ಹೊಂಬಾಳೆ ಫಿಲಮ್ಸ್ ದಾಖಲೆಗಳ ಪಟ್ಟಿಗೆ ಹೊಸದೊಂದು ಸೇರ್ಪಡೆ. ಕಾಂತಾರ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕಿದೆ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಅಲ್ಲ. ಸದ್ಯಕ್ಕೆ ಆ ದಾಖಲೆಯ ಹತ್ತಿರಕ್ಕೂ ಹೋಗೋಕಾಗಲ್ಲ. ಅದು ಸೃಷ್ಟಿಸಿರುವ ಇತಿಹಾಸ ಅಂತದ್ದು. ಆದರೆ 25 ದಿನಗಳು ಕಳೆಯುವಷ್ಟರಲ್ಲಿ ಹೊಸ ದಾಖಲೆಯನ್ನ ತನ್ನ ಮುಡಿಗೇರಿಸಿಕೊಂಡಿದೆ ಕಾಂತಾರ ಮತ್ತು ಹೊಂಬಾಳೆ ಫಿಲಮ್ಸ್.
25 ದಿನಗಳಲ್ಲಿ 77 ಲಕ್ಷ ; ಇದು ಹೊಂಬಾಳೆಯನ್ನು ಈವರೆಗೆ ನೋಡಿದವರ ಸಂಖ್ಯೆ. ಹೊಂಬಾಳೆ ಬ್ಯಾನರ್‌ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಲನಚಿತ್ರ ಎಂಬುದು ಕಾಂತಾರಕ್ಕೆ ಸಿಕ್ಕ ಹೆಚ್ಚುಗಾರಿಕೆ.
ಈವರೆಗೆ ಹೊಂಬಾಳೆಯವರ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿನಿಮಾವನ್ನು 65 ಲಕ್ಷ ಜನ ವೀಕ್ಷಿಸಿದ್ದರು. ಅ ದಾಖಲೆಯನ್ನು ಕೆಜಿಎಫ್ ಬ್ರೇಕ್ ಮಾಡಿತ್ತು. ಕೆಜಿಎಫ್ ಸಿನಿಮಾವನ್ನು 75 ಲಕ್ಷ ಜನ ವೀಕ್ಷಿಸಿದ್ದರು. ಅದು ಕೆಜಿಎಫ್ ಚಾಪ್ಟರ್ 1 ಸೃಷ್ಡಿಸಿದ್ದ ದಾಖಲೆ. ಆ ಎರಡೂ ಚಿತ್ರಗಳು ಹೊಂಬಾಳೆ ಚಿತ್ರಗಳೇ.
ಅದಾದ ನಂತರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು 72 ಲಕ್ಷ ಸಿನಿಮಾ ಪ್ರೇಮಿಗಳು ನೋಡಿ ಮೆಚ್ಚಿಕೊಂಡಿದ್ದರು. ಈಗ ಕೇವಲ 25 ದಿನಗಳಲ್ಲಿ ಕಾಂತಾರ ಚಿತ್ರವನ್ನು 25 ದಿನಗಳಲ್ಲಿ 77 ಲಕ್ಷ ವೀಕ್ಷಿಸಿದ್ದಾರೆ. ಆ ಸಂಖ್ಯೆ ಕೋಟಿ ದಾಟಿದರೂ ಅಚ್ಚರಿಯಿಲ್ಲ. ಇದು ಕೇವಲ ಕನಾಟಕದ ಲೆಕ್ಕ. ಕನ್ನಡಿಗರು ನೋಡಿರುವ ಚಿತ್ರ.
ಹೊಂಬಾಳೆ ಶುರುವಾಗಿದ್ದು ನಿನ್ನಿಂದಲೇ ಚಿತ್ರದ ಮೂಲಕ. ವಿಜಯ್ ಕಿರಗಂದೂರು ನಿರ್ಮಾಣದ ಮೊದಲ ಸಿನಿಮಾ ಅದು. 2014ರಲ್ಲಿ ರಿಲೀಸ್ ಆಗಿದ್ದ ಚಿತ್ರ, ಆದರೆ ಸೋತಿತ್ತು. ಅದಾದ ನಂತರ ಹೊಂಬಾಳೆವರು ಮಾಸ್ಟರ್‍ಪೀಸ್ ಚಿತ್ರ ಕೈಗೆತ್ತಿಕೊಂಡರು. ಯಶ್ ಜೊತೆ ಅದು ಮೊದಲ ಸಿನಿಮಾ. 35 ಕೋಟಿ ಬಿಸಿನೆಸ್ ಮಾಡಿತ್ತು. ಸೂಪರ್ ಹಿಟ್. ಅದಾದ ನಂತರ ಬಂದಿದ್ದೇ ರಾಜಕುಮಾರ. ಹೊಸ ಇತಿಹಾಸವನ್ನೇ ಬರೆದಿದ್ದ ಚಿತ್ರ 76 ಕೋಟಿ ದುಡಿದಿತ್ತು. ಕನ್ನಡಿಗರು ಮತ್ತೆ ಕುಟುಂಬ ಸಮೇತ ಬರುವಂತೆ ಮಾಡಿದ್ದ ಸಿನಿಮಾ ಅದು. ನಂತರ ಸೃಷ್ಟಿಯಾಗಿದ್ದೇ ಕೆಜಿಎಫ್ ಎಂಬ 2 ಇತಿಹಾಸ. ಎರಡೂ ಚಿತ್ರಗಳು ದಾಖಲೆ ಬರೆದವು. ಯುವರತ್ನ ಚಿತ್ರ ಕೊರೊನಾ ಸಂಕಷ್ಟ ಕಾಲದಲ್ಲಿ ಬಿಡುಗಡೆಯಾದರೂ, ಸರ್ಕಾರದ ಯಪರಾತಪರಾ ಎಡವಟ್ಟುಗಳಾದರೂ 39 ಕೋಟಿ ಬಿಸಿನೆಸ್ ಮಾಡಿತ್ತು. ಈಗ ಕಾಂತಾರ. ಹೊಸ ಇತಿಹಾಸ ಸೃಷ್ಟಿಯಾಗಿದೆ. ಇನ್ನೂ ಬರೆಯುತ್ತಲೇ ಇದೆ.



