ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಿದೆ. ಪ್ರಶಸ್ತಿಯನ್ನು ಪುನೀತ್ ಅವರ ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಸ್ವೀಕರಿಸಿದರು.

ಆದರೆ ಈ ಎಲ್ಲ ಸಂಭ್ರಮಗಳ ಮಧ್ಯೆ ಕಣ್ಣು ಕುಕ್ಕಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅತ್ಯುತ್ಸಾಹ ಮತ್ತು ರಾಜಕೀಯ ಮೇಲಾಟ. ಕಾರ್ಯಕ್ರಮ ಶುರುವಾಗುವುದಕ್ಕೆ ಮೊದಲೇ ಇಡೀ ಕಾರ್ಯಕ್ರಮ ವೈಯಕ್ತಿಕ ಪ್ರತಿಷ್ಠೆಗಳ ವೇದಿಕೆಯಾಗಲಿದೆ ಎಂಬ ನಿರೀಕ್ಷೆಯಿತ್ತು. ಅದಕ್ಕೆ ಎಲ್ಲ ಕಾರಣಗಳನ್ನೂ ಬೊಮ್ಮಾಯಿ ಒದಗಿಸಿದ್ದರು.




ರಾಜ್ಯಪಾಲರಿಗೂ ಆಹ್ವಾನವಿಲ್ಲ : ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪಿಸಿದ್ದೇ ಭಾರತ ರತ್ನಕ್ಕೆ ಸಮಾನವಾಗಿ. ಭಾರತಕ್ಕೆ ಭಾರತ ರತ್ನ ಹೇಗೋ.. ಹಾಗೆಯೇ ಕರ್ನಾಟಕಕ್ಕೆ ಕರ್ನಾಟಕ ರತ್ನ ಎಂಬ ಉದ್ದೇಶದಿಂದ. ಡಾ.ರಾಜ್ ಅವರಿಗೆ ಕರ್ನಾಟಕ ರತ್ನ ಗೌರವ ಸಿಕ್ಕಾಗ ರಾಜ್ಯಪಾಲ ಖುರ್ಷಿದ್ ಅಲಂ ಖಾನ್ ಪ್ರಶಸ್ತಿ ಪ್ರದಾನ ಮಾಡಿದ್ದರು. ವೇದಿಕೆಯಲ್ಲಿ ಮುಖ್ಯಮಂತ್ರಿಗಳೂ ಇದ್ದರು. ಆದರೆ ಭಾರತರತ್ನವನ್ನು ಹೇಗೆ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೋ.. ಹಾಗೆಯೇ ಕರ್ನಾಟಕ ರತ್ನವನ್ನು ರಾಜ್ಯಪಾಲರು ಪ್ರದಾನ ಮಾಡಬೇಕಿತ್ತು. ಆದರೆ ರಾಜ್ಯಪಾಲರಿಗೆ ಆಹ್ವಾನವಿರಲಿ, ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರೂ ಇರಲಿಲ್ಲ.

ಈ ಎರಡು ಪ್ರಮಾದಗಳ ಕಥೆ ಬೇರೆ. ಆಮೇಲೆ ಮಳೆ ಬಂತು. ಅನಿರೀಕ್ಷಿತ. ಏನೂ ಮಾಡೋಕಾಗಲ್ಲ ಎನ್ನುವ ಕಾರಣ ಕೊಡುವುದು ಸುಲಭ. ಹವಾಮಾನ ಇಲಾಖೆಯವರು ಹಿಂದಿನ ದಿನವೇ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅಂತಹ ಸ್ಥಿತಿಯಲ್ಲಿ ಪರ್ಯಾಯ ಮಾರ್ಗ ಹುಡುಕಬೇಕಿದ್ದ ಸರ್ಕಾರ ವೇದಿಕೆ ಬಳಿ ಬರುವವರೆಗೂ ಮಳೆ ಬರುವವರೆಗೂ ಅದರ ಬಗ್ಗೆ ಯೋಚಿಸಲೇ ಇಲ್ಲ. ಕನಿಷ್ಠ ಜರ್ಮನ್ ಟೆಂಟ್ ವ್ಯವಸ್ಥೆಯಾಗಿದ್ದರೂ ವೇದಿಕೆಯಲ್ಲಿ ಅತಿಥಿಗಳು ಮಳೆಯಲ್ಲಿ ನಿಲ್ಲಬೇಕಿರುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಅದನ್ನು ಬಿಡಿ, ಕೊನೆಗೆ ವಿಧಾನಸೌಧದ ಒಳಗಿನ ಸಭಾಂಗಣವನ್ನು 2 ಗಂಟೆಯಲ್ಲಿ ಸಿದ್ಧ ಮಾಡಬಹುದಿತ್ತು. ಆ ಬಗ್ಗೆಯೂ ಯೋಚನೆ ಮಾಡದೆ ಹೆಮ್ಮೆಯ ವೇದಿಕೆಯನ್ನು ಆಟದ ವೇದಿಕೆಯಾಗಿ ಬಳಸಿಕೊಂಡಿತು. ಮುಖ್ಯಮಂತ್ರಿಗಳೇ ನಿರೂಪಣೆಗೆ ನಿಂತು ಸಮಯವಿಲ್ಲ ಎಂದು ಹೇಳಿಕೊಂಡೇ ಉದ್ದುದ್ದ ಭಾಷಣ ಮಾಡುತ್ತಾ ಕಾಲ ಕಳೆದರು. ಆರ್.ಅಶೋಕ್ ಕೂಡಾ ಅಷ್ಟೆ. ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ವೇದಿಕೆಯಲ್ಲಿ ಮೈಕಿಗಾಗಿ ಹೋರಾಟ ನಡೆಸಿದ್ದು ನಗು ಬರಿಸುತ್ತಿತ್ತು.
ದೊಡ್ಮನೆಯ ಸದಸ್ಯರಾದ ಶಿವ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ವೇದಿಕೆಗೆ ಯಾವಾಗ ಬಂದರು, ಯಾವಾಗ ಹೋದರು ಎನ್ನುವುದನ್ನು ನೋಡುಗರೇ ಹುಡುಕಿಕೊಳ್ಳಬೇಕಾಯಿತು. ಪುನೀತ್ ಅವರ ಪರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಗೌರವ ಸ್ವೀಕರಿಸಬೇಕಿದ್ದ ಅಶ್ವಿನಿಯವರನ್ನು ವೇದಿಕೆಯಲ್ಲಿ ಕೂರಿಸಲು ಅತಿಥಿಯಾಗಿ ಬಂದಿದ್ದ ಎನ್.ಟಿ.ಆರ್. ಅವರೇ ಕುರ್ಚಿ ಒರೆಸಿ ಕೂರಿಸಬೇಕಾಯ್ತು. ಎನ್.ಟಿ.ಆರ್. ಸಜ್ಜನಿಕೆ ಎಂದು ಗೌರವಿಸೋಣ. ಆದರೆ ಒಂದು ಹೆಮ್ಮೆಯ ಪುರಸ್ಕಾರ ನೀಡಬೇಕಿರುವ ಸರ್ಕಾರದ ವರ್ತನೆ ಮಾತ್ರ ಇದಾಗಿರಲಿಲ್ಲ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸದಸ್ಯ ಸುನಿಲ್ ಕುಮಾರ್ ಎಲ್ಲಿ ಮರೆಯಾಗಿದ್ದರೋ ಏನೋ.. ಒಟ್ಟಿನಲ್ಲಿ ರಾಜಕೀಯ ಮೇಲಾಟದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಹೆಮ್ಮೆಯ ಸಮಾರಂಭ ಘನತೆಯಿಲ್ಲದೆ ಸೊರಗಬೇಕಾಯಿತು.



