ಆ ದಿನಗಳು ಖ್ಯಾತಿಯ ನಟ ಚೇತನ್ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಂದಲ್ಲ. ಬಾಯಿ ಚಪಲದಿಂದ. ಕಾಂತಾರದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ. ಭೂತಕೋಲ, ದೈವಾರಾಧನೆ ಇವ್ಯಾವುವೂ ಹಿಂದೂಗಳದ್ದಲ್ಲ. ಹಿಂದೂಗಳೇ ಬೇರೆ. ಬುಡಕಟ್ಟು ಜನಗಳೇ ಬೇರೆ. ವೈದಿಕತೆ, ಬ್ರಾಹ್ಮಣ್ಯವನ್ನು ಕಾಂತಾರದ ಮೂಲಕ ಹೇರಲಾಗುತ್ತಿದೆ ಎಂದಿದ್ದರು ಚೇತನ್. ರಿಷಬ್ ಶೆಟ್ಟಿ ನೋ ಕಮೆಂಟ್ಸ್ ಎಂಬ ಒಂದೇ ಉತ್ತರದಲ್ಲಿ ಚೇತನ್ ಅಳತೆಗೋಲು ಮಾಡಿದ್ದರು.
ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್ ಸೇರಿದಂತೆ ಹಿಂದೂ ಪರ ಹೋರಾಟಗಾರರು, ಮುಕುಂದ್ ಶೆಟ್ಟಿ, ಸ್ವರಾಜ್ ಶೆಟ್ಟಿ, ರಿಷಬ್ ಶೆಟ್ಟಿ ತಂದೆ ಸೇರಿದಂತೆ ಚಿತ್ರತಂಡದವರು, ಹಲವು ದೈವಾರಾಧಕರು ಚಿತ್ರದ ಬಗ್ಗೆ ಮೆಚ್ಚಿಕೊಂಡು ಚೇತನ್‍ಗೇ ಜಾಡಿಸಿದ್ದರು. ಆದರೆ ಚೇತನ್ ಬಡಪೆಟ್ಟಿಗೆ ಬಗ್ಗುವವರಲ್ಲ. ಪೊಲೀಸ್ ಕೇಸ್ ಆದರೂ ಸುಮ್ಮನಿರುವವರಲ್ಲ.
ಸುದ್ದಿಯಾಗುತ್ತೆ ಹಾಗೂ ಸದ್ದು ಮಾಡಬಹುದು ಎಂದರೆ ಯಾವುದನ್ನೂ ಬಿಡದ ಚೇತನ್ ಹಿಂದೂ ಧರ್ಮವನ್ನು ಆಮದು ಮಾಡಿಕೊಂಡ ಧರ್ಮ ಎಂದಿದ್ದಾರೆ. ಈ ಬಾರಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನೂ ಆಮದು ಮಾಡಿಕೊಂಡ ಧರ್ಮ ಎಂದಿದ್ದಾರೆ. ಅಲ್ಲಿಗೆ ದೈವಾರಾಧಕರ ತಾಳ್ಮೆ ಅಂತ್ಯವಾಗುವ ಸೂಚನೆ ಸಿಕ್ಕಿದೆ.
ಸಂಸ್ಕೃತಿಯ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ನಾವು ಸೇವೆ ಕೊಡುವ ದೈವಗಳ ಮುಂದೆಯೇ ಪ್ರಾರ್ಥನೆ ಮಾಡುತ್ತೇವೆ. ನಮ್ಮ ಮೂಲ ಆರಾಧನೆಯ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದಿದ್ದಾರೆ ಉಡುಪಿಯ ಹಿರಿಯ ದೈವರಾಧಕ ಕುಮಾರ ಪಂಪದ. ನಟರಿಗೆ ನಟನೆ ಮಾಡಲು ಗೊತ್ತಿರಬಹುದು. ನಾವು ದೈವಾರಾಧಕರು. ನಮಗೆ ನಟಿಸಲು ಗೊತ್ತಿಲ್ಲ. ನಾವು ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದವರು. ಭೂತಾರಾಧನೆಗೆ ಇಂತಿಷ್ಟು ವರ್ಷದ ಹಿನ್ನೆಲೆ ಎಂಬ ದಾಖಲೆ ನಮ್ಮಲ್ಲಿ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು ಎಂದು ಗರಂ ಆದರು. ಕರಾವಳಿಯಾದ್ಯಂತ ಪರವ, ಪಂಪದ ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರ ಕಾಲದಿಂದ ನಾವು ಹಿಂದೂ ಸಂಪ್ರದಾಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ದೈವಗಳಿಗೆ ಮೂಲ ಶಬ್ದವೇ ತುಳು. ನಾವು ನಂಬಿಕೊಂಡ ಸತ್ಯದ ಮೂಲಕ ಚೇತನ್ ಗೆ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಹೇಳಿದರು.
ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ನಮ್ಮ ನೆಲ, ನಮ್ಮ ಕುಲ ನಮ್ಮ ಆಚರಣೆಯ ಬಗ್ಗೆ ಮಾತನಾಡುವ ಜ್ಞಾನ ಇವರಿಗೆ ಇಲ್ಲ. ವ್ಯಕ್ತಿಗತವಾಗಿ ಇವರಿಗೆ ನಾವು ಉತ್ತರ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.



