ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮಧ್ಯೆ ಪ್ರೀತಿ ಈಗ ಸ್ಯಾಂಡಲ್ವುಡ್ ಸೆನ್ಸೇಷನ್. ಇಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವುದು ಕನ್ನಡ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿರುವ ಸುದ್ದಿ. ಈಗ ಒಂದೊಂದೇ ಸಾಕ್ಷಿಗಳು ಹೊರಬೀಳುತ್ತಿವೆ. ಮೊದಲನೇ ಸಾಕಿ ಎಂದರೆ ಈ ಸುದ್ದಿ ಹೊರಬಿದ್ದ ದಿನದಿಂದ ಎಲ್ಲ ಟಿವಿ ಚಾನೆಲ್ಲುಗಳು, ವೆಬ್ಸೈಟುಗಳು ಈ ಸುದ್ದಿಯನ್ನು ದೊಡ್ಡದಾಗಿಯೇ ವರದಿ ಮಾಡಿವೆ. ಈ ಹಿಂದೆ ಇಂತಹ ವರದಿಗಳು ಬಂದಾಗಲೆಲ್ಲ ಸ್ಪಷ್ಟನೆ ಕೊಡುತ್ತಿದ್ದವರು ಮೌನಕ್ಕೆ ಶರಣು ಹೋಗಿದ್ದಾರೆ. ನೋ ರಿಯಾಕ್ಷನ್.

ಮೌನಂ ಸಮ್ಮತಿ ಲಕ್ಷಣಂ ಎಂದುಕೊಳ್ಳುತ್ತಿರೊ ಮಾಧ್ಯಮದವರಿಗೆ ಇವರಿಬ್ಬರೂ ಪ್ರೀತಿಗೆ ಬಿದ್ದಿದ್ದು ಯಾವಾಗ ಎಂಬ ಪ್ರಶ್ನೆ ಹುಟ್ಟಿದೆ. ವರಿಬ್ಬರೂ ತೆಲುಗಿನ ಎವರು ಚಿತ್ರದ ರೀಮೇಕ್ನಲ್ಲಿ ನಟಿಸುತ್ತಿದ್ದಾರೆ. ದಿಗಂತ್-ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಲೀಡ್ನಲ್ಲಿರುವ ಸಿನಿಮಾ ಅದು. ಆ ಸಿನಿಮಾದಲ್ಲಿಯೇ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಪ್ರೀತಿಗೆ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮೂಗುತಿಯ ಕಥೆಯಷ್ಟೇ ಅಲ್ಲ, ಈಗ ಇವರಿಬ್ಬರೂ ಒಟ್ಟಿಗೇ ದುಬೈನಲ್ಲಿ ಒಟ್ಟೊಟ್ಟಿಗೇ ಓಡಾಡಿ ಶಾಪಿಂಗ್ ಮಾಡಿರುವ ಫೋಟೋಗಳು ಹೊರಬಿದ್ದಿವೆ. ಇವು ಏರ್ಪೋರ್ಟ್ನಲ್ಲಿರುವ ಫೋಟೋಗಳು. ಇಬ್ಬರೂ ಮಾಸ್ಕ್ ತೆಗೆದಿಲ್ಲ. ಆದರೆ ಅದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅನ್ನೋದ್ರಲ್ಲೇನೂ ಅನುಮಾನವಿಲ್ಲ.
ಇತ್ತೀಚೆಗೆ ಚಿತ್ರರಂಗದಲ್ಲಿ ಮದುವೆ ಓಲಗದ ಸದ್ದು ಜೋರಾಗಿಯೇ ಕೇಳುತ್ತಿದೆ. ಇತ್ತೀಚೆಗಷ್ಟೇ ಆದಿತಿ ಪ್ರಭುದೇವ ಮತ್ತು ಯಶಸ್ ಮದುವೆಯಾಯ್ತು. ಅಭಿಷೇಕ್ ಅಂಬರೀಷ್-ಪ್ರಸಾದ್ ಬಿದ್ದಪ್ಪ ಮಗಳು ಆವಿವಾ ನಿಶ್ಚಿತಾರ್ಥದ ಸುದ್ದಿಯೂ ಜೋರಾಗಿದೆ. ಕನ್ನಡದಲ್ಲಿಯೂ ನಟಿಸಿದ್ದ ಹನ್ಸಿಕಾ ಮೊಟ್ವಾನಿ ಕೂಡಾ ಮದುವೆಯಾಗುತ್ತಿದ್ದಾರೆ. ಪ್ರಭಾಸ್, ಕೃತಿ ಸನೂನ್ ಅವರಿಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ ಆದಿಪುರುಷ್ ಟೀಮಿನಿಂದ ಹೊರಬಿದ್ದಿದೆ. ಇದರ ನಡುವೆಯೇ ನಮ್ಮ ಚಿತ್ರಂಗದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯ ಸಂಭ್ರಮವೇ ಬೇರೆ.



