಂಧಿಕರು ಸಹಾಯ ಬೇಕಾ ಎಂದು ಕೇಳಿಲ್ಲ. ಆದರೆ ಸ್ನೇಹಿತರು ಹಣ ಕೊಟ್ಟಿದ್ದಾರೆ. ಸಾಲವಾಗಿ ಕೊಟ್ಟ ಹಣವನ್ನು ವಾಪಸ್ ಕೊಟ್ಟಿದ್ದೇನೆ. ಆದರೆ, ಯಾರೊಬ್ಬರೂ ಕೊಟ್ಟ ದುಡ್ಡು ವಾಪಸ್ ಕೊಡಿ ಎಂದು ಕೇಳಿಲ್ಲ. ಎಷ್ಟೋ ಜನ ಅಣ್ಣಾ ದುಡ್ಡು ತಗೊಳ್ಳಿ. ಸಿನಿಮಾ ಮಾಡ್ಕೊಡಿ ಅಂತಾರೆ. ನಾನು ದುಡ್ಡು ಸಂಪಾದನೆ ಮಾಡಲಿಲ್ಲ, ನಿಜ. ಆದರೆ ಜನರನ್ನು ಸಂಪಾದಿಸಿದ್ದೇನೆ ಎಂದಿದ್ದಾರೆ ರವಿಚಂದ್ರನ್.
ಬೆಂಗಳೂರಿನಲ್ಲಿ ನಡೆದ ತಿಲಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್ ಸಿನಿಮಾದಿಂದಲೇ ದುಡಿದಿದ್ದೇನೆ. ಸಿನಿಮಾದಿಂದಲೇ ಕಳೆದುಕೊಂಡೂ ಇದ್ದೇನೆ. ಇಲ್ಲಿರೋ ದಿಲ್ ಸೇ ದಿಲೀಪ್ (ಕಾರ್ಯಕ್ರಮದಲ್ಲಿದ್ದವರು), ಕೊಟ್ರೇಶಿಯಂತಹವರು ಹಣ ತಗೊಳ್ಳಿ ಅಂಥಾರೆ. ಆದರೆ ಕೊಡೋದ್ರಲ್ಲಿ ಇರೋ ತೃಪ್ತಿ ತಗೊಳ್ಳೋದ್ರಲ್ಲಿ ಇಲ್ಲ ಎಂದಿದ್ದಾರೆ.



